ಆ.23ರಂದು ಕಲಬುರಗಿ ಸಾಹಿತ್ಯ ಸಂಭ್ರಮ
ಪುಸ್ತಕ ಲೋಕಾರ್ಪಣೆ, ಕವಿಗೋಷ್ಠಿ, ಉಪನ್ಯಾಸ ಹಾಗೂ ಹೆಮ್ಮೆಯ ಕನ್ನಡಿಗ ಪ್ರಶಸ್ತಿ ಪ್ರದಾನ

ಕಲಬುರಗಿ, ಆ.22: ಜಿಲ್ಲೆಯ ಸಾಹಿತ್ಯಿಕ ಹಾಗೂ ಸಾಂಸ್ಕೃತಿಕ ಪರಂಪರೆಯನ್ನು ಇಂದಿನ ಹೊಸ ಪೀಳಿಗೆಗೆ ಪರಿಚಯಿಸುವ ಉದ್ದೇಶದಿಂದ ಕರ್ನಾಟಕ ಸಾಹಿತ್ಯ ಮತ್ತು ಸಾಂಸ್ಕೃತಿಕ ಪ್ರತಿಷ್ಠಾನದ ಆಶ್ರಯದಲ್ಲಿ ಆ.23ರಂದು ನಗರದ ಕನ್ನಡ ಭವನದಲ್ಲಿ ಒಂದು ದಿನದ ‘ಕಲಬುರಗಿ ಸಾಹಿತ್ಯ ಸಂಂಭ್ರಮ’ ಆಯೋಜಿಸಲಾಗಿದೆ.
ಆ.23ರಂದು ಬೆಳಿಗ್ಗೆ 10.30ಕ್ಕೆ ಕಾರ್ಯಕ್ರಮ ಆರಂಭವಾಗಲಿದ್ದು, ವಿಜಯಪುರದ ಮಕ್ಕಳ ಸಾಹಿತ್ಯ ಪಂಡಿತ ಅವಜಿ ಅವರು ಸಂಭ್ರಮಕ್ಕೆ ಚಾಲನೆ ನೀಡಲಿದ್ದಾರೆ. ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ಅಧ್ಯಕ್ಷತೆ ವಹಿಸಲಿದ್ದಾರೆ.
ಹಿರಿಯ ಸಾಹಿತಿಗಳಾದ ಡಾ. ಸಿದ್ದಣ್ಣ ಬಾಡಗಿ, ಧನಲಕ್ಷ್ಮೀ, ಸಮಾಜ ಸೇವಕಿ ಸಂತೋಷಿರಾಣಿ ಪಾಟೀಲ ತೇಲ್ಕೂರ, ಲಿಂಗಾರೆಡ್ಡಿ ಶೇರಿ, ಶಿವರಾಜ ಅಂಡಗಿ, ಡಾ. ಡಿ. ಪೂಜಾರಿ ಹುಂಡೇಕಲ್, ಭಾಗ್ಯಶ್ರೀ ಬಾಬಣ್ಣ ಹಾಗೂ ನಬಿ ರಸೂಲ್ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಸಂಶೋಧಕ ಸಾಹಿತಿ ಮುಡುಬಿ ಗುಂಡೇರಾವ್ ಅವರು ಉಪನ್ಯಾಸ ನೀಡಲಿದ್ದಾರೆ.
ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಧರ್ಮಣ್ಣ ಎಚ್. ಧನ್ನಿ, ಧರ್ಮರಾಜ ಜವಳಿ, ಶರಣರಾಜ ಛಪ್ಪರಬಂದಿ, ವೀರೇಶ ಕಲಶೆಟ್ಟಿ, ಅಣವೀರ ಪಾಟೀಲ, ಹನಮಂತರಾವ್ ಪೆಂಚನಪಳ್ಳಿ ಸೇರಿದಂತೆ ಹಲವರನ್ನು ‘ಹೆಮ್ಮೆಯ ಕನ್ನಡಿಗ ರಾಜ್ಯ ಪ್ರಶಸ್ತಿ’ ನೀಡಿ ಗೌರವಿಸಲಾಗುವುದು ಎಂದು ಪ್ರತಿಷ್ಠಾನದ ಅಧ್ಯಕ್ಷೆ ಡಾ. ಮಂಜುಳಾ ಪಾವಗಡ ತಿಳಿಸಿದ್ದಾರೆ.
ಇದೇ ಸಂದರ್ಭದಲ್ಲಿ ಪುಸ್ತಕ ಲೋಕಾರ್ಪಣೆ ಹಾಗೂ ವಿಶೇಷ ಕವಿಗೋಷ್ಠಿ ನಡೆಯಲಿದೆ. ಕವಿಗೋಷ್ಠಿಯ ಅಧ್ಯಕ್ಷತೆಯನ್ನು ಸಾಹಿತಿ ಧರ್ಮಣ್ಣ ಎಚ್. ಧನ್ನಿ ವಹಿಸಲಿದ್ದು, ಡಾ. ಶಶಿಕಲಾ ಎ.ಆರ್., ಮುರುಗೆಪ್ಪ ಹನಮನಹಳ್ಳಿ, ಸುರೇಂದ್ರ ಸ್ವಾಮಿ, ಸಿದ್ದಪ್ಪ ತಳ್ಳಳ್ಳಿ, ಪಿ.ಎಸ್. ಸಾಲಿಮಠ ಹಾಗೂ ಸಿದ್ದರಾಮಪ್ಪ ಸಿರಿಗೇರೆ ಸೇರಿದಂತೆ ಹಲವು ಸಾಹಿತಿಗಳು ಭಾಗವಹಿಸಲಿದ್ದಾರೆ.
ಜಿಲ್ಲೆಯ ವಿವಿಧ ಭಾಗಗಳಿಂದ ಆಗಮಿಸುವ ಕವಿಗಳು ತಮ್ಮ ಸ್ವರಚಿತ ಕವನಗಳನ್ನು ವಾಚಿಸಲಿದ್ದಾರೆ. ಸಾಹಿತ್ಯಾಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸುವಂತೆ ಆಯೋಜಕರು ಮನವಿ ಮಾಡಿದ್ದಾರೆ.



