ಕಲಬುರಗಿಜಿಲ್ಲಾಸುದ್ದಿ

ಚಾಮನಳ್ಳಿ ಚೆಕ್ ಡ್ಯಾಂ ಗೇಟ್ ದುರಸ್ತಿ ವಿಳಂಬ: ಅಧಿಕಾರಿಗಳ ವಿರುದ್ಧ ರೈತರ ಆಕ್ರೋಶ

ಯಾದಗಿರಿ: ಯಾದಗಿರಿ ತಾಲೂಕಿನ ಹತ್ತಿಕುಣಿ ಜಲಾಶಯದ ಉಪಹಳ್ಳವಾದ ಚಾಮನಳ್ಳಿಯ ಚೆಕ್ ಡ್ಯಾಂ ಗೇಟ್ ಹಾಳಾಗಿ ಜಾಮ್ ಆದರೂ ಅಧಿಕಾರಿಗಳು ದುರಸ್ತಿ ಕಾರ್ಯಕ್ಕೆ ಮುಂದಾಗಿಲ್ಲವೆಂದು ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಕುರಿತು ರೈತರು ಸಾಮಾಜಿಕ ಹೋರಾಟಗಾರ ಉಮೇಶ್ ಮುದ್ನಾಳ್ ಅವರ ಗಮನಕ್ಕೆ ತಂದ ಹಿನ್ನೆಲೆಯಲ್ಲಿ ಅವರು ತಕ್ಷಣ ಸ್ಥಳಕ್ಕೆ ಭೇಟಿ ನೀಡಿ ಪರಿಸ್ಥಿತಿ ಪರಿಶೀಲಿಸಿದರು.

ಚಾಮನಳ್ಳಿ ಹಳ್ಳದಲ್ಲಿರುವ ಚೆಕ್ ಡ್ಯಾಂ ಮೂಲಕ ಹತ್ತಾರು ಗ್ರಾಮಗಳ ರೈತರಿಗೆ ನೀರಿನ ಸೌಲಭ್ಯ ದೊರೆಯಬೇಕಾಗಿದೆ. ಆದರೆ ಗೇಟ್‌ಗಳು ಜಾಮ್ ಆಗಿರುವುದರಿಂದ ಅವುಗಳನ್ನು ಮೇಲಕ್ಕೆ ಎತ್ತಲು ಸಾಧ್ಯವಾಗುತ್ತಿಲ್ಲ. ಮಳೆಗಾಲದಲ್ಲಿ ಗೇಟ್ ಮೇಲಿಂದ ನೀರು ಹರಿದು ಸಂಪರ್ಕ ಕಡಿತವಾಗುತ್ತಿದ್ದು, ಪ್ರತೀ ವರ್ಷ ಇದೇ ಸಮಸ್ಯೆ ಎದುರಾಗುತ್ತಿದ್ದರೂ ಅಧಿಕಾರಿಗಳು ದುರಸ್ತಿಗೆ ಮುಂದಾಗಿಲ್ಲ ಎಂದು ಆರೋಪಿಸಲಾಗಿದೆ.

ಇದಲ್ಲದೆ ಹಳ್ಳದಲ್ಲಿನ ನೀರು ಪಾಚಿಗಟ್ಟಿದ್ದು, ಅಪಾರ ಪ್ರಮಾಣದಲ್ಲಿ ಹಾಪ್ (ಜಲಸಸ್ಯ) ಬೆಳೆದು ನಿಂತಿರುವುದರಿಂದ ಅಪಾಯದ ಪರಿಸ್ಥಿತಿ ನಿರ್ಮಾಣವಾಗಿದೆ. ಪ್ರತಿ ವರ್ಷ ಎರಡು–ಮೂರು ಸಾವುಗಳು ಸಂಭವಿಸುತ್ತಿವೆ ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ. ಹೀಗಾಗಿ ತಕ್ಷಣ ಹಳ್ಳವನ್ನು ಹೂಳೆತ್ತಿ ಸ್ವಚ್ಛಗೊಳಿಸುವುದರ ಜೊತೆಗೆ ಹಳೆಯ ಗೇಟ್ ತೆಗೆದು ಹೊಸ ಹೈಡ್ರಾಲಿಕ್ ಗೇಟ್ ಅಳವಡಿಸಬೇಕೆಂದು ಉಮೇಶ್ ಮುದ್ನಾಳ್ ಆಗ್ರಹಿಸಿದ್ದಾರೆ.

ಈ ಸಂದರ್ಭದಲ್ಲಿ ರಡ್ಡಿ ಪೂಜಾರಿ ಠಾಣಾಗುಂದಿ, ರಾಜು ಜಾಧವ್ (ಉಮ್ಲಾನಾಯಕ್ ತಾಂಡಾ), ರಡ್ಡೆಪ್ಪ (ಗಂಗಾನಗರ, ಯಾದಗಿರಿ) ಸೇರಿದಂತೆ ಹಲವರು ಉಪಸ್ಥಿತರಿದ್ದರು.

Related Articles

Leave a Reply

Your email address will not be published. Required fields are marked *

Back to top button