ಕಾರ್ಮಿಕ ಸಚಿವ ಸಂತೋಷ ಲಾಡ್ ಕ್ಷಮೆ ಕೇಳಬೇಕು – ಸಂಗಮೇಶ ಹಡಪದ ಆಗ್ರಹ

ಕಲಬುರಗಿ: ಕಾರ್ಮಿಕ ಸಚಿವ ಸಂತೋಷ ಲಾಡ್ ಅವರು ಮಾತನಾಡುವ ವೇಳೆ ಕಾಯಕ ಸಮಾಜಕ್ಕೆ ಸಂಬಂಧಿಸಿದ ನಿಷೇಧಿತ ಪದವನ್ನು ಬಳಸಿ ಶರಣರ ಸಮಾಜಕ್ಕೆ ಅಪಮಾನ ಮಾಡಿದ್ದಾರೆ ಎಂದು ಕಲಬುರಗಿಯ ಹಡಪದ ಸಮಾಜದ ಯುವ ಮುಖಂಡ ಸಂಗಮೇಶ ಹಡಪದ ಎಚ್. ಹೊಸಳ್ಳಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಚಿವ ಸಂತೋಷ ಲಾಡ್ ಅವರು ಸೋಮವಾರ ಬೆಂಗಳೂರಿನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡುವ ಸಂದರ್ಭದಲ್ಲಿ ಈ ನಿಷೇಧಿತ ಪದವನ್ನು ಬಳಸಿರುವುದು ಅಕ್ಷಮ್ಯ ಅಪರಾಧವಾಗಿದೆ. ಜವಾಬ್ದಾರಿಯುತ ಸಚಿವ ಸ್ಥಾನದಲ್ಲಿರುವವರು ಮಾತನಾಡುವ ಭರದಲ್ಲಿ ಒಂದು ಕಾಯಕ ಸಮಾಜಕ್ಕೆ ಅಪಮಾನ ಮಾಡಿರುವುದು ಸರಿಯಲ್ಲ ಎಂದು ಅವರು ಹೇಳಿದ್ದಾರೆ.
ಶರಣ ಪರಂಪರೆಯ ಹಡಪದ ಅಪ್ಪಣ್ಣ ಸಮಾಜ ಹಾಗೂ ಕ್ಷೌರಿಕ ಸಮುದಾಯವು ಗೌರವಯುತ ಕಾಯಕವನ್ನು ಜೀವನಾಧಾರವನ್ನಾಗಿ ಮಾಡಿಕೊಂಡಿದ್ದು, ಇಂತಹ ಪದ ಬಳಕೆ ಸಮಾಜದ ಭಾವನೆಗಳಿಗೆ ಧಕ್ಕೆ ತಂದಿದೆ ಎಂದು ಅವರು ಆರೋಪಿಸಿದ್ದಾರೆ. ಆದ್ದರಿಂದ ಕಾರ್ಮಿಕ ಸಚಿವ ಸಂತೋಷ ಲಾಡ್ ಅವರು ಕೂಡಲೇ ಮಾಧ್ಯಮಗಳ ಮೂಲಕವೇ ಹಡಪದ ಅಪ್ಪಣ್ಣ ಸಮಾಜ ಹಾಗೂ ಕ್ಷೌರಿಕ ಸಮುದಾಯಕ್ಕೆ ಸಾರ್ವಜನಿಕವಾಗಿ ಕ್ಷಮೆ ಕೇಳಬೇಕು ಎಂದು ಪ್ರಕಟಣೆಯಲ್ಲಿ ಒತ್ತಾಯಿಸಿದ್ದಾರೆ.



