ಗೃಹಜ್ಯೋತಿ ಫಲಾನುಭವಿಗಳಿಗೆ ವಿದ್ಯುತ್ ಬಿಲ್ ಶಾಕ್
ಶಿವಾಜಿನಗರ ಸೇರಿ ಹಲವು ಪ್ರದೇಶಗಳಲ್ಲಿ ₹4–5 ಸಾವಿರದವರೆಗೆ ಬಿಲ್; ತಾಂತ್ರಿಕ ದೋಷದ ಶಂಕೆ

ಬೆಂಗಳೂರು, ಸೆ.14: ಪ್ರತಿ ತಿಂಗಳು ‘ಜೀರೋ ಬಿಲ್’ ಪಡೆಯುತ್ತಿದ್ದ ಗೃಹಜ್ಯೋತಿ ಯೋಜನೆಯ ಫಲಾನುಭವಿಗಳಿಗೆ ಈ ಬಾರಿ ವಿದ್ಯುತ್ ಬಿಲ್ ಶಾಕ್ ಎದುರಾಗಿದೆ. ನಗರದ ಶಿವಾಜಿನಗರದ ಮಖಾನ್ ಕಾಂಪೌಂಡ್ ಸೇರಿದಂತೆ ಹಲವು ಪ್ರದೇಶಗಳ ನೂರಾರು ಕುಟುಂಬಗಳಿಗೆ ಏಕಾಏಕಿ ₹4 ಸಾವಿರದಿಂದ ₹5 ಸಾವಿರದವರೆಗೆ ವಿದ್ಯುತ್ ಬಿಲ್ ಬಂದಿರುವುದು ನಿವಾಸಿಗಳ ಆಕ್ರೋಶಕ್ಕೆ ಕಾರಣವಾಗಿದೆ.
ಸಣ್ಣ ಮನೆಗಳಿಗೂ ಸಾವಿರಾರು ರೂಪಾಯಿ ಬಿಲ್ ಬಂದಿರುವುದರಿಂದ ಗೊಂದಲಕ್ಕೊಳಗಾದ ನಿವಾಸಿಗಳು, ಗೃಹಜ್ಯೋತಿ ಯೋಜನೆಯಡಿ ಉಚಿತ ವಿದ್ಯುತ್ ಸೌಲಭ್ಯ ಪಡೆಯುತ್ತಿರುವಾಗ ಇಷ್ಟೊಂದು ಮೊತ್ತದ ಬಿಲ್ ಹೇಗೆ ಬಂದಿದೆ ಎಂದು ಬೆಸ್ಕಾಂ ಅಧಿಕಾರಿಗಳನ್ನು ಪ್ರಶ್ನಿಸಿದ್ದಾರೆ.
ಕಳೆದ ತಿಂಗಳುಗಳವರೆಗೆ ಯಾವುದೇ ಮೊತ್ತ ಪಾವತಿಸದೆ ‘ಜೀರೋ ಬಿಲ್’ ಪಡೆಯುತ್ತಿದ್ದ ಕುಟುಂಬಗಳಿಗೆ ದಿಢೀರ್ ದೊಡ್ಡ ಮೊತ್ತದ ಬಿಲ್ ಬಂದಿರುವುದು ಆತಂಕಕ್ಕೆ ಕಾರಣವಾಗಿದೆ. ಬಿಲ್ ಪಾವತಿಸಬೇಕೇ ಅಥವಾ ಇಲ್ಲವೇ ಎಂಬ ಗೊಂದಲವೂ ಫಲಾನುಭವಿಗಳಲ್ಲಿ ಉಂಟಾಗಿದೆ.
ತಾಂತ್ರಿಕ ದೋಷದ ಶಂಕೆ
ಬೆಸ್ಕಾಂ ಮೂಲಗಳ ಪ್ರಕಾರ, ಕಳೆದ ಎರಡು ತಿಂಗಳಿಂದ ಬಿಲ್ಲಿಂಗ್ ಸಾಫ್ಟ್ವೇರ್ ಅಥವಾ ಸರ್ವರ್ನಲ್ಲಿ ಉಂಟಾಗಿರುವ ತಾಂತ್ರಿಕ ಸಮಸ್ಯೆಯಿಂದಾಗಿ ಕೆಲವು ಗ್ರಾಹಕರ ಗೃಹಜ್ಯೋತಿ ಉಚಿತ ವಿದ್ಯುತ್ ಯೂನಿಟ್ಗಳ ಲೆಕ್ಕಾಚಾರದಲ್ಲಿ ವ್ಯತ್ಯಾಸವಾಗಿರುವ ಸಾಧ್ಯತೆ ಇದೆ.
ಉಚಿತವಾಗಿ ಲಭ್ಯವಾಗಬೇಕಿದ್ದ ಯೂನಿಟ್ಗಳನ್ನು ಸರಿಯಾಗಿ ಪರಿಗಣಿಸದೆ, ಗ್ರಾಹಕರ ಒಟ್ಟು ವಿದ್ಯುತ್ ಬಳಕೆಯನ್ನು ಆಧರಿಸಿ ಬಿಲ್ ಸೃಷ್ಟಿಯಾಗಿರುವ ಸಾಧ್ಯತೆಯೂ ಇದೆ ಎನ್ನಲಾಗಿದೆ. ಹೀಗಾಗಿ, ಹಿಂದೆ ‘ಜೀರೋ ಬಿಲ್’ ಪಡೆಯುತ್ತಿದ್ದ ಕೆಲವರಿಗೆ ಇದೀಗ ₹4–5 ಸಾವಿರದಷ್ಟು ಮೊತ್ತ ನಮೂದಾಗಿರಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸ್ಪಷ್ಟನೆಗೆ ಆಗ್ರಹ
ತಾಂತ್ರಿಕ ದೋಷದಿಂದಲೇ ಬಿಲ್ನಲ್ಲಿ ವ್ಯತ್ಯಾಸ ಉಂಟಾಗಿದ್ದರೆ, ಬೆಸ್ಕಾಂ ಕೂಡಲೇ ಅದನ್ನು ಪರಿಶೀಲಿಸಿ ಸರಿಪಡಿಸಬೇಕು. ಜತೆಗೆ, ಗ್ರಾಹಕರು ಪಾವತಿಸಬೇಕಾದ ನಿಖರ ಮೊತ್ತದ ಕುರಿತು ಸ್ಪಷ್ಟನೆ ನೀಡಬೇಕು ಎಂದು ನಿವಾಸಿಗಳು ಆಗ್ರಹಿಸಿದ್ದಾರೆ.
ಗೃಹಜ್ಯೋತಿ ಯೋಜನೆಯನ್ನೇ ಅವಲಂಬಿಸಿರುವ ಬಡ ಹಾಗೂ ಮಧ್ಯಮ ವರ್ಗದ ಕುಟುಂಬಗಳಿಗೆ ದಿಢೀರ್ ಸಾವಿರಾರು ರೂಪಾಯಿ ಬಿಲ್ ಬಂದಿರುವುದು ಮತ್ತಷ್ಟು ಆರ್ಥಿಕ ಹೊರೆಯಾಗುವ ಆತಂಕ ಎದುರಾಗಿದೆ. ಈ ಹಿನ್ನೆಲೆಯಲ್ಲಿ ಬೆಸ್ಕಾಂ ಕೈಗೊಳ್ಳುವ ಮುಂದಿನ ಕ್ರಮದತ್ತ ಫಲಾನುಭವಿಗಳು ಗಮನಹರಿಸಿದ್ದಾರೆ.



