ಎರಡು ವರ್ಷಗಳ ಹೋರಾಟಕ್ಕೆ ಫಲ: ತಳವಾರ ಸಮುದಾಯಕ್ಕೆ ಎಸ್ಟಿ ಪ್ರಮಾಣಪತ್ರ

ಅಫಜಲಪುರ: ಪರಿಶಿಷ್ಟ ಪಂಗಡ (ಎಸ್ಟಿ) ಜಾತಿ ಪ್ರಮಾಣಪತ್ರಕ್ಕಾಗಿ ತಳವಾರ ಸಮುದಾಯದವರು ಎರಡು ವರ್ಷಗಳಿಂದ ನಡೆಸಿಕೊಂಡು ಬಂದಿದ್ದ ಹೋರಾಟಕ್ಕೆ ಫಲ ದೊರೆತಿದ್ದು, ಅಫಜಲಪುರ ತಾಲ್ಲೂಕಿನಲ್ಲಿ ಅರ್ಹ ಫಲಾನುಭವಿಗಳಿಗೆ ಎಸ್ಟಿ ಪ್ರಮಾಣಪತ್ರಗಳನ್ನು ವಿತರಿಸಲಾಯಿತು.
ಅಫಜಲಪುರ ಶಾಸಕ ಎಂ.ವೈ. ಪಾಟೀಲ ಅವರು ತಳವಾರ ಸಮುದಾಯದ ಫಲಾನುಭವಿಗಳಿಗೆ ಪ್ರಮಾಣಪತ್ರಗಳನ್ನು ವಿತರಿಸಿದರು.
ಎಸ್ಟಿ ಪ್ರಮಾಣಪತ್ರಕ್ಕಾಗಿ ಕಳೆದ ಎರಡು ವರ್ಷಗಳಿಂದ ಸಮುದಾಯದ ಮುಖಂಡರು ಹಾಗೂ ಸದಸ್ಯರು ವಿವಿಧ ಹಂತಗಳಲ್ಲಿ ಹೋರಾಟ ಮತ್ತು ಚಳವಳಿ ನಡೆಸಿದ್ದರು. ಇದೀಗ ಪ್ರಮಾಣಪತ್ರ ವಿತರಣೆ ಆರಂಭವಾಗಿರುವುದು ಸಮುದಾಯದವರಲ್ಲಿ ಸಂತಸ ಮೂಡಿಸಿದೆ.
ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ತಳವಾರ ಮಹಾಸಭಾದ ಕಲಬುರಗಿ ಜಿಲ್ಲಾಧ್ಯಕ್ಷ ಚಂದ್ರಕಾಂತ ದಶರಥ ತಳವಾರ, ಅಖಿಲ ಕರ್ನಾಟಕ ಮಹರ್ಷಿ ವಾಲ್ಮೀಕಿ ತಳವಾರ ಸಮಾಜ ಸಂಘದ ಅಧ್ಯಕ್ಷ ಸಂತೋಷ ತಳವಾರ, ಸಿದ್ದಾರಾಮ ಚಿಕ್ಕವಲಗಿ, ಪ್ರವೀಣ ತೆಗ್ಗೆಳ್ಳಿ, ಯಲ್ಲಪ್ಪ ತಳವಾರ, ಬಸವರಾಜ ತಳವಾರ, ಭೀಮಾಶಂಕರ ನಾಗಬಾರ, ಜೆಟ್ಟೇಪ್ಪ ಶಾಖಾಪೂರ, ಸುನೀಲ ನೈಕೋಡಿ ಸೇರಿದಂತೆ ತಳವಾರ ಸಮಾಜದ ಮುಖಂಡರು, ಹಿರಿಯರು ಹಾಗೂ ಯುವಕರು ಉಪಸ್ಥಿತರಿದ್ದರು.
ಎರಡು ವರ್ಷಗಳ ಹೋರಾಟದ ಬಳಿಕ ಎಸ್ಟಿ ಪ್ರಮಾಣಪತ್ರ ದೊರೆತಿರುವುದು ಸಮುದಾಯದವರಿಗೆ ಮಹತ್ವದ ಬೆಳವಣಿಗೆಯಾಗಿದೆ.



