ರಾಜ್ಯ

150 ಕ್ಷೇತ್ರಗಳಲ್ಲಿ ಸ್ಪರ್ಧಿಸುವ ಗುರಿ: ರಾಷ್ಟ್ರೀಯ ಸಮಾಜ ಪಕ್ಷ

ಬೆಂಗಳೂರು, ಆ.31: ರಾಷ್ಟ್ರೀಯ ಸಮಾಜ ಪಕ್ಷದ (ಆರ್‌ಎಸ್‌ಪಿ) 23ನೇ ಸಂಸ್ಥಾಪನಾ ದಿನಾಚರಣೆಯನ್ನು ನಗರದ ಗಾಂಧಿಭವನದಲ್ಲಿ ಶನಿವಾರ ಆಚರಿಸಲಾಯಿತು. ಇದೇ ಸಂದರ್ಭದಲ್ಲಿ ರಾಜ್ಯಮಟ್ಟದ ಪಕ್ಷದ ಕಾರ್ಯಕರ್ತರು ಹಾಗೂ ಪದಾಧಿಕಾರಿಗಳ ಸಮಾವೇಶವೂ ನಡೆಯಿತು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಶಿವಲಿಂಗಪ್ಪ ಕಿನ್ನೂರ್, ಆರ್‌ಎಸ್‌ಪಿ ದೇಶದ 17ಕ್ಕೂ ಹೆಚ್ಚು ರಾಜ್ಯಗಳಲ್ಲಿ ಸಕ್ರಿಯವಾಗಿದ್ದು, ಬಲವಾದ ಸಂಘಟನೆಯನ್ನು ಹೊಂದಿದೆ ಎಂದರು.‘ಮಹಾರಾಷ್ಟ್ರ ಮತ್ತು ಗುಜರಾತ್‌ನಲ್ಲಿ ಪಕ್ಷದ ಶಾಸಕರು ಹಾಗೂ ಕಾರ್ಪೊರೇಟರ್‌ಗಳು ಆಯ್ಕೆಯಾಗಿದ್ದಾರೆ. ಇದರಿಂದ ಪಕ್ಷದ ರಾಜಕೀಯ ಪ್ರಭಾವವನ್ನು ಸಾಬೀತುಪಡಿಸಲಾಗಿದೆ’ ಎಂದು ಹೇಳಿದರು.

‘ಕರ್ನಾಟಕದಲ್ಲಿ ಮುಂದಿನ ದಿನಗಳಲ್ಲಿ ಪಕ್ಷದ ಸಂಘಟನೆಯನ್ನು ಮತ್ತಷ್ಟು ಬಲಪಡಿಸಲಾಗುವುದು. ಮುಂಬರುವ ಜಿಲ್ಲಾ ಪಂಚಾಯತ ಹಾಗೂ ತಾಲ್ಲೂಕು ಪಂಚಾಯಿತಿ ಚುನಾವಣೆಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಾಗುವುದು. ಮುಂದಿನ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ 224 ಕ್ಷೇತ್ರಗಳ ಪೈಕಿ ಕನಿಷ್ಠ 150 ಕ್ಷೇತ್ರಗಳಲ್ಲಿ ಸ್ಪರ್ಧಿಸಿ, ಕನಿಷ್ಠ 10 ಸ್ಥಾನಗಳಲ್ಲಿ ಗೆಲುವು ಸಾಧಿಸುವ ಗುರಿ ಹೊಂದಲಾಗಿದೆ’ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಹಲವು ಯುವಕರು ಹಾಗೂ ಮಹಿಳೆಯರು ಪಕ್ಷಕ್ಕೆ ಸೇರ್ಪಡೆಯಾದರು.ಮಾಜಿ ರಾಷ್ಟ್ರೀಯ ಅಧ್ಯಕ್ಷ ಸಿದ್ದಪ್ಪ ಲಕ್ಷಣ ಅಕ್ಕಿಸಾಗರ್, ರಾಷ್ಟ್ರೀಯ ಕಾರ್ಯದರ್ಶಿ ಗೋವಿಂದರಾಮ್ ಸುರ್ನಾರ್, ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಶರಣಬಸಪ್ಪ ದೊಡ್ಡಮನಿ, ರಾಜ್ಯ ಉಸ್ತುವಾರಿ ಶಿವಲಿಂಗಪ್ಪ ಜೋಗಿನ್, ಯುವ ಘಟಕದ ರಾಜ್ಯಾಧ್ಯಕ್ಷ ದೇವೇಂದ್ರ ಕ್ಯಾಚಪ್ಪಳ್ಳಿ, ಜಿಲ್ಲಾಧ್ಯಕ್ಷ ಶ್ರೀಮಂತ ಮಾವನೂರ್, ಸುನಿಲ್ ಕಿನ್ನೂರ್, ಮಾಂತು ಅವರಾದ ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದರು.

Related Articles

Leave a Reply

Your email address will not be published. Required fields are marked *

Back to top button