ಸದೃಢ ಮಾನವ ಸಂಪನ್ಮೂಲ ನಿರ್ಮಾಣದಲ್ಲಿ ಶಿಕ್ಷಣದ ಪಾತ್ರ ಅನನ್ಯ
ಜೇವರ್ಗಿ : ವಿದ್ಯಾರ್ಥಿಗಳಿಗೆ ಜ್ಞಾನ, ಕೌಶಲ, ಬುದ್ಧಿ, ಸಂಸ್ಕಾರ, ಮಾನವೀಯ ಮೌಲ್ಯಗಳನ್ನು ನೀಡಿ, ಅವರನ್ನು ದೇಶದ ಅಮೂಲ್ಯ ಮಾನವ ಸಂಪನ್ಮೂಲವನ್ನಾಗಿಸಲು ಶಿಕ್ಷಣ ಹಾಗೂ ಅದರ ಸಂಸ್ಥೆಗಳು ಅನನ್ಯವಾದ ಪಾತ್ರವನ್ನು ನಿರ್ವಹಿಸುತ್ತವೆ. ದೇಶದ ಎಲ್ಲಾ ಸಮಸ್ಯೆಗಳಿಗೆ ಶಿಕ್ಷಣ ಪರಿಹಾರವಾಗಬಲ್ಲದು ಎಂದು ಜೇವರ್ಗಿಯ ಬಸವೇಶ್ವರ ಬಿ.ಎಡ್ ಕಾಲೇಜಿನ ಪ್ರಾಧ್ಯಾಪಕ, ಚಿಂತಕ ಪ್ರೊ.ಎಸ್.ಬಿ.ಮಮದಾಪುರ ಅಭಿಮತಪಟ್ಟರು.
ಪಟ್ಟಣದ ಬಸವೇಶ್ವರ ವೃತ್ತದ ಸಮೀಪವಿರುವ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಬುಧವಾರ ಏರ್ಪಡಿಸಲಾಗಿದ್ದ ‘ಕಾಲೇಜಿನ 67ನೇ ಸಂಸ್ಥಾಪನಾ ದಿನಾಚರಣೆ’ಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕಾಲೇಜು ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷ ರವೀಂದ್ರಕುಮಾರ ವೈ.ಕೋಳಕೂರ ಮಾತನಾಡಿ, ಜನರು ಸರ್ಕಾರಿ ಶಾಲಾ-ಕಾಲೇಜುಗಳು ಎಂದರೆ ನಿರ್ಲಕ್ಷ ಮಾಡುವುದು ಬೇಡ. ಸರ್ಕಾಗಳು ಸಾಕಷ್ಟು ವೆಚ್ಚ ಮಾಡಿ ಎಲ್ಲರಿಗೂ ಶಿಕ್ಷಣ ದೊರೆಯಬೇಕು ಎಂಬ ಉದ್ದೇಶದಿಂದ ಎಲ್ಲೆಡೆ ಶಾಲಾ-ಕಾಲೇಜುಗಳನ್ನು ಪ್ರಾರಂಭಿಸಿದೆ. ಅವುಗಳ ಸದುಪಯೋಗವನ್ನು ಮಾಡಿಕೊಳ್ಳಬೇಕು. ವಿದ್ಯಾರ್ಥಿಗಳ ಬದುಕನ್ನು ಕಟ್ಟಿಕೊಡುವಲ್ಲಿ ಶಿಕ್ಷಕರ ಮೇಲೆ ಗುರುತರ ಜವಾಬ್ದಾರಿಯಿದ್ದು, ಅದನ್ನು ಬದ್ದತೆಯಿಂದ ಮಾಡಬೇಕಾಗಿದೆ ಎಂದು ಮಾರ್ಮಿಕವಾಗು ಹೇಳಿದರು.
ಕಾಲೇಜಿನ ಪ್ರಾಚಾರ್ಯ ರವೀಂದ್ರಕುಮಾರ ಸಿ.ಬಟಗೇರಿ ಮಾತನಾಡಿ, ನಮ್ಮ ಕಾಲೇಜು ಕಳೆದ 67 ವರ್ಷಗಳಲ್ಲಿ ಸಾವಿರಾರು ವಿದ್ಯಾರ್ಥಿಗಳ ಬದುಕನ್ನು ಕಟ್ಟಿಕೊಟ್ಟಿದೆ. ಕಾಲೇಜಿನ ಪ್ರಾರಂಭಕ್ಕೆ ಶ್ರಮಿಸಿದ, ಏಳಿಗೆಗೆ ದುಡಿದ ಎಲ್ಲರು ಸ್ಮರಣೀಯರಾಗಿದ್ದಾರೆ. ನಮ್ಮ ಕಾಲೇಜಿನಲ್ಲಿ ಓದಿದ ವಿದ್ಯಾರ್ಥಿಗಳು ಇಂದು ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ. ಹಳೆಯ ವಿದ್ಯಾರ್ಥಿಗಳು ನೀವು ಕಲಿತ ಕಾಲೇಜಿನ ಬಗ್ಗೆ ಹೆಮ್ಮ, ಕಾಳಜಿ ಇರಬೇಕು. ಕಾಲೇಜಿನ ಸರ್ವತೋಮುಖ ಬೆಳವಣಿಗೆಗೆ ಎಲ್ಲರ ಸಹಕಾರ ಅಗತ್ಯವಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಸಮಾಜ ಸೇವಕ ಶಿವಯೋಗೆಪ್ಪಾ ಎಸ್.ಬಿರಾದಾರ, ಶಿಕ್ಷಣ ಪ್ರೇಮಿ ಬಸವರಾಜ ಹಡಪದ, ಕಾಲೇಜಿನ ಸಾಂಸ್ಕೃತಿಕ ಕಾರ್ಯದರ್ಶಿ ಎಚ್.ಬಿ.ಪಾಟೀಲ್, ಉಪನ್ಯಾಸಕರಾದ ಅಸ್ಮಾ ಜಬೀನ್, ಸುವರ್ಣಲತಾ ಭಂಡಾರಿ, ನಯಿಮಾ ನಾಹಿದ್, ಮಲ್ಲಪ್ಪ ರಂಜಣಗಿ, ಕೀರ್ತಿ ಭುಜುರಕೆ, ಗ್ರಂಥಪಾಲಕ ಲಿಂಗರಾಜ ಪಾಟೀಲ್, ದ್ವಿದಸ ರಾಮಚಂದ್ರ ಚವ್ಹಾಣ, ಅತಿಥಿ ಉಪನ್ಯಾಸಕರಾದ ವಿರೇಶ್ ಗೋಗಿ, ನಾರಾಯಣಸ್ವಾಮಿ, ಅಲಿಯಾ ತಬಸ್ಸುಮ್, ಸೇವಕ ಭಾಗಣ್ಣ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.


