ಕಲಬುರಗಿಜಿಲ್ಲಾಸುದ್ದಿ

ಅತಿವೃಷ್ಟಿ-ಅನಾವೃಷ್ಟಿ ಹಾವಳಿ: 650 ಕೋಟಿ ವಿಶೇಷ ಅನುದಾನಕ್ಕೆ ರೈತರ ಒತ್ತಾಯಿಸಿ ಪ್ರತಿಭಟನೆ

ಕಲಬುರಗಿ: ಜಿಲ್ಲೆಯಲ್ಲಿ ಆಗಸ್ಟ್, ಸೆಪ್ಟೆಂಬರ್ ಹಾಗೂ ಅಕ್ಟೋಬರ್ ತಿಂಗಳಲ್ಲಿ ಸುರಿದ ಭಾರೀ ಮಳೆಯಿಂದ ಅತೀವೃಷ್ಟಿ-ಅನಾವೃಷ್ಟಿ ಉಂಟಾಗಿ ರೈತರ ಜೀವನ ಅಸ್ತವ್ಯಸ್ತಗೊಂಡಿದೆ. ಬೆಳೆಗಳು ಹಾನಿಗೊಳಗಾಗಿ ಫಲವತ್ತಾದ ಮಣ್ಣು ಕಳೆದುಹೋಗಿದ್ದು, ಮನೆ-ಜಾನುವಾರುಗಳೂ ಹಾನಿಯಾಗಿವೆ. ಹಲವು ಕಡೆ ಮನೆ ಕುಸಿತದಿಂದ ಸಾವು-ನೋವು ಸಂಭವಿಸಿದ್ದು, ಕೆಲವು ಗ್ರಾಮಗಳು ನಡುಗಡ್ಡೆಯಂತೆ ಏಕಾಂಗಿಯಾಗಿವೆ.

ಜಿಲ್ಲೆಯಲ್ಲಿ 2.98 ಲಕ್ಷ ಹೆಕ್ಟೇರ್ ಪ್ರದೇಶದ ಕೃಷಿ ಮತ್ತು ತೋಟಗಾರಿಕಾ ಬೆಳೆಗಳು ಹಾನಿಗೊಳಗಾಗಿವೆ. ಹೆಸರು, ಉದ್ದು, ತೊಗರಿ, ಹತ್ತಿ, ಸೋಯಾಬಿನ್, ಕಬ್ಬು ಸೇರಿದಂತೆ ಹಲವು ಪ್ರಮುಖ ಬೆಳೆಗಳಿಗೆ ನಷ್ಟವಾಗಿದೆ. ಪ್ರಾಥಮಿಕ ಅಂದಾಜು ಪ್ರಕಾರ ಹೆಸರು 25,797 ಹೆಕ್ಟೇರ್, ಉದ್ದು 8,105 ಹೆಕ್ಟೇರ್, ತೊಗರಿ 2.22 ಲಕ್ಷ ಹೆಕ್ಟೇರ್, ಹತ್ತಿ 36,896 ಹೆಕ್ಟೇರ್ ಹಾಗೂ ತೋಟಗಾರಿಕೆ ಬೆಳೆಗಳು 386 ಹೆಕ್ಟೇರ್‌ನಲ್ಲಿ ಹಾನಿಗೀಡಾಗಿವೆ.

ಮಹಾರಾಷ್ಟ್ರದಿಂದ ಭೀಮ, ಅಮರ್ಜಾ, ಕಾಗಿಣ, ಬೆಣ್ಣೆತ್ತೋರಾ, ದಂಡೋರಿ ನಾಲಾ ನದಿಗಳಿಗೆ ಬೃಹತ್ ಪ್ರಮಾಣದಲ್ಲಿ ನೀರು ಬಿಟ್ಟ ಪರಿಣಾಮ ಅಷ್ಟೂರು, ಜೇವರ್ಗಿ, ಯಡ್ರಾಮಿ, ಆಳಂದ, ಕಮಲಾಪುರ, ಕಾಳಗಿ, ಶಹಾಬಾದ್, ಚಿತ್ತಾಪೂರ ಹಾಗೂ ಸೇಡಂ ತಾಲ್ಲೂಕುಗಳಲ್ಲಿ ಜನಸಾಮಾನ್ಯರು ಸಂಕಷ್ಟ ಅನುಭವಿಸುತ್ತಿದ್ದಾರೆ.

ಈ ಹಿನ್ನೆಲೆ ಜಿಲ್ಲೆಯನ್ನು “ಹಸಿ ಬರಗಾಲ” ಎಂದು ಘೋಷಿಸಿ, ತಕ್ಷಣ 650 ಕೋಟಿ ರೂಪಾಯಿ ವಿಶೇಷ ಪರಿಹಾರ ಪ್ಯಾಕೇಜ್ ಬಿಡುಗಡೆ ಮಾಡಲು ಕೇಂದ್ರ ಸರ್ಕಾರವನ್ನು ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಕಾರ್ಮಿಕರ ಸೇವಾ ಸಂಘ ಮತ್ತು ಪ್ರಗತಿಪರ ಸಂಘಟನೆಗಳ ಕಾರ್ಯಕರ್ತರು ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ಪ್ರತಿಭಟನಾಕಾರರು ಕೇಂದ್ರ ಸರ್ಕಾರವು ಬೇರೆ ರಾಜ್ಯಗಳಿಗೆ ನೀಡಿದಂತೆ ಕರ್ನಾಟಕಕ್ಕೂ ವಿಶೇಷ ಅನುದಾನ ನೀಡಬೇಕು ಎಂದು ಆಗ್ರಹಿಸಿದರು. ಎನ್‌ಡಿಆರ್‌ಎಫ್ ಪರಿಹಾರದ ಪ್ರಮಾಣವನ್ನು ಪ್ರತಿ ಹೆಕ್ಟೇರ್‌ಗೆ ರೂ. 8,500ರಿಂದ ಕನಿಷ್ಠ ರೂ. 25,000ಕ್ಕೆ ಏರಿಸಲು ಆಗ್ರಹಿಸಲಾಯಿತು.

ಪ್ರತಿಭಟನೆಯಲ್ಲಿ ಚಂದು ಜಾಧವ, ಶೌಕತ್ ಅಲಿ ಆಲೂರ, ಸುನೀಲ ಮಾರುತಿ ಮಾನ್ನಡೆ ಸೇರಿದಂತೆ ಹಲವರು ಭಾಗವಹಿಸಿದ್ದರು.

Related Articles

Leave a Reply

Your email address will not be published. Required fields are marked *

Back to top button