
ಕಲಬುರಗಿ, ಜು. 26: ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಮಹಾನಗರ ಪಾಲಿಕೆ, ಜಿಲ್ಲಾ ಪಂಚಾಯತ್ ಹಾಗೂ ಜಿಲ್ಲಾ ಹಡಪದ (ಕ್ಷೌರಿಕ) ಸಮಾಜದ ಸಂಯುಕ್ತಾಶ್ರಯದಲ್ಲಿ ಶಿವಶರಣ ಹಡಪದ ಅಪ್ಪಣ್ಣ ಅವರ 892ನೇ ಜಯಂತ್ಯೋತ್ಸವ ಕಾರ್ಯಕ್ರಮವು ಜುಲೈ 29ರಂದು (ಬುಧವಾರ) ಬೆಳಿಗ್ಗೆ 11.30ಕ್ಕೆ ನಗರದ ಡಾ. ಎಸ್.ಎಂ. ಪಂಡಿತ ರಂಗಮಂದಿರದಲ್ಲಿ ನಡೆಯಲಿದೆ.
ಕಾರ್ಯಕ್ರಮದ ದಿವ್ಯ ಸಾನ್ನಿಧ್ಯವನ್ನು ಕಂಬಳೇಶ್ವರ ಸಂಸ್ಥಾನ ಮಠ, ಚಿತ್ತಾಪುರದ ಷ.ಬ್ರ. ಶ್ರೀ ಸೋಮಶೇಖರ ಶಿವಾಚಾರ್ಯರು ವಹಿಸಲಿದ್ದಾರೆ. ಮುದಗಲ್ನ ಕಲ್ಯಾಣ ಆಶ್ರಮ ಶ್ರೀ ಮಹಾಂತೇಶ್ವರ ಮಠದ ಪೂಜ್ಯ ಶ್ರೀ ಮಹಾಂತ ಸ್ವಾಮಿಗಳು ವಿಶೇಷ ಅನುಭಾವ ಉಪನ್ಯಾಸ ನೀಡಲಿದ್ದು, ಶಹಾಬಾದ್ನ ಶರಣ ಹಡಪದ ಅಪ್ಪಣ್ಣ ದೇವಸ್ಥಾನದ ಶ್ರೀ ಬಾಲ ಬ್ರಹ್ಮಚಾರಿ ರಾಜ ಶಿವಯೋಗಿಗಳು ಸಮ್ಮುಖ ವಹಿಸಲಿದ್ದಾರೆ.
ಜಯಂತಿ ಕಾರ್ಯಕ್ರಮದಲ್ಲಿ ಜಿಲ್ಲೆಯ ಸ್ಥಳೀಯ ಸಚಿವರು, ಶಾಸಕರು, ವಿಧಾನ ಪರಿಷತ್ ಸದಸ್ಯರು, ಲೋಕಸಭಾ ಸದಸ್ಯರು, ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಗಣ್ಯರು ಭಾಗವಹಿಸಲಿದ್ದಾರೆ.
ಈ ಹಿನ್ನೆಲೆಯಲ್ಲಿ ಕಲಬುರಗಿ ಜಿಲ್ಲೆಯ ಎಲ್ಲಾ ಜಿಲ್ಲಾ, ತಾಲ್ಲೂಕು ಹಾಗೂ ನಗರ ಘಟಕಗಳ ಪದಾಧಿಕಾರಿಗಳು, ಹಡಪದ (ಕ್ಷೌರಿಕ) ಸಮಾಜದ ನೌಕರರ ಸಂಘ, ಮಹಿಳಾ ಸಂಘದ ಪದಾಧಿಕಾರಿಗಳು, ಯುವಕರು, ಮಹಿಳೆಯರು ಹಾಗೂ ಸಮಾಜದ ಬಂಧುಗಳು ಜುಲೈ 29ರಂದು ಕ್ಷೌರದ ಅಂಗಡಿಗಳನ್ನು ಬಂದ್ ಮಾಡಿ ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಜಯಂತಿಯನ್ನು ಯಶಸ್ವಿಗೊಳಿಸಬೇಕೆಂದು ಜಿಲ್ಲಾ ಹಡಪದ (ಕ್ಷೌರಿಕ) ಸಮಾಜದ ಜಿಲ್ಲಾಧ್ಯಕ್ಷ ಈರಣ್ಣ ಸಿ. ಹಡಪದ ಸಣ್ಣೂರ ಹಾಗೂ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಮೇಶ ಡಿ. ಹಡಪದ ನೀಲೂರ ಪತ್ರಿಕಾ ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.



