ಕಲಬುರಗಿಯಲ್ಲಿ ನ. 22ರಂದು ‘ಗುರುವಂದನಾ ಸುಮಧುರ ಸಂಗೀತೋತ್ಸವ’
ಹಿರಿಯ ಹಾಗೂ ಯುವ ಕಲಾವಿದರಿಂದ ಸಂಗೀತ ಸುಧೆ | ತಬಲಾ, ಹಿಂದೂಸ್ತಾನಿ ಗಾಯನ, ಹಾರ್ಮೋನಿಯಂ, ಬಾನ್ಸುರಿ ವಾದನ

ಕಲಬುರಗಿ: ಭಾರತೀಯ ಶಾಸ್ತ್ರೀಯ ಸಂಗೀತ ಪರಂಪರೆಯನ್ನು ಉಳಿಸಿ ಬೆಳೆಸುವ ಹಾಗೂ ಸಂಗೀತ ಕ್ಷೇತ್ರದ ಗುರುಗಳನ್ನು ಗೌರವಿಸುವ ಉದ್ದೇಶದಿಂದ ನಗರದ ಸರ್ ಎಂ. ವಿಶ್ವೇಶ್ವರಯ್ಯ ಇಂಜಿನಿಯರಿಂಗ್ ಭವನದಲ್ಲಿ ನವೆಂಬರ್ 22ರಂದು ಬೆಳಿಗ್ಗೆ 10 ಗಂಟೆಗೆ ‘ಗುರುವಂದನಾ ಸುಮಧುರ ಸಂಗೀತೋತ್ಸವ’ ಆಯೋಜಿಸಲಾಗಿದೆ.
ಸಂಗೀತ ಮಹರ್ಷಿ ಪಂ. ಶಾಂತಾರಾಮ ಚಿಗರಿ ಕಲಾ ಸಂಸ್ಥೆ (ರಿ) ಹಾಗೂ ಸೂರ್ ತಾಲ್ ಸಂಗೀತ ಅಕಾಡೆಮಿ ಸಂಯುಕ್ತ ಆಶ್ರಯದಲ್ಲಿ ಕಾರ್ಯಕ್ರಮ ನಡೆಯಲಿದೆ ಎಂದು ಸಂಸ್ಥೆಯ ಅಧ್ಯಕ್ಷ ಉದಯಕುಮಾರ ಪುಲಾರಿ ಹಾಗೂ ಕಾರ್ಯದರ್ಶಿ ಸುಹಾಸಿನಿ ಪುಲಾರಿ ತಿಳಿಸಿದ್ದಾರೆ.
ಹಿರಿಯ ಕಲಾವಿದ ಪಂ. ಸಿದ್ದಣ್ಣ ದೇಸಾಯಿ ಕಲ್ಲೂರ ಕಾರ್ಯಕ್ರಮ ಉದ್ಘಾಟಿಸಲಿದ್ದು, ಪಂ. ಜಯರಾವ ಕುಲಕರ್ಣಿ ಅಧ್ಯಕ್ಷತೆ ವಹಿಸಲಿದ್ದಾರೆ. ವಿಶೇಷ ಅತಿಥಿಗಳಾಗಿ ನಾಮದೇವ ಪವಾರ್, ಯಲಗುಂಡ ಹಿರೇಕುರುಬರ್ ಹಾಗೂ ರವಿರಾಜ ರಾಠೋಡ್ ಭಾಗವಹಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಉಪನಿರ್ದೇಶಕಿ ಜಗದೀಶ್ವರಿ ಅ. ನಾಸಿ, ರಾಜಶೇಖರ ಯಂಕಂಚಿ ಭೂಸನೂರ್, ಅನೀಲಕುಮಾರ ತಂಬಾಕೆ ಹಾಗೂ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಬಾಬುರಾವ ಕೋಬಾಳ ಉಪಸ್ಥಿತರಿರಲಿದ್ದಾರೆ.
ಸಂಗೀತೋತ್ಸವದಲ್ಲಿ ಪುಣೆಯ ಅಂತರರಾಷ್ಟ್ರೀಯ ಖ್ಯಾತಿಯ ತಬಲಾ ವಾದಕ ಪಂ. ಮುಕೇಶ್ ಜಾಧವ್ ಅವರಿಂದ ತಬಲಾ ಸೋಲೋ, ಡಾ. ರಾಧಿಕಾ ಪಾಠಕ್ ಅವರಿಂದ ಹಿಂದೂಸ್ತಾನಿ ಶಾಸ್ತ್ರೀಯ ಗಾಯನ, ಪ್ರೊ. ರೇವಯ್ಯ ವಸ್ತ್ರದ ಮಠ ಅವರಿಂದ ಹಾರ್ಮೋನಿಯಂ ಹಾಗೂ ಆಕಾಶವಾಣಿ ‘ಎ’ ಗ್ರೇಡ್ ಕಲಾವಿದ ಉದಯಕುಮಾರ ಪುಲಾರಿ ಅವರಿಂದ ತಬಲಾ ವಾದನ ನಡೆಯಲಿದೆ.
ಇದರೊಂದಿಗೆ ಸಂಗೀತ ಶಿಕ್ಷಕ ಶಂಕರ ರುದ್ರವಾಡಿ ಅವರಿಂದ ತಾನಪುರಾ ವಾದನ ಹಾಗೂ ಪ್ರಶಾಂತ್ ಗೋಲ್ಡ್ ಸ್ಮಿತ್ ಅವರಿಂದ ಬಾನ್ಸುರಿ ವಾದನ ಪ್ರಸ್ತುತಗೊಳ್ಳಲಿದೆ. ಸೂರ್ ತಾಲ್ ಸಂಗೀತ ಅಕಾಡೆಮಿಯ ವಿದ್ಯಾರ್ಥಿಗಳೂ ತಮ್ಮ ಸಂಗೀತ ಪ್ರತಿಭೆಯನ್ನು ಪ್ರದರ್ಶಿಸಲಿದ್ದಾರೆ.
ಹಿರಿಯ ಕಲಾವಿದರ ಸಂಗೀತ ಪ್ರಸ್ತುತಿಗಳೊಂದಿಗೆ ಯುವ ಪ್ರತಿಭೆಗಳಿಗೆ ವೇದಿಕೆ ಕಲ್ಪಿಸುವುದು ಕಾರ್ಯಕ್ರಮದ ವಿಶೇಷತೆಯಾಗಿದೆ. ಸಂಗೀತಾಸಕ್ತರು, ಕಲಾಭಿಮಾನಿಗಳು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಆಯೋಜಕರು ಮನವಿ ಮಾಡಿದ್ದಾರೆ.


