ದೆಹಲಿಯಲ್ಲಿ ಅಲೆಮಾರಿ ಸಮುದಾಯದ ಐತಿಹಾಸಿಕ ಹೋರಾಟ
ಕಾಂಗ್ರೆಸ್ ಹೈಕಮಾಂಡ್ ಮಧ್ಯಪ್ರವೇಶದವರೆಗೂ ಹೋರಾಟ ಮುಂದುವರಿಕೆ

ದೆಹಲಿ: ಕರ್ನಾಟಕದ ಅಲೆಮಾರಿ ಸಮುದಾಯಕ್ಕೆ ಒಳ ಮೀಸಲಾತಿ ಹಂಚಿಕೆಯಲ್ಲಿ ಆಗಿರುವ ಅನ್ಯಾಯದ ವಿರುದ್ಧ ಇಂದು ನೂರಾರು ಅಲೆಮಾರಿ ಬಂಧುಗಳು ಮತ್ತು ಕಲಾವಿದರು ದೆಹಲಿಯ ಜಂತರ್ ಮಂತರಲ್ಲಿ ಭಾರೀ ಪ್ರತಿಭಟನೆ ನಡೆಸಿದರು.
ರಾಮ, ಲಕ್ಷ್ಮಣ, ರಾವಣ, ದುರ್ಗ, ಆಂಜನೇಯ ಮುಂತಾದ ವೇಷಗಳಲ್ಲಿ ಕಲಾವಿದರು ತಮ್ಮ ಕಲಾ ರೂಪಗಳ ಮೂಲಕವೇ ಸಮಾಜದ ನೋವು-ಆಕ್ರೋಶವನ್ನು ಹೊರಹಾಕಿದರು.
ಬೆಳಿಗ್ಗೆ 10ರಿಂದ ಮಧ್ಯಾಹ್ನ 12.30ರವರೆಗೆ ನಡೆದ ಪ್ರತಿಭಟನೆ ನಂತರ ಪ್ರತಿಭಟನಾಕಾರರು ಕಾಂಗ್ರೆಸ್ ಕೇಂದ್ರ ಕಛೇರಿಯತ್ತ ಹೆಜ್ಜೆ ಹಾಕಿದರು. ಭದ್ರತಾ ಕಾರಣಗಳಿಂದ ದೆಹಲಿ ಪೊಲೀಸರು ಬಸ್ಸುಗಳಲ್ಲಿ ಕರೆದೊಯ್ದರು. ಕಾಂಗ್ರೆಸ್ ಕಛೇರಿಯ ಮುಂದೆ ಪ್ರತಿಭಟನೆ ಮಾಡಿ ಆಕ್ರೋಶ ವ್ಯಕ್ತವಾದರೂ, ಪ್ರತಿನಿಧಿ ನಿಯೋಗವನ್ನಷ್ಟೇ ಒಳಗೆ ಬಿಡಲಾಯಿತು.
ಅಲ್ಲಿ ಕಾಂಗ್ರೆಸ್ ಪರವಾಗಿ ಮಾತುಕತೆ ನಡೆಸಿದ ಎಐಸಿಸಿ ಪ್ರಧಾನ ಕಾರ್ಯದರ್ಶಿ ಅಭಿಷೇಕ್ ದತ್ ಅವರು ನಿಯೋಗದ ಮಾತುಗಳನ್ನು ಕೇಳಿ, “ಖರ್ಗೆ ಆಸ್ಪತ್ರೆಯಲ್ಲಿ, ರಾಹುಲ್ ಗಾಂಧಿ ವಿದೇಶದಲ್ಲಿ ಇದ್ದಾರೆ. ಆದ್ದರಿಂದ ತಕ್ಷಣ ತೀರ್ಮಾನ ಹೇಳಲು ಸಾಧ್ಯವಿಲ್ಲ. ಆದರೆ ಸಮಸ್ಯೆಯನ್ನು ಪರಿಹರಿಸಲು ಹೈಕಮಾಂಡ್ ಜೊತೆ ಚರ್ಚಿಸಿ ಕ್ರಮ ಕೈಗೊಳ್ಳುತ್ತೇವೆ. ರಾಹುಲ್ ಗಾಂಧಿ ಬಂದ ಕೂಡಲೇ ನಿಮ್ಮಿಗೆ ಭೇಟಿಯ ವ್ಯವಸ್ಥೆ ಮಾಡುತ್ತೇವೆ” ಎಂದು ಭರವಸೆ ನೀಡಿದರು.
ಮಹಾ ಒಕ್ಕೂಟದ ನಿರ್ಣಯಗಳು ಅಂಬೇಡ್ಕರ್ ಭವನದಲ್ಲಿ ನಡೆದ ಸಭೆಯಲ್ಲಿ ಅಲೆಮಾರಿ ಮಹಾ ಒಕ್ಕೂಟವು ಈ ನಿರ್ಣಯಗಳನ್ನು ಪ್ರಕಟಿಸಿತು:
59 ಅಲೆಮಾರಿ ಜಾತಿಗಳು ಒಂದೇ ವೇದಿಕೆಯಲ್ಲಿ ಒಂದಾಗಿರುವುದು ಐತಿಹಾಸಿಕ ಹೆಜ್ಜೆ. ಹೋರಾಟವನ್ನು ನ್ಯಾಯ ಸಿಗುವ ತನಕ ಮುಂದುವರೆಸಲಾಗುವುದು. ಕಾಂಗ್ರೆಸ್ ಹೈಕಮಾಂಡ್ ಖಚಿತ ತೀರ್ಮಾನ ಕೈಗೊಳ್ಳುವ ತನಕ ದೆಹಲಿಯನ್ನೇ ತೊರೆಯುವುದಿಲ್ಲ. ಕರ್ನಾಟಕದಿಂದ ಪ್ರತಿದಿನ ಹೊಸ ತಂಡಗಳು ದೆಹಲಿಗೆ ಸೇರಬೇಕು. ಊಟ, ನೀರು, ವಸತಿ ಒದಗಿಸುತ್ತಿರುವ ದೆಹಲಿಯ ಜನತೆಗೆ ನಮನ. ಹೋರಾಟವನ್ನು ಕೆಡಿಸಲು ಯತ್ನಿಸಿದ ಬಿಜೆಪಿ ಕಾರ್ಯಕರ್ತರ ನಡೆ ಖಂಡಿಸಲಾಗಿದೆ.
ಅಲೆಮಾರಿ ಮಹಾ ಒಕ್ಕೂಟವು, “ಈ ಹೋರಾಟ ಬದುಕು-ಮರಣದ ಹೋರಾಟ. ಪರಿಹಾರ ಸಿಗುವ ತನಕ ದೆಹಲಿಯಲ್ಲಿಯೇ ತಂಗುತ್ತೇವೆ” ಎಂದು ಘೋಷಿಸಿದೆ.