ಸಿದ್ದರಾಮಯ್ಯ ಹುದ್ದೆ ಕಳೆದುಕೊಳ್ಳುವುದು ನಿಶ್ಚಿತ: ಅಶೋಕ್ ಭವಿಷ್ಯ

ಬೆಳಗಾವಿ: “ಬರುವ ನವೆಂಬರ್, ಡಿಸೆಂಬರ್ ಒಳಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹುದ್ದೆ ಕಳೆದುಕೊಳ್ಳುವುದು ನಿಶ್ಚಿತ” ಎಂದು ವಿಧಾನಸಭೆಯ ಪ್ರತಿಪಕ್ಷ ನಾಯಕ ಆರ್. ಅಶೋಕ್ ಭವಿಷ್ಯ ನುಡಿದರು.
ಬೆಳಗಾವಿಯ ಅತಿವೃಷ್ಟಿ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿದ ಅವರು ಪತ್ರಕರ್ತರೊಂದಿಗೆ ಮಾತನಾಡಿ, “ಕಾಂಗ್ರೆಸ್‌ನಲ್ಲಿ ಅಧಿಕಾರ ಹಂಚಿಕೆ ಕುರಿತು ಈಗಾಗಲೇ ಒಳ ಜಗಳ ಆರಂಭವಾಗಿದೆ. ಸಿದ್ದರಾಮಯ್ಯ ಅಧಿಕಾರ ಬಿಟ್ಟು ಕೊಡಲು ಸಿದ್ಧರಿಲ್ಲ, ಡಿ.ಕೆ. ಶಿವಕುಮಾರ್ ಅಧಿಕಾರಕ್ಕಾಗಿ ಹಠ ಹಿಡಿಯುವುದು ನಿಶ್ಚಿತ. ಈ ಗದ್ದಲದಲ್ಲಿ ಸರ್ಕಾರ ಪತನವಾದರೆ ಬಿಜೆಪಿ ಸರ್ಕಾರ ಮಾಡುವುದಿಲ್ಲ, ಬದಲಿಗೆ ಚುನಾವಣೆ ನಡೆಯುವುದು ಖಚಿತ” ಎಂದರು.
“ಸಿದ್ದರಾಮಯ್ಯ ನಾನು ಎರಡೂವರೆ ವರ್ಷ ಮುಖ್ಯಮಂತ್ರಿಯಾಗುತ್ತೇನೆ ಎಂದು ಹೇಳುತ್ತಿದ್ದರೆ, ಕಾಂಗ್ರೆಸ್ ಶಾಸಕರು ಅವರನ್ನೇ ಪ್ರಶ್ನಿಸುತ್ತಿದ್ದಾರೆ. ಹೀಗಾಗಿ ಪಕ್ಷದೊಳಗೆ ಕ್ರಾಂತಿ ಅನಿವಾರ್ಯ” ಎಂದು ಅಶೋಕ್ ಭವಿಷ್ಯ ನುಡಿದರು.
ಸರ್ಕಾರದ ವಿರುದ್ಧ ಕಿಡಿ
ಅತಿವೃಷ್ಟಿ ಪೀಡಿತ ಪ್ರದೇಶಗಳ ಭೇಟಿ ಸಂದರ್ಭದಲ್ಲಿ ಅಶೋಕ್ ಕಾಂಗ್ರೆಸ್ ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. “ಜನರ ದುಃಖದಲ್ಲಿ ಪಾಲ್ಗೊಳ್ಳುವ ಬದಲು ಮುಖ್ಯಮಂತ್ರಿಗಳು ದಸರಾ ಉದ್ಘಾಟನೆ ಮತ್ತು ಸಂತೋಷ ಕೂಟಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಎಷ್ಟು ಮನೆಗಳು ಬಿದ್ದಿವೆ, ಎಷ್ಟು ಬೆಳೆ ಹಾನಿಯಾಗಿದೆ ಎಂಬುದರ ಅಂಕಿ ಅಂಶಗಳೂ ತಪ್ಪು. ಇದು ತುಘಲಕ್ ಸರಕಾರ. ಇಂತಹ ನಿರ್ಲಕ್ಷ್ಯದ ಆಡಳಿತವನ್ನು ಕರ್ನಾಟಕ ಯಾವತ್ತೂ ನೋಡಿಲ್ಲ” ಎಂದು ಟೀಕಿಸಿದರು.
“ನಮ್ಮ ಮೇಲೆ ಶೇ. 40 ಕಮಿಷನ್ ಆರೋಪ ಮಾಡಲಾಗಿತ್ತು, ಆದರೆ ಅದು ಸಾಬೀತಾಗಲಿಲ್ಲ. ಆದರೆ ಇದೇ ಕಾಂಗ್ರೆಸ್ ಸರ್ಕಾರ ಗುತ್ತಿಗೆದಾರರಿಂದ ದುಪ್ಪಟ್ಟು ಕಮಿಷನ್ ಪಡೆಯುತ್ತಿದೆ ಎಂಬ ಆರೋಪ ಕೇಳಿಬಂದಿದೆ” ಎಂದು ಅಶೋಕ್ ದೂರಿದರು.