ಮನೆ ಬಾಗಿಲಿಗೆ ಮಾಸಾಶನ ಮಂಜೂರಾತಿ ಪತ್ರ ತಲುಪಿಸಿ: ಮಹ್ಮದ್ ಇಬ್ರಾಹಿಂ

ಚಿತ್ತಾಪುರ: ಅಂಗವಿಕಲರು, ಹಿರಿಯ ನಾಗರಿಕರು ಹಾಗೂ ವಿವಿಧ ಸಾಮಾಜಿಕ ಭದ್ರತಾ ಯೋಜನೆಗಳಡಿ ಮಾಸಾಶನ ಪಡೆಯುವ ಫಲಾನುಭವಿಗಳ ಮನೆ ಬಾಗಿಲಿಗೆ ಮಾಸಾಶನ ಮಂಜೂರಾತಿ ಪ್ರಮಾಣಪತ್ರಗಳನ್ನು ನೇರವಾಗಿ ತಲುಪಿಸಲು ಕ್ರಮ ಕೈಗೊಳ್ಳಬೇಕು ಎಂದು ದೈಹಿಕ ಮತ್ತು ಮಾನಸಿಕ ಅಂಗವಿಕಲರ ವಿವಿಧೋದ್ದೇಶ ಕ್ಷೇಮಾಭಿವೃದ್ಧಿ ಸಂಘದ ತಾಲೂಕು ಅಧ್ಯಕ್ಷ ಮಹ್ಮದ್ ಇಬ್ರಾಹಿಂ ಒತ್ತಾಯಿಸಿದರು.
ಈ ಕುರಿತು ಗ್ರೇಡ್–2 ತಹಸೀಲ್ದಾರ್ ರಾಜಕುಮಾರ ಮರತೂರಕರ್ ಅವರಿಗೆ ಬುಧವಾರ ಮನವಿ ಸಲ್ಲಿಸಿದ ಅವರು, ಸಾರ್ವಜನಿಕರ ಕಚೇರಿ ಅಲೆದಾಟ ತಪ್ಪಿಸಿ, ಸರ್ಕಾರಿ ಸೇವೆಗಳನ್ನು ಸುಲಭವಾಗಿ ಒದಗಿಸುವ ಉದ್ದೇಶದಿಂದ ಮನೆ ಬಾಗಿಲಿಗೆ ಜಾತಿ, ಆದಾಯ ಹಾಗೂ ನಿವಾಸ ಪ್ರಮಾಣಪತ್ರಗಳನ್ನು ತಲುಪಿಸುವ ಮಹತ್ವಾಕಾಂಕ್ಷಿ ಅಭಿಯಾನವನ್ನು ಸರ್ಕಾರ ಜಾರಿಗೆ ತಂದಿರುವುದು ಸ್ವಾಗತಾರ್ಹ ಎಂದರು.
ಅದೇ ಮಾದರಿಯಲ್ಲಿ ಅಂಗವಿಕಲರು, ಹಿರಿಯ ನಾಗರಿಕರು ಸೇರಿದಂತೆ ವಿವಿಧ ಸಾಮಾಜಿಕ ಭದ್ರತಾ ಯೋಜನೆಗಳಡಿ ಪಿಂಚಣಿ ಪಡೆಯುವ ಫಲಾನುಭವಿಗಳ ಮನೆ ಬಾಗಿಲಿಗೆ ಮಾಸಾಶನ ಮಂಜೂರಾತಿ ಪ್ರಮಾಣಪತ್ರಗಳನ್ನು ತಲುಪಿಸಬೇಕು ಎಂದು ಮನವಿ ಮಾಡಿದರು.
ಸರ್ಕಾರದ ಮಾಸಾಶನ ಪಡೆಯುವ ಫಲಾನುಭವಿಗಳಿಗೆ ಆದಾಯ ಮಿತಿಯಿಂದ ವಿನಾಯಿತಿ ನೀಡಬೇಕು. ಪ್ರತಿ ತಿಂಗಳ 1ರಂದು ಫಲಾನುಭವಿಗಳ ಬ್ಯಾಂಕ್ ಖಾತೆಗೆ ಪಿಂಚಣಿ ಜಮೆಯಾಗುವಂತೆ ಕ್ರಮ ಕೈಗೊಳ್ಳಬೇಕು. ಅಂಗವಿಕಲರು ಹಾಗೂ ಹಿರಿಯ ನಾಗರಿಕರಿಗಾಗಿ ಕಚೇರಿಯಲ್ಲಿ ಪ್ರತ್ಯೇಕ ಕೌಂಟರ್ ಆರಂಭಿಸಬೇಕು ಎಂದು ಆಗ್ರಹಿಸಿದರು.
ಶಿವಮ್ಮ ಸಾತನೂರು, ಲಕ್ಷ್ಮೀ ಸಿದ್ದಣ್ಣ, ಜಾಹೀದಾ ಬೇಗಂ, ಶರಣಪ್ಪ ಬಾಹರಪೇಟ, ಜಗದೇವಪ್ಪ ಬಾಗೋಡಿ, ಅಬ್ದುಲ್ ಖಾರ್ದ, ಸಿದ್ದಪ್ಪ ನೆಡಿಗೇರಿ, ಮಲ್ಲಪ್ಪ ಸಾತನೂರು, ಮಂಜೂರ್ ಸಾಬ್, ಭೀಮರಾಯ ಬಾಹರಪೇಟ, ಮಹಿಬೂಬ್ ಸಾಬ್, ಸಿದ್ದಣ್ಣ ಬಾಹರಪೇಟ, ಮೊಗಲಪ್ಪ ಕುಂಬಾರ, ಗಂಗಮ್ಮ ಜಡಿ, ಮಲ್ಲಿನಾಥ ಪಾಟೀಲ್, ಸಾಬಣ್ಣ ನಾಲವಾರ, ಕಲ್ಯಾಣಿ ಬಾಹರಪೇಟ, ಚಂದ್ರಕಾಂತ ಬೆಲ್ಲದ, ಮಹಾದೇವಿ ಸಾತನೂರು, ದೇವಿಂದ್ರಪ್ಪ ದಿಗ್ಗಾಂವ್, ವಿಜಯಮ್ಮ ಕಾಶಿ, ಹೊನ್ನಮ್ಮ ಬಾಹರಪೇಟ, ಲಕ್ಷ್ಮೀಕಾಂತ ಚಿತ್ತಾಪುರ ಹಾಗೂ ಮಹಾದೇವಮ್ಮ ದೊಡ್ಡಮನಿ ಸೇರಿದಂತೆ ಇತರರು ಇದ್ದರು.



