ತಳಕ-ಬನ್ನಟ್ಟಿ ರಸ್ತೆ ಜಾಲಿಕಂಟಿಗಳಿಂದ ಕಿರಿದಾಗಿದೆ: ತೆರವಿಗೆ ಉಮೇಶ್ ಕೆ. ಮುದ್ನಾಳ್ ಆಗ್ರಹ

ಯಾದಗಿರಿ, ಜು. 26: ತಾಲ್ಲೂಕಿನ ತಳಕ ಗ್ರಾಮದಿಂದ ಬನ್ನಟ್ಟಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಸುಮಾರು ಒಂದು ಕಿಲೋಮೀಟರ್ ಉದ್ದದ ಮುಖ್ಯರಸ್ತೆ ಜಾಲಿಕಂಟಿಗಳಿಂದ ಆವೃತಗೊಂಡಿದ್ದು, ವಾಹನ ಸಂಚಾರಕ್ಕೆ ತೀವ್ರ ತೊಂದರೆ ಉಂಟಾಗಿದೆ ಎಂದು ಸಾಮಾಜಿಕ ಹೋರಾಟಗಾರ ಉಮೇಶ್ ಕೆ. ಮುದ್ನಾಳ್ ಆರೋಪಿಸಿದರು.
ಭಾನುವಾರ ಬೆಳಿಗ್ಗೆ ಸ್ಥಳಕ್ಕೆ ಭೇಟಿ ನೀಡಿ ರಸ್ತೆ ಪರಿಶೀಲಿಸಿದ ಬಳಿಕ ಗ್ರಾಮಸ್ಥರೊಂದಿಗೆ ಚರ್ಚಿಸಿ ಮಾತನಾಡಿದ ಅವರು, 30 ಅಡಿ ಅಗಲದ ರಸ್ತೆ ಜಾಲಿಕಂಟಿಗಳು ಬೆಳೆದು ಕೇವಲ 10 ಅಡಿಗೆ ಸೀಮಿತಗೊಂಡಿದೆ. ಪರಿಣಾಮವಾಗಿ ವಾಹನ ಸವಾರರಿಗೆ ಎದುರು ಬರುತ್ತಿರುವ ವಾಹನಗಳು ಕಾಣಿಸದೇ ಅಪಘಾತಗಳ ಸಂಭವ ಹೆಚ್ಚಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು.
ರಾತ್ರಿ ವೇಳೆ ಈ ರಸ್ತೆಯಲ್ಲಿ ಸಂಚರಿಸಲು ಭಯದ ವಾತಾವರಣ ನಿರ್ಮಾಣವಾಗಿದ್ದು, ರೈತರು, ಜಾನುವಾರುಗಳನ್ನು ಸಾಗಿಸುವವರು ಹಾಗೂ ಸಾರ್ವಜನಿಕರು ನಿತ್ಯ ಸಂಕಷ್ಟ ಅನುಭವಿಸುತ್ತಿದ್ದಾರೆ. ಎತ್ತಿನಗಾಡಿ, ಟ್ರ್ಯಾಕ್ಟರ್, ಆಟೋ ಹಾಗೂ ದ್ವಿಚಕ್ರ ವಾಹನಗಳ ಸಂಚಾರಕ್ಕೂ ಅಡಚಣೆ ಉಂಟಾಗುತ್ತಿದೆ ಎಂದು ಅವರು ಹೇಳಿದರು.
ಸಂಬಂಧಪಟ್ಟ ಅಧಿಕಾರಿಗಳ ನಿರ್ಲಕ್ಷ್ಯದಿಂದ ಸಮಸ್ಯೆ ಮತ್ತಷ್ಟು ಉಲ್ಬಣಗೊಂಡಿದ್ದು, ಜಿಲ್ಲಾಡಳಿತ ತಕ್ಷಣ ಗಮನಹರಿಸಿ ರಸ್ತೆ ಎರಡೂ ಬದಿಯ ಜಾಲಿಕಂಟಿಗಳನ್ನು ತೆರವುಗೊಳಿಸಿ ಸುಗಮ ಸಂಚಾರಕ್ಕೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಮಹಾತ್ಮ ಗಾಂಧೀಜಿಯವರ ಗ್ರಾಮ ಸ್ವರಾಜ್ಯದ ಕನಸು ಇನ್ನೂ ನನಸಾಗದಿರುವುದು ವಿಷಾದನೀಯ. ಗ್ರಾಮೀಣ ಭಾಗದ ಮೂಲಸೌಕರ್ಯಗಳ ಅಭಿವೃದ್ಧಿಗೆ ಸರ್ಕಾರ ಮತ್ತು ಜಿಲ್ಲಾಡಳಿತ ಹೆಚ್ಚಿನ ಆದ್ಯತೆ ನೀಡಬೇಕಿದೆ ಎಂದು ಅವರು ಅಭಿಪ್ರಾಯಪಟ್ಟರು.
ಈ ಸಂದರ್ಭದಲ್ಲಿ ಪವನ, ವಿಶಾಲ್, ಗಂಗಣ್ಣ, ಬಸವರಾಜ, ಅಬ್ದುಲ್, ಮರೆಪ್ಪ, ಆನಂದ, ಮಲ್ಲಪ್ಪ ಸೇರಿದಂತೆ ಗ್ರಾಮಸ್ಥರು ಉಪಸ್ಥಿತರಿದ್ದರು.



