ಅಣಕು ಮತದಾನ ಮೂಲಕ ವಿದ್ಯಾರ್ಥಿಗಳಿಗೆ ಪ್ರಜಾಪ್ರಭುತ್ವ ಪಾಠ: ಹೇರೂರ ಪ್ರೌಢಶಾಲೆಯಲ್ಲಿ ಶಾಲಾ ಸಂಸತ್ ಚುನಾವಣೆ ಯಶಸ್ವಿ

ಫಲಿತಾಂಶ : ಮತ ಎಣಿಕೆಯಲ್ಲಿ ನರಸಿಂಹ ಹನುಮಂತ ಹಾಗೂ ಶಿವಶಂಕರ ತಲಾ 32 ಮತಗಳನ್ನು ಪಡೆದು ಮುನ್ನಡೆ ಸಾಧಿಸಿದರು. ಕೀರ್ತಿ ಸಂತೋಷ್ 19, ಶಿವಾನಿ ಮಹಾಂತಪ್ಪ 12, ಐಶ್ವರ್ಯ ಶರಣಬಸಪ್ಪ 6, ಮಂಜುಳಾ ಸೂರ್ಯಕಾಂತ್ 6, ಖಾಜಾ ಸಾಬ್ ಮಹಮ್ಮದ್ ಗೌಸ್ 5, ಶರಣಗೌಡ ದೇವಣ್ಣಗೌಡ 4, ಚಂದನ ಲಕ್ಷ್ಮಣ 4, ಅರುಣ್ ಮಂಜಪ್ಪ 2 ಹಾಗೂ ಯಾಸಿನ್ ಮೈಬೂಬ್ ಸಾಬ್ 2 ಮತಗಳನ್ನು ಪಡೆದರು.
ಗಣಗಾಪುರ, ಜು. 26: ವಿದ್ಯಾರ್ಥಿಗಳಲ್ಲಿ ಪ್ರಜಾಪ್ರಭುತ್ವದ ಮೌಲ್ಯಗಳು, ಮತದಾನದ ಮಹತ್ವ, ಚುನಾವಣೆ ಪ್ರಕ್ರಿಯೆ ಹಾಗೂ ನಾಯಕತ್ವ ಗುಣಗಳ ಬಗ್ಗೆ ಅರಿವು ಮೂಡಿಸುವ ಉದ್ದೇಶದಿಂದ ತಿಪ್ಪಣ್ಣ ಕಂಟೆಪ್ಪ ಹೇರೂರ ಅನುದಾನಿತ ಪ್ರೌಢಶಾಲೆಯಲ್ಲಿ 2026–27ನೇ ಸಾಲಿನ ಶಾಲಾ ಸಂಸತ್ ಚುನಾವಣೆ ಯಶಸ್ವಿಯಾಗಿ ನಡೆಯಿತು.
ಅಣಕು ಮತದಾನದ ಮಾದರಿಯಲ್ಲಿ ಆಯೋಜಿಸಲಾದ ಈ ಚುನಾವಣೆಯಲ್ಲಿ ಶಾಲಾ ಸಂಸತ್ತಿನ ವಿವಿಧ ಹುದ್ದೆಗಳಿಗೆ ಒಟ್ಟು 12 ಅಭ್ಯರ್ಥಿಗಳು ಸ್ಪರ್ಧಿಸಿದ್ದರು. ಜುಲೈ 25ರಂದು ಬೆಳಿಗ್ಗೆ 8ರಿಂದ ಮಧ್ಯಾಹ್ನ 12.30ರವರೆಗೆ ನಡೆದ ಮತದಾನದಲ್ಲಿ ಒಟ್ಟು 125 ಮತದಾರರ ಪೈಕಿ 122 ವಿದ್ಯಾರ್ಥಿಗಳು ಮತ ಚಲಾಯಿಸಿದ್ದು, ಶೇ.97.6ರಷ್ಟು ಮತದಾನ ದಾಖಲಾಗಿದೆ.
ಚುನಾವಣೆಗೆ ಶಾಲೆಯ ಮುಖ್ಯಗುರು ರಾಜಶೇಖರ್ ಎಸ್. ತಲಾರಿ ಅವರು ಮುಖ್ಯ ಚುನಾವಣಾಧಿಕಾರಿಯಾಗಿ ಚಾಲನೆ ನೀಡಿದರು. ಗಣೇಶ್ ರಾಥೋಡ್ ಅವರು ಪ್ರಿಸೈಡಿಂಗ್ ಅಧಿಕಾರಿ, ಶಿವಕುಮಾರ ಗೌವಳಿ ಸೆಕ್ಟರ್ ಅಧಿಕಾರಿ ಹಾಗೂ ಅಶೋಕ್ ಬೋವಿ ಪ್ರಥಮ ಪೊಲೀಸ್ ಅಧಿಕಾರಿಯಾಗಿ ಕಾರ್ಯನಿರ್ವಹಿಸಿದರು. ಗೀತಾ ಮೊಟ್ಟೆ, ಭಾಗ್ಯಶ್ರೀ ಪಾಟೀಲ, ಗುರುದಾಸ್ ಸುಬೇದಾರ್, ದತ್ತಪ್ಪ ನಡುವಿನಕೆರೆ, ಇನುಬಾಯಿ ರಾಥೋಡ್, ಮಹಾದೇವಿ, ಮಹಾನಂದ, ಗೌಶಿಯಾ ಬೇಗಂ ಶೇಖ್ ಸೇರಿದಂತೆ ಶಿಕ್ಷಕರು ಮತ್ತು ಸಿಬ್ಬಂದಿ ಚುನಾವಣಾ ಪ್ರಕ್ರಿಯೆಯನ್ನು ಯಶಸ್ವಿಗೊಳಿಸಲು ಸಹಕರಿಸಿದರು.
