ಪದಗಳು ಹದಗೊಂಡರೆ ಕಾವ್ಯ ಸಶಕ್ತವಾಗುತ್ತದೆ: ಡಾ. ನಾಗೇಂದ್ರ ಮಸೂತಿ

ಕಲಬುರಗಿ: ** ಕವಿತೆಗಳು ಹೆಚ್ಚು ಗಟ್ಟಿಯಾಗಿ ಮೂಡಿಬರಬೇಕಾದರೆ ಕವಿಗಳು ಪದಗಳನ್ನು ಸೂಕ್ತವಾಗಿ ಬಳಸುವ ಕಲೆಯನ್ನು ರೂಢಿಸಿಕೊಳ್ಳಬೇಕು. ಪದಗಳ ಹದವಾದ ಜೋಡಣೆ ಕಾವ್ಯದ ಪರಿಣಾಮಕಾರಿತ್ವವನ್ನು ಹೆಚ್ಚಿಸುತ್ತದೆ ಎಂದು ಹಿರಿಯ ಸಾಹಿತಿ ಡಾ. ನಾಗೇಂದ್ರ ಮಸೂತಿ ಹೇಳಿದರು.
ನಗರದ ಕನ್ನಡ ಭವನದ ಸುವರ್ಣ ಸಭಾಭವನದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಶನಿವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಲೇಖಕಿ ಭುವನೇಶ್ವರಿ ಹಳ್ಳಿಖೇಡ ಅವರ ‘ತಡವಾದರೂ, ಕನಸು’ ಚೊಚ್ಚಲ ಕವನ ಸಂಕಲನವನ್ನು ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.
ಕವಿಗಳು ತಮ್ಮ ಅನುಭವಗಳು, ಸುತ್ತಮುತ್ತಲಿನ ಘಟನೆಗಳು ಹಾಗೂ ಸಮಾಜದಲ್ಲಿ ನಡೆಯುವ ಸಂಗತಿಗಳನ್ನು ಸೂಕ್ಷ್ಮವಾಗಿ ಗಮನಿಸಿ ಕಾವ್ಯ ರಚಿಸಬೇಕು. ಅನುಭವದ ವಿಚಾರಗಳು, ಸಂಗತಿಗಳು ಮತ್ತು ಕಣ್ಣಿಗೆ ಕಾಣುವ ರೋಚಕ ಘಟನೆಗಳು ಕವಿತೆಗಳಲ್ಲಿ ಅಭಿವ್ಯಕ್ತಿಗೊಳ್ಳಬೇಕು. ಈ ನಿಟ್ಟಿನಲ್ಲಿ ಪದಗಳ ಜೋಡಣೆಯ ಶೈಲಿ ಮಹತ್ವದ ಪಾತ್ರ ವಹಿಸುತ್ತದೆ ಎಂದರು.
ಕವಿಗಳು ತಮ್ಮ ಸುತ್ತಲಿನ ಪರಿಸರದಲ್ಲಿ ನಡೆಯುತ್ತಿರುವ ದುಸ್ಥಿತಿಗಳ ವಿರುದ್ಧವೂ ಕಾವ್ಯದ ಮೂಲಕ ಧ್ವನಿ ಎತ್ತಬೇಕು. ಸಮಾಜಮುಖಿ ಚಿಂತನೆಯುಳ್ಳ ಕವಿತೆಗಳು ಇಂದಿನ ಸಂದರ್ಭದಲ್ಲಿ ಹೆಚ್ಚು ಪ್ರಸ್ತುತವಾಗಿವೆ ಎಂದು ಅಭಿಪ್ರಾಯಪಟ್ಟರು.
ಬೀದರ್‌ನ ಲೇಖಕಿ ಸಾರಿಕಾ ಗಂಗಾ ಕೃತಿಯನ್ನು ಪರಿಚಯಿಸಿದರು. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ಅಧ್ಯಕ್ಷತೆ ವಹಿಸಿದ್ದರು.
ಕಾರ್ಯಕ್ರಮದಲ್ಲಿ ಲೇಖಕಿ ಭುವನೇಶ್ವರಿ ಹಳ್ಳಿಖೇಡ, ಸುರೇಶ ವಗ್ಗೆ, ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಬಸವರಾಜ ಬಳ್ಳೂಂಡಗಿ, ಕರ್ನಾಟಕ ಜಾನಪದ ಪರಿಷತ್ತಿನ ಜಿಲ್ಲಾಧ್ಯಕ್ಷ ಸಿ.ಎಸ್. ಮಾಲಿ ಪಾಟೀಲ, ಜಿಲ್ಲಾ ಕಸಾಪ ಕಾರ್ಯದರ್ಶಿಗಳಾದ ಶಿವರಾಜ ಅಂಡಗಿ ಮತ್ತು ಧರ್ಮಣ್ಣ ಎಚ್. ಧನ್ನಿ, ಕೋಶಾಧ್ಯಕ್ಷ ಶರಣರಾಜ ಛಪ್ಪರಬಂದಿ, ರೇಣುಕಾ ಎನ್., ಹಿರಿಯ ಸಾಹಿತಿ ಡಾ. ಸ್ವಾಮಿರಾವ ಕುಲಕರ್ಣಿ, ಮುಡುಬಿ ಗುಂಡೇರಾವ, ಸಮಾಜ ಸೇವಕಿ ಮಾಲಾ ದಣ್ಣೂರ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಸೇವಂತಾ ಚವಾಣ, ನಂದಿನಿ ಸನಬಾಳ, ರೇಣುಕಾ ಡಾಂಗೆ, ಸಂತೋಷ ಗಂಗೂ, ಚಂದ್ರಕಾಂತ ಏರಿ, ಧರ್ಮರಾಜ ಜವಳಿ, ರಾಜೇಂದ್ರ ಮಾಡಬೂಳ, ಶಕುಂತಲಾ ಪಾಟೀಲ ಜವಳಿ, ಜಯಶ್ರೀ ಜಮಾದಾರ, ದಿನೇಶ ಮದಕರಿ, ಹಣಮಂತರಾವ ಪೆಂಚನಪಳ್ಳಿ, ಕಲ್ಯಾಣಕುಮಾರ ಶೀಲವಂತ, ಸಂತೋಷ ಕುಡಳ್ಳಿ, ಪ್ರಭುಲಿಂಗ ಮೂಲಗೆ ಹಾಗೂ ಡಾ. ಬಾಬುರಾವ ಶೇರಿಕಾರ ಸೇರಿದಂತೆ ಅನೇಕರು ಭಾಗವಹಿಸಿದ್ದರು.
ಜಿಲ್ಲೆಯ 21 ಪ್ರತಿಭಾವಂತ ಶಿಕ್ಷಕರಿಗೆ ‘ಗುರು ಶ್ರೀ’ ಗೌರವ ಪುರಸ್ಕಾರ ನೀಡಿ ಸನ್ಮಾನಿಸಲಾಯಿತು.



