ನಿಜಶರಣ ಶ್ರೀ ಅಂಬಿಗರ ಚೌಡಯ್ಯ ಮೂರ್ತಿ ಭಗ್ನ – ಅಖಿಲ ಭಾರತೀಯ ಕೋಲಿ ಸಮಾಜದಿಂದ ಖಂಡನೆ

ಕಲಬುರಗಿ:ಶಹಾಬಾದ ತಾಲೂಕಿನ ಮುತ್ತಗಾ ಗ್ರಾಮದಲ್ಲಿ ಇದೇ ವರ್ಷ ಸ್ಥಾಪನೆಯಾಗಿ ಉದ್ಘಾಟನೆಯಾದ ನಿಜಶರಣ ಶ್ರೀ ಅಂಬಿಗರ ಚೌಡಯ್ಯನವರ ಮೂರ್ತಿಯನ್ನು ದುಷ್ಕರ್ಮಿಗಳು ಭಗ್ನಗೊಳಿಸಿರುವ ಘಟನೆಗೆ ಅಖಿಲ ಭಾರತೀಯ ಕೋಲಿ ಸಮಾಜ ರಾಜ್ಯ ಘಟಕದಿಂದ ತೀವ್ರ ಖಂಡನೆ ವ್ಯಕ್ತವಾಗಿದೆ.
ಮಹಾಪುರುಷರು ಯಾವುದೇ ಒಂದು ಸಮಾಜಕ್ಕೆ ಸೀಮಿತವಾಗಿರುವುದಿಲ್ಲ, ಎಲ್ಲ ಸಮಾಜಗಳೂ ಗೌರವಿಸುತ್ತಾರೆ. ಮೂರ್ತಿಯನ್ನು ಧ್ವಂಸಗೊಳಿಸಿರುವುದು ಕೋಲಿ ಸಮಾಜದ ಭಾವನೆಗೆ ನೇರ ದಾಳಿಯಾಗಿದೆ ಎಂದು ಸಮಾಜದ ಪ್ರತಿನಿಧಿಗಳು ಆಕ್ರೋಶ ವ್ಯಕ್ತಪಡಿಸಿದರು.
ಇಂದು ಬೆಳಗ್ಗೆ ಅಖಿಲ ಭಾರತೀಯ ಕೋಲಿ ಸಮಾಜದ ತಂಡ ಮುತ್ತಗಾ ಗ್ರಾಮಕ್ಕೆ ಭೇಟಿ ನೀಡಿ ಅಂಬಿಗರ ಚೌಡಯ್ಯ ವೃತ್ತ ಪರಿಶೀಲಿಸಿತು. ನಂತರ ಶಹಾಬಾದ್ ಡಿವೈಎಸ್ಪಿ ಶಂಕರ್ ಗೌಡ ಪಾಟೀಲ್ ಅವರನ್ನು ಭೇಟಿ ಮಾಡಿದ ತಂಡ, ಆರೋಪಿಗಳನ್ನು ಶೀಘ್ರವೇ ಬಂಧಿಸಿ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿತು. ಜೊತೆಗೆ ಮೂರ್ತಿಯನ್ನು ಭಗ್ನಗೊಳಿಸಿದವರಿಂದಲೇ ಅದೇ ಸ್ಥಳದಲ್ಲಿ ಹೊಸ ಮೂರ್ತಿ ಸ್ಥಾಪನೆಗೈಯಲು ಜಿಲ್ಲಾಡಳಿತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಲಾಯಿತು.
ಈ ಸಂದರ್ಭದಲ್ಲಿ ಡಾ. ಇಂದ್ರಶಕ್ತಿ ಅನಿತಾ ಕೋರವಾರ, ಡಾ. ಟಿ.ಡಿ. ರಾಜ್, ಉಮೇಶ್ ಕೆ. ಮುದ್ನಾಳ್, ಅಂಬಿಗರ ಚೌಡಯ್ಯ ಹಾಗೂ ವಿಠ್ಠಲ್ ಹೇರೂರ್ ಅಭಿಮಾನಿ ಬಳಗದವರು ಮತ್ತು ಗ್ರಾಮದ ಮುಖಂಡರು ಉಪಸ್ಥಿತರಿದ್ದರು.