ಮತದಾನಕ್ಕೂ ಮುನ್ನ ಅಭ್ಯರ್ಥಿಗಳು ತಮ್ಮ ಚುನಾವಣಾ ಭರವಸೆಗಳು ಹಾಗೂ ಶಾಲೆಯ ಅಭಿವೃದ್ಧಿಗೆ ಸಂಬಂಧಿಸಿದ ಯೋಜನೆಗಳನ್ನು ವಿದ್ಯಾರ್ಥಿಗಳ ಮುಂದೆ ಮಂಡಿಸಿದರು. ನಂತರ ವಿದ್ಯಾರ್ಥಿಗಳು ಶಿಸ್ತುಬದ್ಧವಾಗಿ ಮತಗಟ್ಟೆಗೆ ತೆರಳಿ ಮತ ಚಲಾಯಿಸುವ ಮೂಲಕ ನೈಜ ಚುನಾವಣೆಯ ಅನುಭವ ಪಡೆದರು.
ಸಂಸ್ಥೆಯ ಅಧ್ಯಕ್ಷ ಭಗವಂತಪ್ಪ ಹೇರೂರ ಹಾಗೂ ಕಾರ್ಯದರ್ಶಿ ಲಕ್ಷ್ಮಿಕಾಂತಿ ಹೇರೂರ ಅವರು, ಅಣಕು ಮತದಾನದ ಮೂಲಕ ಮಕ್ಕಳಲ್ಲಿ ಚುನಾವಣೆ ಮತ್ತು ಮತದಾನದ ಬಗ್ಗೆ ಪ್ರಾಯೋಗಿಕ ಅರಿವು ಮೂಡಿಸುವುದು, ಪ್ರಜಾಪ್ರಭುತ್ವದ ಮೌಲ್ಯಗಳನ್ನು ಬಾಲ್ಯದಲ್ಲಿಯೇ ಬೆಳೆಸುವುದು ಹಾಗೂ ಜವಾಬ್ದಾರಿಯುತ ನಾಗರಿಕರನ್ನಾಗಿ ರೂಪಿಸುವುದು ಇಂತಹ ಶಾಲಾ ಸಂಸತ್ ಚುನಾವಣೆಯ ಮುಖ್ಯ ಉದ್ದೇಶವಾಗಿದೆ ಎಂದು ತಿಳಿಸಿದರು.
ಮುಖ್ಯಗುರು ರಾಜಶೇಖರ್ ಎಸ್. ತಲಾರಿ ಮಾತನಾಡಿ, ಶಾಲಾ ಸಂಸತ್ ಚುನಾವಣೆ ವಿದ್ಯಾರ್ಥಿಗಳಲ್ಲಿ ನಾಯಕತ್ವ, ಜವಾಬ್ದಾರಿ, ಸಹಕಾರ ಮನೋಭಾವ ಹಾಗೂ ಪ್ರಜಾಪ್ರಭುತ್ವದ ಬಗ್ಗೆ ಅರಿವು ಮೂಡಿಸುವ ಪರಿಣಾಮಕಾರಿ ವೇದಿಕೆಯಾಗಿದೆ ಎಂದು ಹೇಳಿದರು.
ಯಾವುದೇ ಅಹಿತಕರ ಘಟನೆಗಳಿಲ್ಲದೆ ಚುನಾವಣೆ ಯಶಸ್ವಿಯಾಗಿ ಪೂರ್ಣಗೊಂಡಿದ್ದು, ಶಾಲಾ ಆಡಳಿತ ಮಂಡಳಿ, ಶಿಕ್ಷಕರು ಹಾಗೂ ಪೋಷಕರು ಈ ಪ್ರಯತ್ನವನ್ನು ಶ್ಲಾಘಿಸಿದ್ದಾರೆ. ವಿದ್ಯಾರ್ಥಿಗಳಲ್ಲಿ ಪ್ರಜಾಪ್ರಭುತ್ವದ ಸಂಸ್ಕಾರ ಬೆಳೆಸುವ ದಿಸೆಯಲ್ಲಿ ಈ ಶಾಲಾ ಸಂಸತ್ ಚುನಾವಣೆ ಮಾದರಿ ಕಾರ್ಯಕ್ರಮವಾಗಿ ಗಮನ ಸೆಳೆದಿದೆ.


