ಲೇಖನ

ಜನನಾಯಕ ಬಿ.ಎಂ. ಪಾಟೀಲ: ಸಜ್ಜನ ರಾಜಕಾರಣದ ಜೀವಂತ ಮಾದರಿ

ಲೇಖನ: ಭೀಮನಗೌಡ ಪರಗೊಂಡ, ವಕೀಲರು

ರಾಜಕೀಯದಲ್ಲಿ ಅಧಿಕಾರಕ್ಕಿಂತ ಆದರ್ಶಕ್ಕೆ ಹೆಚ್ಚಿನ ಸ್ಥಾನ ನೀಡಿದ ನಾಯಕರ ಸಂಖ್ಯೆ ವಿರಳ. ಅಂತಹ ಅಪರೂಪದ ಜನನಾಯಕರಲ್ಲಿ ಮಾಜಿ ಸಚಿವ, ಶಿಕ್ಷಣತಜ್ಞ ಹಾಗೂ ಸಿರಸಂಗಿ–ನವಲಗುಂದ ಫಂಡ್ ಟ್ರಸ್ಟ್‌ನ ಟ್ರಸ್ಟಿಯಾಗಿದ್ದ ಬಿ.ಎಂ. ಪಾಟೀಲ ಅವರ ಹೆಸರು ಅಗ್ರಸ್ಥಾನದಲ್ಲಿ ನಿಲ್ಲುತ್ತದೆ. ವಿಜಯಪುರ ಜಿಲ್ಲೆಯ ನೆಲದಲ್ಲಿ ಜನಿಸಿದ ಅವರು, ಶಾಸಕರಾಗಿ ಹಾಗೂ ಸಚಿವರಾಗಿ ನಾಡಿನ ಸರ್ವ ಸಮುದಾಯದ ಹಿತಾಸಕ್ತಿಯನ್ನು ಕಾಪಾಡುತ್ತ ಜನಸೇವೆಯನ್ನು ಜೀವನದ ಧ್ಯೇಯವಾಗಿಸಿಕೊಂಡಿದ್ದರು.

ಮಹಾತ್ಮ ಬಸವಣ್ಣರ ವಚನದಲ್ಲಿ,

“ಲೇಸೆನಿಸಿಕೊಂಡು ಒಂದು ದಿವಸ ಬದುಕಿದಡೇನೋ…”

ಎಂಬ ಜೀವನದ ಮೌಲ್ಯ ಸಾರುವ ಸಂದೇಶವಿದೆ. ದೀರ್ಘಾಯುಷ್ಯಕ್ಕಿಂತ ಸಮಾಜಕ್ಕೆ ಉಪಯುಕ್ತವಾದ ಬದುಕು ಶ್ರೇಷ್ಠ ಎಂಬ ಈ ತತ್ವವನ್ನು ಬಿ.ಎಂ. ಪಾಟೀಲರು ತಮ್ಮ ಸಾರ್ವಜನಿಕ ಬದುಕಿನಲ್ಲಿ ಸಾಕಾರಗೊಳಿಸಿದ್ದರು.

ಶರಣರು, ಸೂಫಿ ಸಂತರು ಹಾಗೂ ದಾರ್ಶನಿಕರ ಪರಂಪರೆಗೆ ಹೆಸರಾದ ವಿಜಯಪುರ ಜಿಲ್ಲೆಯಲ್ಲಿ ಜನಿಸಿದ ಅವರು, ರಾಜಕೀಯವನ್ನು ಅಧಿಕಾರದ ಸಾಧನವನ್ನಾಗಿ ಅಲ್ಲ, ಜನಸೇವೆಯ ಮಾರ್ಗವನ್ನಾಗಿ ಕಂಡಿದ್ದರು. ಮುಸ್ಲಿಂ ಸಮುದಾಯ ಹೆಚ್ಚಿನ ಸಂಖ್ಯೆಯಲ್ಲಿ ವಾಸಿಸುವ ವಿಜಯಪುರ ನಗರ ಕ್ಷೇತ್ರದಿಂದ ಸತತವಾಗಿ ಶಾಸಕರಾಗಿ ಆಯ್ಕೆಯಾಗಿದ್ದು, ಅವರ ಮೇಲಿದ್ದ ಸರ್ವ ಸಮುದಾಯದ ವಿಶ್ವಾಸಕ್ಕೆ ಸಾಕ್ಷಿಯಾಗಿದೆ.

ಸರಳತೆ, ಸಜ್ಜನಿಕೆ, ಮಿತಭಾಷಿತ್ವ ಹಾಗೂ ಅಭಿವೃದ್ಧಿ ಪರ ಚಿಂತನೆ ಅವರ ವ್ಯಕ್ತಿತ್ವದ ಪ್ರಮುಖ ಲಕ್ಷಣಗಳಾಗಿದ್ದವು. ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಕೊನೆಯ ಕ್ಷಣದವರೆಗೂ ಶ್ರಮಿಸಿದ ಅವರು, ಆಡಳಿತ ಮತ್ತು ವಿರೋಧ ಪಕ್ಷಗಳ ನಡುವೆ ಸೌಹಾರ್ದದ ಸೇತುವೆಯಾಗಿ ಗುರುತಿಸಿಕೊಂಡಿದ್ದರು.

