ಕಲಬುರಗಿಜಿಲ್ಲೆ ಸುದ್ದಿ

ಎಐ ಬೆಳೆದರೂ ಶಿಕ್ಷಕರ ಸ್ಥಾನ ತುಂಬಲು ಸಾಧ್ಯವಿಲ್ಲ: ಪ್ರಿಯಾಂಕ್ ಖರ್ಗೆ

ಮಕ್ಕಳಲ್ಲಿ ವೈಜ್ಞಾನಿಕ ಮನೋಭಾವ, ಪ್ರಶ್ನಿಸುವ ಸಾಮರ್ಥ್ಯ ಬೆಳೆಸಲು ಕರೆ; 24 ಅತ್ಯುತ್ತಮ ಶಿಕ್ಷಕರಿಗೆ ಜಿಲ್ಲಾ ಪ್ರಶಸ್ತಿ

ಕಲಬುರಗಿ, ಸೆ.15: ಕೃತಕ ಬುದ್ಧಿಮತ್ತೆ (ಎಐ) ತಂತ್ರಜ್ಞಾನ ಎಷ್ಟೇ ಅಭಿವೃದ್ಧಿಯಾದರೂ ಶಿಕ್ಷಕರ ಸ್ಥಾನವನ್ನು ತುಂಬಲು ಸಾಧ್ಯವಿಲ್ಲ. ಪ್ರಶ್ನೆ ಕೇಳಿದರೆ ಎಐ ಉತ್ತರ ನೀಡಬಹುದು. ಆದರೆ ಮಕ್ಕಳಲ್ಲಿ ಪ್ರಶ್ನಿಸುವ ಸಾಮರ್ಥ್ಯ ಮತ್ತು ಕುತೂಹಲ ಬೆಳೆಸಲು ತಂತ್ರಜ್ಞಾನದಿಂದ ಸಾಧ್ಯವಿಲ್ಲ ಎಂದು ಗೃಹ, ಐಟಿ-ಬಿಟಿ, ಇ-ಆಡಳಿತ ಹಾಗೂ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.

ನಗರದ ಡಾ. ಎಸ್.ಎಂ. ಪಂಡಿತ ರಂಗಮಂದಿರದಲ್ಲಿ ಜಿಲ್ಲಾ ಪಂಚಾಯಿತಿ ಹಾಗೂ ಶಾಲಾ ಶಿಕ್ಷಣ ಇಲಾಖೆ ವತಿಯಿಂದ ಮಂಗಳವಾರ ಆಯೋಜಿಸಿದ್ದ 2026–27ನೇ ಸಾಲಿನ ಜಿಲ್ಲಾ ಮಟ್ಟದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಹಾಗೂ ಅತ್ಯುತ್ತಮ ಶಿಕ್ಷಕರಿಗೆ ಪ್ರಶಸ್ತಿ ಪ್ರದಾನ ಮಾಡಿ ಅವರು ಮಾತನಾಡಿದರು.

ಮಕ್ಕಳಲ್ಲಿ ಮೌಲ್ಯಯುತ ಶಿಕ್ಷಣ ಬಿತ್ತುವ ಬಹುದೊಡ್ಡ ಜವಾಬ್ದಾರಿ ಶಿಕ್ಷಕರ ಮೇಲಿದೆ. ಎಐ ತಂತ್ರಜ್ಞಾನ ಬಂದಿರುವುದರಿಂದ ಶಿಕ್ಷಕರ ಜವಾಬ್ದಾರಿ ಕಡಿಮೆಯಾಗುವುದಿಲ್ಲ. ಬದಲಾಗಿ ದಿನದಿಂದ ದಿನಕ್ಕೆ ಹೆಚ್ಚಾಗಲಿದೆ. ಮಕ್ಕಳಿಗೆ ಸರಿ–ತಪ್ಪಿನ ಅರಿವು ಮೂಡಿಸುವುದು, ವೈಜ್ಞಾನಿಕ ಚಿಂತನೆ ಬೆಳೆಸುವುದು ಹಾಗೂ ಪ್ರಶ್ನಿಸುವ ಧೈರ್ಯ ನೀಡುವುದು ಶಿಕ್ಷಕರ ಕರ್ತವ್ಯ ಎಂದರು.

