ರಾಜ್ಯ

‘ಸಿದ್ದರಾಮಯ್ಯಗೆ ಕೈಕೊಟ್ಟಿದ್ದಕ್ಕೆ ಸತೀಶ್‌ಗೆ ಶಾಪ ತಟ್ಟಿದೆ’ಇ.ಡಿ. ದಾಳಿ ಕುರಿತು ಯತ್ನಾಳ್‌ ಹೇಳಿಕೆ

ಬಾಗಲಕೋಟೆ: ಸಚಿವ ಸತೀಶ್ ಜಾರಕಿಹೊಳಿ ಅವರ ಮೇಲಿನ ಜಾರಿ ನಿರ್ದೇಶನಾಲಯ (ಇ.ಡಿ.) ದಾಳಿ ವಿಚಾರವಾಗಿ ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಪ್ರತಿಕ್ರಿಯಿಸಿದ್ದು, ‘ಸಿದ್ದರಾಮಯ್ಯ ಅವರಿಗೆ ಕೈಕೊಟ್ಟಿದ್ದಕ್ಕೆ ಸತೀಶ್ ಜಾರಕಿಹೊಳಿ ಅವರಿಗೆ ಅವರ ಶಾಪ ತಟ್ಟಿದೆ ಎನಿಸುತ್ತಿದೆ’ ಎಂದು ಹೇಳಿದ್ದಾರೆ.

ಬಾಗಲಕೋಟೆಯಲ್ಲಿ ಭಾನುವಾರ ಮಾತನಾಡಿದ ಅವರು, ‘ಸತೀಶ್ ಜಾರಕಿಹೊಳಿ ಸೇರಿದಂತೆ ಕಾಂಗ್ರೆಸ್‌ನ ಕೆಲ ನಾಯಕರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಕೈಕೊಟ್ಟಿದ್ದಾರೆ. ಸತೀಶ್ ಜಾರಕಿಹೊಳಿ, ಎಂ.ಬಿ. ಪಾಟೀಲ ಹಾಗೂ ಜಮೀರ್ ಅಹ್ಮದ್ ಅವರು ಈ ವಿಚಾರದಲ್ಲಿ ಪ್ರಮುಖ ಪಾತ್ರ ವಹಿಸಿದ್ದರು’ ಎಂದು ಆರೋಪಿಸಿದರು.

‘36 ಶಾಸಕರ ಸಹಿ ಮಾಡಿಸಿದ್ದರು’

‘ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಿದರೂ ಯಾವುದೇ ಅಭ್ಯಂತರವಿಲ್ಲ ಎಂದು 36 ಶಾಸಕರ ಸಹಿ ಮಾಡಿಸಿಕೊಟ್ಟಿದ್ದೇ ಸತೀಶ್ ಜಾರಕಿಹೊಳಿ’ ಎಂದು ಯತ್ನಾಳ್ ಆರೋಪಿಸಿದರು.

‘ಎಂ.ಬಿ. ಪಾಟೀಲ, ಜಮೀರ್ ಅಹ್ಮದ್ ಹಾಗೂ ಸತೀಶ್ ಜಾರಕಿಹೊಳಿ ಅವರು ಈ ವಿಚಾರದಲ್ಲಿ ಇದ್ದರು. ಸಿದ್ದರಾಮಯ್ಯ ಅವರನ್ನು ಯಾವ ಕಾರಣಕ್ಕೆ ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಲು ಪ್ರಯತ್ನಿಸಲಾಯಿತು ಎಂಬುದನ್ನು ಕಾಂಗ್ರೆಸ್‌ ನಾಯಕರು ಜನರಿಗೆ ಸ್ಪಷ್ಟಪಡಿಸಬೇಕು’ ಎಂದು ಆಗ್ರಹಿಸಿದರು.

‘ಸಿದ್ದರಾಮಯ್ಯ ಅವರು ಸತೀಶ್ ಜಾರಕಿಹೊಳಿ ಅವರನ್ನು ತಮ್ಮ ಮುಂದಿನ ಉತ್ತರಾಧಿಕಾರಿ ಎಂದು ನೋಡುತ್ತಿದ್ದರು. ಆದರೆ, ಸತೀಶ್ ಅವರು ಸಿದ್ದರಾಮಯ್ಯ ಅವರಿಗೆ ಕೈಕೊಡಬಾರದಿತ್ತು’ ಎಂದರು.

‘ಕಾಂಗ್ರೆಸ್‌ನಲ್ಲೇ ಸತೀಶ್‌ಗೆ ವಿರೋಧ’

‘ನಮ್ಮವರೇ ನಮಗೆ ಮೋಸ ಮಾಡಿದ್ದಾರೆ’ ಎಂಬ ಸತೀಶ್ ಜಾರಕಿಹೊಳಿ ಅವರ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಯತ್ನಾಳ್, ‘ಈ ರೀತಿಯ ಬೆಳವಣಿಗೆ ಕಾಂಗ್ರೆಸ್‌ನೊಳಗೇ ನಡೆದಿದೆ’ ಎಂದು ಹೇಳಿದರು.

‘ಸತೀಶ್ ಜಾರಕಿಹೊಳಿ ಅವರಿಗೆ ಕಾಂಗ್ರೆಸ್‌ನಲ್ಲೇ ವಿರೋಧವಿದೆ. ವಾಲ್ಮೀಕಿ ಸಮುದಾಯದಿಂದ ಪ್ರಬಲ ನಾಯಕನೊಬ್ಬ ಬೆಳೆಯುತ್ತಿರುವುದನ್ನು ಕೆಲವರು ಸಹಿಸದೆ ಈ ರೀತಿಯ ಬೆಳವಣಿಗೆಗೆ ಕಾರಣವಾಗಿರಬಹುದು’ ಎಂದು ಆರೋಪಿಸಿದರು.

ರಾಜಣ್ಣ ವಿಚಾರದಲ್ಲೂ ಟೀಕೆ

ಸಹಕಾರ ಸಚಿವರಾಗಿದ್ದ ಕೆ.ಎನ್. ರಾಜಣ್ಣ ಅವರು ನೇರವಾಗಿ ಮಾತನಾಡಿದ್ದಕ್ಕಾಗಿ ಅವರಿಗೆ ಅವಮಾನ ಮಾಡಲಾಗಿದೆ ಎಂದೂ ಯತ್ನಾಳ್ ಹೇಳಿದರು.

‘ತಪ್ಪನ್ನು ತಪ್ಪು ಎಂದು ಹೇಳುವುದು ಪ್ರಜಾಪ್ರಭುತ್ವದಲ್ಲಿ ಅಗತ್ಯ. ನಾನು ಕೂಡ ತಪ್ಪನ್ನು ತಪ್ಪು ಎಂದು ಹೇಳಿದ್ದೇನೆ. ಅದಕ್ಕಾಗಿ ಪಕ್ಷದಿಂದ ಹೊರಹಾಕಿದರೂ ತಲೆಕೆಡಿಸಿಕೊಳ್ಳುವುದಿಲ್ಲ’ ಎಂದು ಅವರು ಹೇಳಿದರು.

Related Articles

Leave a Reply

Your email address will not be published. Required fields are marked *

Back to top button