ಅವರು ಪೌರಾಡಳಿತ ಸಚಿವರಾಗಿದ್ದ ಅವಧಿಯಲ್ಲಿ ನನ್ನ ತಂದೆ ನೀಲಕಂಠರಾವ್ ಪಾಟೀಲರು ಕಲಬುರಗಿ ನಗರಸಭೆಯ ಅಧ್ಯಕ್ಷರಾಗಿದ್ದರು. ಆ ಸಂದರ್ಭದಲ್ಲಿ ಬಿ.ಎಂ. ಪಾಟೀಲರನ್ನು ಸಮೀಪದಿಂದ ಕಾಣುವ ಅವಕಾಶ ನನಗೂ ದೊರಕಿತ್ತು. ಸಾರ್ವಜನಿಕ ಹಿತದ ಬಗ್ಗೆ ಅವರಿಗಿದ್ದ ಕಾಳಜಿ, ಜನಸಾಮಾನ್ಯರೊಂದಿಗೆ ಬೆರೆತು ನಡೆದುಕೊಳ್ಳುವ ಸರಳತೆ ಹಾಗೂ ಆಡಳಿತದ ಬಗ್ಗೆ ಹೊಂದಿದ್ದ ಸ್ಪಷ್ಟ ದೃಷ್ಟಿಕೋನ ಇಂದಿಗೂ ನೆನಪಿನಲ್ಲಿ ಅಚ್ಚಳಿಯದೆ ಉಳಿದಿದೆ.

ವಿಧಾನಸಭೆಯಲ್ಲಿ ಅವರು ವಿರೋಧ ಪಕ್ಷಗಳ ನೀತಿಗಳನ್ನು ತೀಕ್ಷ್ಣವಾಗಿ ಟೀಕಿಸುತ್ತಿದ್ದರೂ, ಅಧಿವೇಶನ ಮುಗಿದ ಬಳಿಕ ಅದೇ ನಾಯಕರೊಂದಿಗೆ ಆತ್ಮೀಯವಾಗಿ ಬೆರೆಯುತ್ತಿದ್ದರು. ರಾಜಕೀಯ ಭಿನ್ನಾಭಿಪ್ರಾಯವನ್ನು ವೈಯಕ್ತಿಕ ದ್ವೇಷವಾಗಿ ಪರಿವರ್ತಿಸದ ಅಪರೂಪದ ಸಂಸ್ಕೃತಿ ಅವರದ್ದಾಗಿತ್ತು. ಇಂತಹ ರಾಜಕೀಯ ಸೌಜನ್ಯ ಇಂದಿನ ಕಾಲಕ್ಕೆ ಮಾದರಿಯಾಗಿದೆ.

ಅವರ ಆದರ್ಶಗಳನ್ನು ಅವರ ಪುತ್ರ, ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ ಮುಂದುವರಿಸಿಕೊಂಡು ಸಾಗುತ್ತಿರುವುದು ಗಮನಾರ್ಹ. ವಿಜಯಪುರ ಜಿಲ್ಲೆಯಷ್ಟೇ ಅಲ್ಲ, ಇಡೀ ರಾಜ್ಯದ ಅಭಿವೃದ್ಧಿಗೆ ದೂರದೃಷ್ಟಿಯ ಯೋಜನೆಗಳನ್ನು ರೂಪಿಸುವ ಮೂಲಕ ಅವರು ತಂದೆಗೆ ತಕ್ಕ ಮಗ ಎಂಬ ಜನಾಭಿಪ್ರಾಯವನ್ನು ಗಳಿಸಿದ್ದಾರೆ. ಈ ಹಿಂದೆ ಜಲಸಂಪನ್ಮೂಲ ಸಚಿವರಾಗಿದ್ದಾಗ ಅನೇಕ ನೀರಾವರಿ ಯೋಜನೆಗಳಿಗೆ ವೇಗ ನೀಡಿದ್ದು, ಪ್ರಸ್ತುತ ಕೈಗಾರಿಕಾ ಅಭಿವೃದ್ಧಿಗೆ ಹೊಸ ಆಯಾಮ ನೀಡುತ್ತಿರುವುದು ಅವರ ಕಾರ್ಯಶೈಲಿಯ ಮತ್ತೊಂದು ಮುಖವಾಗಿದೆ.

ಬಿ.ಎಂ. ಪಾಟೀಲರ ವ್ಯಕ್ತಿತ್ವವನ್ನು ಉರಿಲಿಂಗದೇವರ ಈ ವಚನ ಅತ್ಯಂತ ಸಮರ್ಪಕವಾಗಿ ಪ್ರತಿಬಿಂಬಿಸುತ್ತದೆ.

