ಗಣೇಶೋತ್ಸವ ವಿವಾದ: ಇನ್‌ಸ್ಪೆಕ್ಟರ್ ಅಮಾನತಿಗೆ ಸರ್ಕಾರ ನಕಾರ
ಬಿಜೆಪಿ ಹೇಳಿದ ತಕ್ಷಣ ಅಧಿಕಾರಿಯನ್ನು ಅಮಾನತು ಮಾಡಲು ಸಾಧ್ಯವಿಲ್ಲ’ ಎಂದ ಸಚಿವ ಪ್ರಿಯಾಂಕ್ ಖರ್ಗೆ

ಬೆಂಗಳೂರು, ಸೆ.14: ಮೈಸೂರು ಜಿಲ್ಲೆಯ ಟಿ. ನರಸೀಪುರ ಪೊಲೀಸ್ ಇನ್‌ಸ್ಪೆಕ್ಟರ್ ಧನಂಜಯ್ ಅವರ ಹೇಳಿಕೆ ವಿವಾದಕ್ಕೆ ಸಂಬಂಧಿಸಿದಂತೆ ಅವರನ್ನು ಅಮಾನತುಗೊಳಿಸಬೇಕು ಎಂಬ ವಿರೋಧ ಪಕ್ಷ ಬಿಜೆಪಿಯ ಆಗ್ರಹಕ್ಕೆ ರಾಜ್ಯ ಸರ್ಕಾರ ಸ್ಪಷ್ಟವಾಗಿ ತಿರಸ್ಕಾರ ವ್ಯಕ್ತಪಡಿಸಿದೆ.
‘ಬಿಜೆಪಿಯವರು ಹೇಳಿದ ತಕ್ಷಣ ಅಧಿಕಾರಿಯನ್ನು ಅಮಾನತು ಮಾಡಲು ಸಾಧ್ಯವಿಲ್ಲ. ಸದ್ಯಕ್ಕೆ ಅಮಾನತುಗೊಳಿಸುವ ಪ್ರಶ್ನೆಯೇ ಇಲ್ಲ’ ಎಂದು ಸಚಿವ ಪ್ರಿಯಾಂಕ್ ಖರ್ಗೆ ಸೋಮವಾರ ಹೇಳಿದರು.
ಗಣೇಶ ಮೆರವಣಿಗೆಗೆ ಭದ್ರತೆ ಹಾಗೂ ಇನ್‌ಸ್ಪೆಕ್ಟರ್ ಧನಂಜಯ್ ಅವರ ಹೇಳಿಕೆ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಬಿಜೆಪಿಯವರು ಹೇಳಿದಂತೆ ನಾವು ಕೇಳಲು ಅಥವಾ ಆಡಳಿತ ನಡೆಸಲು ಸಾಧ್ಯವಿಲ್ಲ. ಇನ್‌ಸ್ಪೆಕ್ಟರ್ ವಿರುದ್ಧ ಶಿಸ್ತುಕ್ರಮ ಕೈಗೊಳ್ಳುವ ವಿಚಾರದಲ್ಲಿ ಅಂತಿಮ ತೀರ್ಮಾನ ಸರ್ಕಾರದ್ದಾಗಿದೆ. ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಪಿ) ವರದಿ ನೀಡಿದ ಬಳಿಕ ಅದನ್ನು ಪರಿಶೀಲಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು’ ಎಂದರು.
‘ನಿಯಮ ಪಾಲನೆ ಮುಖ್ಯ’
‘ಇನ್‌ಸ್ಪೆಕ್ಟರ್ ಸ್ವಲ್ಪ ಖಾರವಾಗಿ ಮಾತನಾಡಿರಬಹುದು. ಆದರೆ ಮೆರವಣಿಗೆಗೆ ಹಲವು ಮಾರ್ಗಗಳಿವೆ. ನಿಯಮ ಪಾಲಿಸುವುದು ಮುಖ್ಯ. ನಿರ್ದಿಷ್ಟ ಸೂಕ್ಷ್ಮ ಸ್ಥಳದಲ್ಲಿಯೇ ಪಟಾಕಿ ಸಿಡಿಸುವ ಅಗತ್ಯವೇನು?’ ಎಂದು ಪ್ರಶ್ನಿಸಿದರು.
ಧನಂಜಯ್ ಅವರು ಕಳೆದ ಮೂರು ವರ್ಷಗಳಿಂದ ಅದೇ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು, ಸ್ಥಳೀಯ ಸೂಕ್ಷ್ಮತೆ ಹಾಗೂ ಕಳೆದ ವರ್ಷ ಉಂಟಾಗಿದ್ದ ಗೊಂದಲಗಳ ಬಗ್ಗೆ ಅವರಿಗೆ ಅರಿವಿದೆ. ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ಉದ್ದೇಶದಿಂದ ನೀಡಿದ ಸೂಚನೆಗಳನ್ನು ತಪ್ಪಾಗಿ ಬಿಂಬಿಸಲಾಗುತ್ತಿದೆ ಎಂದು ಅವರು ಆರೋಪಿಸಿದರು.
‘ಎಲ್ಲ ಹಬ್ಬಗಳಿಗೂ ಸೂಕ್ತ ಭದ್ರತೆ’
ಗಣೇಶೋತ್ಸವ, ಈದ್ ಸೇರಿದಂತೆ ಎಲ್ಲ ಹಬ್ಬಗಳನ್ನು ಶಾಂತಿಯುತವಾಗಿ ಆಚರಿಸಲು ಸರ್ಕಾರ ಹಾಗೂ ಪೊಲೀಸ್ ಇಲಾಖೆ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದೆ ಎಂದು ಖರ್ಗೆ ಹೇಳಿದರು.
‘ಹಬ್ಬಗಳ ವಿಚಾರದಲ್ಲಿ ವಿರೋಧ ಪಕ್ಷಗಳು ಅನಗತ್ಯವಾಗಿ ಹುಳಿ ಹಿಂಡುವ ಕೆಲಸ ಮಾಡಬಾರದು. ಜನರು ಶಾಂತಿಯಿಂದ ಹಬ್ಬ ಆಚರಿಸಲು ಅವಕಾಶ ನೀಡಬೇಕು. ಆರ್. ಅಶೋಕ್ ಗೃಹ ಸಚಿವರಾಗಿದ್ದಾಗಲೂ ಶಾಂತಿ ಸಭೆಗಳನ್ನು ನಡೆಸಿ ನಿಯಮಾವಳಿಗಳನ್ನು ರೂಪಿಸಲಾಗಿತ್ತು. ಅಂದು ಇದ್ದ ನಿಯಮಗಳೇ ಇಂದೂ ಇವೆ’ ಎಂದು ಹೇಳಿದರು.
ಮೈಸೂರಿನಲ್ಲಿ ಕೆಲವರು ‘ಠಾಣೆಗೆ ನುಗ್ಗುತ್ತೇವೆ’ ಎಂದು ಬೆದರಿಕೆ ಹಾಕುತ್ತಿದ್ದಾರೆ ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ ಅವರು, ‘ಶಾಂತಿ ಕದಡಲು ಯತ್ನಿಸುತ್ತಿರುವವರು ಯಾರು ಎಂಬುದನ್ನು ತಿಳಿಯಲು ಬಿಜೆಪಿಯವರು ಮೊದಲು ಮೋಹನ್ ಭಾಗವತ್ ಅವರ ಮಾತುಗಳನ್ನು ಕೇಳಲಿ’ ಎಂದು ವ್ಯಂಗ್ಯವಾಡಿದರು.



