ನಾಗರಪಂಚಮಿ: ಹನ್ನೆರಡು ಜ್ಯೋತಿರ್ಲಿಂಗ ದೇವಸ್ಥಾನದಲ್ಲಿ ಭಕ್ತಿಭಾವದ ಸಂಭ್ರಮ

ಕಲಬುರಗಿ: ನಗರದ ಪ್ರಶಾಂತ ನಗರದ ಹನ್ನೆರಡು ಜ್ಯೋತಿರ್ಲಿಂಗ ದೇವಸ್ಥಾನದ ಆವರಣದಲ್ಲಿ ನಾಗರಪಂಚಮಿ ಹಬ್ಬವನ್ನು ಸೋಮವಾರ ಸಾವಿರಾರು ಭಕ್ತರ ಸಮ್ಮುಖದಲ್ಲಿ ಶ್ರದ್ಧಾ–ಭಕ್ತಿಯಿಂದ ಆಚರಿಸಲಾಯಿತು.
ಶ್ರಾವಣ ಮಾಸದ ಮೊದಲ ಸೋಮವಾರ ಹಾಗೂ ನಾಗರಪಂಚಮಿ ಒಂದೇ ದಿನ ಬಂದ ಹಿನ್ನೆಲೆಯಲ್ಲಿ ದೇವಸ್ಥಾನದಲ್ಲಿ ಹಬ್ಬದ ಸಂಭ್ರಮ ಕಳೆಗಟ್ಟಿತ್ತು. ಬೆಳಗ್ಗೆಯಿಂದಲೇ ದೇವಸ್ಥಾನಕ್ಕೆ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ, ಶಿವನ ದರ್ಶನ ಪಡೆದು ವಿಶೇಷ ಪೂಜೆ ಹಾಗೂ ಹಾಲಿನ ಅಭಿಷೇಕ ನೆರವೇರಿಸಿದರು.
ದೇವಸ್ಥಾನದ ಪ್ರಧಾನ ಅರ್ಚಕ ಮಹೇಶ್ವರ ಶಾಸ್ತ್ರಿಗಳ ದಿವ್ಯ ಸಾನ್ನಿಧ್ಯದಲ್ಲಿ ಶಿವನಿಗೆ ವಿಶೇಷ ಮಹಾಭಿಷೇಕ ಹಾಗೂ ಮಹಾಮಂಗಳಾರತಿ ನೆರವೇರಿಸಲಾಯಿತು. ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಬೆಳಗ್ಗೆಯಿಂದಲೇ ನಡೆದವು.
ಶ್ರಾವಣ ಸೋಮವಾರದ ಅಂಗವಾಗಿ ದೇವಸ್ಥಾನದ ವತಿಯಿಂದ ಭಕ್ತಾದಿಗಳಿಗೆ ವಿಶೇಷ ಮಹಾಪ್ರಸಾದದ ವ್ಯವಸ್ಥೆ ಮಾಡಲಾಗಿತ್ತು. ದೇವಸ್ಥಾನದ ಸದಸ್ಯರು ಹಾಗೂ ಸಾವಿರಾರು ಭಕ್ತರು ಧಾರ್ಮಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ನಾಗರಪಂಚಮಿ ಹಾಗೂ ಶ್ರಾವಣ ಸೋಮವಾರವನ್ನು ಭಕ್ತಿ–ಸಂಭ್ರಮದಿಂದ ಆಚರಿಸಿದರು.



