ಲೋಡ್‌ಶೆಡ್ಡಿಂಗ್ ಕೈಬಿಡಿ: ಪಂಪ್‌ಸೆಟ್ ರೈತರ ಆಗ್ರಹ
ಜೆಸ್ಕಾಂ ಕಚೇರಿ ಎದುರು ಕಬ್ಬಿನೊಂದಿಗೆ ರೈತ ಸಂಘದ ಪ್ರತಿಭಟನೆ

ಕಲಬುರಗಿ, ಸೆ.15: ಪಂಪ್‌ಸೆಟ್ ರೈತರಿಗೆ ವಿದ್ಯುತ್ ಲೋಡ್‌ಶೆಡ್ಡಿಂಗ್ ಕೈಬಿಟ್ಟು ಸಮರ್ಪಕ ತ್ರಿಫೇಸ್ ವಿದ್ಯುತ್ ಪೂರೈಸಬೇಕು ಎಂದು ಆಗ್ರಹಿಸಿ ಕರ್ನಾಟಕ ಪ್ರಾಂತ ರೈತ ಸಂಘದ ಕಾರ್ಯಕರ್ತರು ಮಂಗಳವಾರ ನಗರದಲ್ಲಿ ಪ್ರತಿಭಟನೆ ನಡೆಸಿದರು.
ಕಬ್ಬಿನೊಂದಿಗೆ ಗುಲಬರ್ಗಾ ವಿದ್ಯುತ್ ಪ್ರಸರಣಾ ನಿಗಮದ (ಜೆಸ್ಕಾಂ) ಕಚೇರಿ ಎದುರು ಪ್ರತಿಭಟನೆ ನಡೆಸಿದ ಕಾರ್ಯಕರ್ತರು, ರೈತ ವಿರೋಧಿ ವಿದ್ಯುತ್ ನೀತಿಯನ್ನು ಕೈಬಿಡಬೇಕು ಎಂದು ಒತ್ತಾಯಿಸಿದರು. ಪ್ರತಿಭಟನೆಗೆ ಸಂಘದ ಜಿಲ್ಲಾಧ್ಯಕ್ಷ ಶರಣಬಸಪ್ಪ ಮಮಶೆಟ್ಟಿ ನೇತೃತ್ವ ವಹಿಸಿದ್ದರು.
ಬಳಿಕ ಜೆಸ್ಕಾಂ ವ್ಯವಸ್ಥಾಪಕ ನಿರ್ದೇಶಕರಿಗೆ ಮನವಿ ಸಲ್ಲಿಸಿದ ಪ್ರತಿಭಟನಾಕಾರರು, ಪಂಪ್‌ಸೆಟ್‌ಗಳಿಗೆ ನಿರಂತರ ಹಾಗೂ ಸಮರ್ಪಕ ತ್ರಿಫೇಸ್ ವಿದ್ಯುತ್ ಪೂರೈಕೆ ಮಾಡಬೇಕು. ವಿದ್ಯುತ್ ಸಮಸ್ಯೆಯಿಂದ ಬೆಳೆಗಳು ಒಣಗುತ್ತಿರುವ ಸಂದರ್ಭದಲ್ಲಿ ಲೋಡ್‌ಶೆಡ್ಡಿಂಗ್ ಮಾಡುವುದು ರೈತರ ಸಂಕಷ್ಟವನ್ನು ಮತ್ತಷ್ಟು ಹೆಚ್ಚಿಸುತ್ತಿದೆ ಎಂದು ದೂರಿದರು.
ಟ್ರಾನ್ಸ್‌ಫಾರ್ಮರ್ ಕೊರತೆ
ಪಂಪ್‌ಸೆಟ್‌ಗಳ ಟ್ರಾನ್ಸ್‌ಫಾರ್ಮರ್ ಸುಟ್ಟರೆ ತಕ್ಷಣವೇ ಹೊಸ ಟ್ರಾನ್ಸ್‌ಫಾರ್ಮರ್ ಅಳವಡಿಸಬೇಕು. ವಿಳಂಬವಾದರೆ ಬೆಳೆಗಳು ಒಣಗಿ ರೈತರಿಗೆ ಭಾರಿ ನಷ್ಟವಾಗುತ್ತದೆ. ಅಲ್ಲದೆ ಟ್ರಾನ್ಸ್‌ಫಾರ್ಮರ್ ಆಯಿಲ್ ಕೊರತೆಯಿಂದಲೂ ರೈತರು ಸಮಸ್ಯೆ ಎದುರಿಸುತ್ತಿದ್ದಾರೆ. ಜೆಸ್ಕಾಂ ಇಲಾಖೆಯ ನಿರ್ಲಕ್ಷ್ಯದಿಂದ ಈ ಸಮಸ್ಯೆ ಉಂಟಾಗಿದೆ ಎಂದು ಆರೋಪಿಸಿದರು.
ಜಿಲ್ಲೆಯಲ್ಲಿ ಬರ ಪರಿಸ್ಥಿತಿ ತೀವ್ರವಾಗಿದ್ದು, ಬಾವಿ, ಕೊಳವೆಬಾವಿ, ಹಳ್ಳ, ಕೊಳ್ಳ, ನಾಲ ಸೇರಿದಂತೆ ಜಲಮೂಲಗಳು ಬತ್ತಿಹೋಗಿವೆ. ಜಾನುವಾರುಗಳಿಗೆ ಹಾಗೂ ಜನರಿಗೆ ನೀರಿನ ಸಮಸ್ಯೆ ಎದುರಾಗಿದೆ. ಇಂತಹ ಸಂದರ್ಭದಲ್ಲಿ ರೈತರ ಬೆಳೆಗಳನ್ನು ಉಳಿಸಿಕೊಳ್ಳಲು ವಿದ್ಯುತ್ ಪೂರೈಕೆ ಅತ್ಯಗತ್ಯವಾಗಿದೆ ಎಂದು ಹೇಳಿದರು.
ಕಬ್ಬು, ಪಪ್ಪಾಯಿ, ಹತ್ತಿ, ಈರುಳ್ಳಿ ಹಾಗೂ ವಿವಿಧ ತರಕಾರಿ ಬೆಳೆಗಳು ನೀರಿನ ಕೊರತೆ ಮತ್ತು ವಿದ್ಯುತ್ ಸಮಸ್ಯೆಯಿಂದ ಒಣಗುತ್ತಿವೆ. ಈಗಾಗಲೇ ಬರದಿಂದ ಸಂಕಷ್ಟದಲ್ಲಿರುವ ರೈತರಿಗೆ ವಿದ್ಯುತ್ ಸಮಸ್ಯೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ಪಂಪ್‌ಸೆಟ್ ರೈತರ ಸಂಕಷ್ಟ ಮಿತಿಮೀರಿದ್ದು, ಕೂಡಲೇ ಸಮಸ್ಯೆ ಪರಿಹರಿಸಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಸಿದ್ದಪ್ಪ ಕಲಶೆಟ್ಟಿ, ದೇವು ಬಿರಾದಾರ್, ಚಂದಪ್ಪ ಪೂಜಾರಿ, ಸಾಯಿಬಣ್ಣ ಕೊರಬಾ, ವೀರಣಗೌಡ, ನಾಗಯ್ಯಸ್ವಾಮಿ ಸೇರಿದಂತೆ ಸಂಘದ ಕಾರ್ಯಕರ್ತರು ಪಾಲ್ಗೊಂಡಿದ್ದರು.