ಸ್ಮಾರ್ಟ್‌ ಕ್ಲಾಸ್‌ನಿಂದ ಮಕ್ಕಳು ಸ್ಮಾರ್ಟ್ ಆಗುವುದಿಲ್ಲ

ಸ್ಮಾರ್ಟ್‌ ಕ್ಲಾಸ್‌ ನಿರ್ಮಿಸಿದ ಮಾತ್ರಕ್ಕೆ ಮಕ್ಕಳು ಸ್ಮಾರ್ಟ್‌ ಆಗುವುದಿಲ್ಲ. ಪುರಾಣ, ಪ್ರವಚನಗಳ ಜತೆಗೆ ವೈಜ್ಞಾನಿಕ ಚಿಂತನೆ ಹಾಗೂ ಕುತೂಹಲ ಬೆಳೆಸುವ ಶಿಕ್ಷಣ ನೀಡಬೇಕು. ಮಕ್ಕಳು ಪ್ರಶ್ನೆ ಮಾಡುವ ಧೈರ್ಯ ತೋರಿದಾಗ ಮಾತ್ರ ಅವರನ್ನು ನಿಜವಾದ ಅರ್ಥದಲ್ಲಿ ಸ್ಮಾರ್ಟ್‌ ಎಂದು ಕರೆಯಬಹುದು ಎಂದು ಹೇಳಿದರು.

ಪ್ರಬುದ್ಧ ಸಮಾಜ ನಿರ್ಮಾಣದಲ್ಲಿ ಶಿಕ್ಷಕರ ಪಾತ್ರ ಮಹತ್ವದ್ದಾಗಿದೆ. ಉತ್ತಮ ನಾಗರಿಕರಿಂದ ಉತ್ತಮ ಸಮಾಜ ಹಾಗೂ ದೇಶ ನಿರ್ಮಾಣ ಸಾಧ್ಯ. ಇಂತಹ ಪವಿತ್ರ ಕಾರ್ಯದ ಜವಾಬ್ದಾರಿ ಶಿಕ್ಷಕರ ಮೇಲಿದೆ. ನಗರದಲ್ಲಿ ಗುರುಭವನ ನಿರ್ಮಾಣಕ್ಕೆ ಶಿಕ್ಷಕರ ಸಂಘ ಬೇಡಿಕೆ ಸಲ್ಲಿಸಿದ್ದು, ಕೆಡಿಎ ನಿವೇಶನದಲ್ಲಿ ಕಡಿಮೆ ದರದಲ್ಲಿ ಜಾಗ ಒದಗಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.

ಜಿಲ್ಲೆಯ ಎಸ್‌ಎಸ್‌ಎಲ್‌ಸಿ ಫಲಿತಾಂಶ ಕುಸಿದಾಗ ಜನರು ನನ್ನನ್ನೂ ಶಿಕ್ಷಕರನ್ನೂ ಟೀಕಿಸುತ್ತಾರೆ. ಅದಕ್ಕೆ ತಲೆಕೆಡಿಸಿಕೊಳ್ಳದೆ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿ ಹಾಗೂ ಉತ್ತಮ ಫಲಿತಾಂಶಕ್ಕಾಗಿ ನಿರಂತರವಾಗಿ ಪ್ರಯತ್ನಿಸಬೇಕು ಎಂದು ಶಿಕ್ಷಕರಿಗೆ ಕರೆ ನೀಡಿದರು.

24 ಶಿಕ್ಷಕರಿಗೆ ಪ್ರಶಸ್ತಿ

ಜಿಲ್ಲಾ ಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿಯನ್ನು ಪ್ರಾಥಮಿಕ ಶಾಲಾ ವಿಭಾಗದ 16 ಹಾಗೂ ಪ್ರೌಢಶಾಲಾ ವಿಭಾಗದ ಎಂಟು ಮಂದಿ ಸೇರಿದಂತೆ ಒಟ್ಟು 24 ಶಿಕ್ಷಕರಿಗೆ ಸಚಿವ ಪ್ರಿಯಾಂಕ್ ಖರ್ಗೆ ಪ್ರದಾನ ಮಾಡಿದರು. ಕಲಬುರಗಿ ಜಿಲ್ಲೆಯಿಂದ ರಾಜ್ಯ ಮಟ್ಟದ ಪ್ರಶಸ್ತಿಗೆ ಆಯ್ಕೆಯಾದ ನಿಂಗಪ್ಪ ಅವರನ್ನು ಇದೇ ಸಂದರ್ಭದಲ್ಲಿ ವಿಶೇಷವಾಗಿ ಸನ್ಮಾನಿಸಲಾಯಿತು.