“ಲೋಕದಂತೆ ಬಾರರು, ಲೋಕದಂತೆ ಇರರು, ಲೋಕದಂತೆ ಹೋಗರು ನೋಡಯ್ಯ;
ಪುಣ್ಯದಂತೆ ಬಪ್ಪರು, ಜ್ಞಾನದಂತೆ ಇಪ್ಪರು, ಮುಕ್ತಿಯಂತೆ ಹೋಹರು ನೋಡಯ್ಯ…”

ಸಮಾಜದಲ್ಲಿ ತಮ್ಮದೇ ಆದ ಛಾಪು ಮೂಡಿಸಿ, ಜನಸೇವೆಯ ಮೂಲಕ ಬದುಕನ್ನು ಸಾರ್ಥಕಗೊಳಿಸಿದ ನಾಯಕರಿಗೆ ಈ ವಚನ ಅಕ್ಷರಶಃ ಅನ್ವಯಿಸುತ್ತದೆ.

ಬಿ.ಎಂ. ಪಾಟೀಲರು ಜಿಲ್ಲೆ ಮತ್ತು ರಾಜ್ಯಕ್ಕೆ ನೀಡಿದ ಕೊಡುಗೆಗಳು ಅನೇಕ. ಶಿಕ್ಷಣ, ಆಡಳಿತ, ಅಭಿವೃದ್ಧಿ ಹಾಗೂ ಜನಸೇವೆಯ ಕ್ಷೇತ್ರಗಳಲ್ಲಿ ಅವರು ಹಾಕಿಕೊಟ್ಟ ಹೆಜ್ಜೆಗುರುತುಗಳು ಇಂದಿಗೂ ಮಾರ್ಗದರ್ಶಕವಾಗಿವೆ. ಅವರ ಲಿಂಗೈಕ್ಯ ದಿನವು ಕೇವಲ ಸ್ಮರಣೆಯ ದಿನವಲ್ಲ; ಅವರ ಆದರ್ಶಗಳನ್ನು ಪುನಃ ನೆನಪಿಸಿಕೊಳ್ಳುವ ಮತ್ತು ಮುಂದಿನ ಪೀಳಿಗೆಗೆ ಪರಿಚಯಿಸುವ ಸಂದರ್ಭವೂ ಹೌದು.

ಗಮನಾರ್ಹ ಸಂಗತಿಯೆಂದರೆ, ಬಿ.ಎಂ. ಪಾಟೀಲರ ಸಾರ್ವಜನಿಕ ಜೀವನ ಮತ್ತು ಅವರ ಪುತ್ರ ಎಂ.ಬಿ. ಪಾಟೀಲರ ಕಾರ್ಯವೈಖರಿಯನ್ನು ಬಿಜೆಪಿ ಪಕ್ಷದ ಮಾಜಿ ರಾಜ್ಯ ಪ್ರಧಾನ ಕಾರ್ಯದರ್ಶಿ ಹಾಗೂ ಮಾಜಿ ವಿಧಾನ ಪರಿಷತ್ ಸದಸ್ಯ ಅಮರನಾಥ ಪಾಟೀಲ ಅವರು ಕೂಡ ಮೆಚ್ಚುಗೆ ವ್ಯಕ್ತಪಡಿಸಿದ್ದರು. 2019ರ ಜನವರಿ 24ರಂದು ಕಲಬುರಗಿಯ ಹೈದರಾಬಾದ್ ಕರ್ನಾಟಕ ಕೈಗಾರಿಕಾ ಮತ್ತು ವಾಣಿಜ್ಯ ಸಂಸ್ಥೆಯ ಸಭಾಂಗಣದಲ್ಲಿ ನಡೆದ ಕೈಗಾರಿಕಾ ಉದ್ಯಮಿಗಳ ಸಭೆಯಲ್ಲಿ ಅವರು ಈ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದರು.

ಜುಲೈ 27ರಂದು ಬಿ.ಎಂ. ಪಾಟೀಲರ ಲಿಂಗೈಕ್ಯ ಸ್ಮರಣಾ ದಿನದ ಹಿನ್ನೆಲೆಯಲ್ಲಿ, ಅವರೊಂದಿಗೆ ನೇರವಾಗಿ ಸಂಬಂಧಿಸಿದ ಆ ನೆನಪುಗಳು ಮತ್ತೊಮ್ಮೆ ಮನಸ್ಸಿನಲ್ಲಿ ಮೂಡಿವೆ. ಜನಪರತೆ, ಪ್ರಾಮಾಣಿಕತೆ, ಅಭಿವೃದ್ಧಿ ಮತ್ತು ಸೌಜನ್ಯಪೂರ್ಣ ರಾಜಕಾರಣಕ್ಕೆ ಅವರು ನೀಡಿದ ಅರ್ಥ ಇಂದಿಗೂ ಪ್ರಸ್ತುತವಾಗಿದೆ. ಅಂತಹ ಅಪರೂಪದ ಜನನಾಯಕನನ್ನು ಸ್ಮರಿಸುವುದು ಅವರ ವ್ಯಕ್ತಿತ್ವಕ್ಕೆ ಸಲ್ಲುವ ನಿಜವಾದ ಗೌರವ.

Related Articles

Leave a Reply

Your email address will not be published. Required fields are marked *

Back to top button