ಪ್ರಾಥಮಿಕ ವಿಭಾಗ: ಅಫಜಲಪುರದ ರಾಘವಚಾರ್ಯ ಆರ್. ಜೋಶಿ, ಚೆನ್ನಮ್ಮ ಗುಣಾರಿ, ಆಳಂದದ ಚಂದ್ರಕಾಂತ ಎನ್. ಬಬಲಾದಕರ್, ಮಹಾದೇವ ಬಿ. ಗುಣಕಿ, ಚಿಂಚೋಳಿಯ ದಶರಥ, ಸಂಗ್ರಾಮಪ್ಪ ಉಚ್ಚೇದ, ಚಿತ್ತಾಪುರದ ಶಂಕರ ಧೂಳಪ್ಪ ಭಾವಿಮನಿ, ರಾಧಿಕಾ ಹೊಸೂರ, ಕಲಬುರಗಿ ಉತ್ತರದ ಪರಮೇಶ್ವರ ಎಚ್. ಕುಂಬಾರ, ನಿಂಗಪ್ಪ ಬಿ. ಪೂಜಾರಿ, ಕಲಬುರಗಿ ದಕ್ಷಿಣದ ಸರಸ್ವತಿ ಲಚ್ಯಾಣ, ಸೂರ್ಯಕಾಂತ ನಿಂಬರ್ಗಾ, ಕಲಬುರಗಿ ಜಗತ್‌ನ ಸಿದ್ದಪ್ಪ ಶರಣಪ್ಪ ಹೂಗಾರ, ಜೇವರ್ಗಿಯ ಅನಿತಾ ಕಾಂಬಳೆ, ಸೇಡಂನ ನಿಶಾತ್ ಫಾತೀಮಾ ಹಾಗೂ ವಿಜಯಕುಮಾರ ಪ್ರಶಸ್ತಿ ಪಡೆದರು.

ಪ್ರೌಢಶಾಲಾ ವಿಭಾಗ: ಆಳಂದದ ಪಾಟೀಲ ಲಕ್ಷ್ಮೀ, ಚಿಂಚೋಳಿಯ ವಹಾಬ್ ಪಟೇಲ್, ಚಿತ್ತಾಪುರದ ಅಪ್ಪಯ್ಯ ಎಸ್. ಹಿರೇಮಠ, ಕಲಬುರಗಿ ಉತ್ತರದ ಸಂಗೀತಾ ಠಾಕೂರ, ಕಲಬುರಗಿ ದಕ್ಷಿಣದ ಅಂಬುಜಾ ದೇಶಪಾಂಡೆ, ಅಫಜಲಪುರದ ರಾಜಶೇಖರ, ಜೇವರ್ಗಿಯ ಸೋಮಶೇಖರ ಹಿರೇಮಠ ಹಾಗೂ ಸೇಡಂನ ಹನುಮಂತ ರೆಡ್ಡಿ ಪ್ರಶಸ್ತಿಗೆ ಭಾಜನರಾದರು.

ಕಲಬುರಗಿ ದಕ್ಷಿಣ ಶಾಸಕ ಅಲ್ಲಮಪ್ರಭು ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ಕರ್ನಾಟಕ ರೇಷ್ಮೆ ಉದ್ಯಮಗಳ ನಿಗಮದ ಅಧ್ಯಕ್ಷರು ಹಾಗೂ ಕಲಬುರಗಿ ಉತ್ತರ ಶಾಸಕಿ ಕನೀಜ್ ಫಾತೀಮಾ, ಜೆಸ್ಕಾಂ ಅಧ್ಯಕ್ಷ ಪ್ರವೀಣ ಪಾಟೀಲ ಹರವಾಳ, ಕೆಕೆಆರ್‌ಟಿಸಿ ಅಧ್ಯಕ್ಷ ಅರುಣಕುಮಾರ ಪಾಟೀಲ, ಕೆಡಿಎ ಅಧ್ಯಕ್ಷ ಮಜಹರ್ ಆಲಂ ಖಾನ್, ಜಿಲ್ಲಾ ಪಂಚಾಯಿತಿ ಸಿಇಒ ರಾಹುಲ್ ಸಂಕನೂರ, ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಬಸವರಾಜ ಬಳೂಂಡಗಿ, ಡಿಡಿಪಿಐ ಶಂಕ್ರೆಮ್ಮ ಡವಳಗಿ ಸೇರಿದಂತೆ ಶಿಕ್ಷಕರ ಸಂಘದ ಪ್ರತಿನಿಧಿಗಳು ಹಾಗೂ ನೂರಾರು ಶಿಕ್ಷಕರು ಪಾಲ್ಗೊಂಡಿದ್ದರು.

ಇದಕ್ಕೂ ಮುನ್ನ ಸಂಪನ್ಮೂಲ ವ್ಯಕ್ತಿ ಜಗನ್ನಾಥ ರಾವ್ ಅವರು ‘ಶಿಕ್ಷಕರ ವೃತ್ತಿ ಬದುಕು’ ಕುರಿತು ಉಪನ್ಯಾಸ ನೀಡಿದರು.

Related Articles

Leave a Reply

Your email address will not be published. Required fields are marked *

Back to top button