ಕಲಬುರಗಿಜಿಲ್ಲೆ ಸುದ್ದಿ

ಗಣೇಶ ಹಬ್ಬ ಶಾಂತಿಯುತವಾಗಿ ಆಚರಿಸಿ: ಶಂಕರಗೌಡ ಪಾಟೀಲ

ಚಿತ್ತಾಪುರ: ಗಣೇಶ ಚತುರ್ಥಿ ಹಬ್ಬವನ್ನು ಶಾಂತಿಯುತವಾಗಿ, ಸಡಗರ ಹಾಗೂ ಸಂಭ್ರಮದಿಂದ ಆಚರಿಸಬೇಕು ಎಂದು ಡಿವೈಎಸ್ಪಿ ಶಂಕರಗೌಡ ಪಾಟೀಲ ಹೇಳಿದರು.

ಪಟ್ಟಣದ ಪೊಲೀಸ್ ಠಾಣೆ ಆವರಣದಲ್ಲಿ ಗಣೇಶ ಚತುರ್ಥಿ ಅಂಗವಾಗಿ ಚಿತ್ತಾಪುರ ಪೊಲೀಸ್ ಠಾಣೆ ವತಿಯಿಂದ ಆಯೋಜಿಸಿದ್ದ ಶಾಂತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‘ಚಿತ್ತಾಪುರದಲ್ಲಿ ಎಲ್ಲ ಸಮಾಜದವರು ಒಗ್ಗಟ್ಟಿನಿಂದ ಹಬ್ಬಗಳನ್ನು ಆಚರಿಸಿಕೊಂಡು ಬರುತ್ತಿದ್ದಾರೆ. ಕಳೆದ 12 ವರ್ಷಗಳಿಂದ ಇಲ್ಲಿ ಸೇವೆ ಸಲ್ಲಿಸುತ್ತಿದ್ದು, ಯಾವುದೇ ಅಹಿತಕರ ಘಟನೆ ನಡೆದಿರುವುದನ್ನು ನೋಡಿಲ್ಲ. ಹೀಗಾಗಿ ಚಿತ್ತಾಪುರ ಶಾಂತಿಪ್ರಿಯ ತಾಲೂಕು ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಗಣೇಶ ಮಂಡಳಿಗಳು ಕನಿಷ್ಠ ಐದು ಸ್ವಯಂಸೇವಕರನ್ನು ನೇಮಿಸಿ, ಸುರಕ್ಷತೆಗೆ ಆದ್ಯತೆ ನೀಡಬೇಕು. ಗಣೇಶನ ಭಾವಚಿತ್ರವಿರುವ ಬ್ಯಾನರ್‌ಗಳಲ್ಲಿ ಸಭ್ಯತೆ ಕಾಪಾಡಬೇಕು. ಕಾನೂನಿನ ಚೌಕಟ್ಟಿನಲ್ಲಿಯೇ ಹಬ್ಬ ಆಚರಿಸಬೇಕು. ಪರಿಸರಕ್ಕೆ ಹಾನಿಯಾಗದಂತೆ ಪರಿಸರ ಸ್ನೇಹಿ ಗಣಪತಿ ಮೂರ್ತಿಗಳನ್ನು ಪ್ರತಿಷ್ಠಾಪಿಸಬೇಕು ಎಂದು ಸೂಚಿಸಿದರು.

ಗಣೇಶ ಮೂರ್ತಿಯನ್ನು ಎಲ್ಲಿ ಪ್ರತಿಷ್ಠಾಪಿಸಲಾಗುತ್ತದೆ, ಎಷ್ಟು ದಿನ ಇಡಲಾಗುತ್ತದೆ ಹಾಗೂ ವಿಸರ್ಜನೆ ಸಂದರ್ಭದಲ್ಲಿ ಮೆರವಣಿಗೆ ಯಾವ ಮಾರ್ಗದಲ್ಲಿ ಸಾಗಲಿದೆ ಎಂಬ ಮಾಹಿತಿಯನ್ನು ಮುಂಚಿತವಾಗಿ ಪೊಲೀಸ್ ಇಲಾಖೆಗೆ ನೀಡಬೇಕು. ಇದರಿಂದ ಸೂಕ್ತ ಭದ್ರತಾ ವ್ಯವಸ್ಥೆ ಕಲ್ಪಿಸಲು ಅನುಕೂಲವಾಗಲಿದೆ ಎಂದರು.

ಪಿಎಸ್‌ಐ ಮಂಜುನಾಥರೆಡ್ಡಿ ಮಾತನಾಡಿ, ಗಣೇಶ ಮೂರ್ತಿ ಪ್ರತಿಷ್ಠಾಪಿಸುವ ಮಂಡಳಿಗಳು ಸ್ಥಳೀಯ ಪೊಲೀಸ್ ಇಲಾಖೆಯಿಂದ ಅನುಮತಿ ಪಡೆಯಬೇಕು. ರಸ್ತೆ ಬದಿಯಲ್ಲಿ ಅಪಾಯಕಾರಿಯಾಗಿ ದೊಡ್ಡ ಪ್ರಮಾಣದ ಪೆಂಡಾಲ್‌ಗಳನ್ನು ನಿರ್ಮಿಸಬಾರದು. ಈ ಬಾರಿಯೂ ದೊಡ್ಡ ಪ್ರಮಾಣದ ಡಿಜೆ ಬಳಕೆಗೆ ಅವಕಾಶವಿಲ್ಲ. ಟ್ರ್ಯಾಕ್ಟರ್, ಲಾರಿ, ಟೆಂಪೊಗಳಲ್ಲಿ ಬೃಹತ್ ಡಿಜೆಗಳನ್ನು ತಂದು ಅಳವಡಿಸಬಾರದು. ಎಲ್ಲರೂ ಶಾಂತಿ ಮತ್ತು ಸೌಹಾರ್ದದಿಂದ ಹಬ್ಬ ಆಚರಿಸಬೇಕು ಎಂದು ಮನವಿ ಮಾಡಿದರು.

ಪುರಸಭೆ ಮಾಜಿ ಅಧ್ಯಕ್ಷ ನಾಗರಾಜ ಭಂಕಲಗಿ ಮಾತನಾಡಿ, ಗಣೇಶ ವಿಸರ್ಜನೆ ಸಂದರ್ಭದಲ್ಲಿ ಐದು, ಒಂಬತ್ತು ಹಾಗೂ ಹನ್ನೊಂದು ದಿನಗಳ ಗಣೇಶ ಮೂರ್ತಿಗಳ ಮೆರವಣಿಗೆಗೆ ನಿಯಮಾನುಸಾರ ಒಂದು ಟಾಪ್ ಹಾಗೂ ಒಂದು ಬೇಸ್‌ಗೆ ಅವಕಾಶ ಕಲ್ಪಿಸಬೇಕು ಎಂದು ಮನವಿ ಮಾಡಿದರು.

ಮುಖಂಡ ಜಗದೀಶ ಚವ್ಹಾಣ ಮಾತನಾಡಿ, ಚಿತ್ತಾಪುರದಲ್ಲಿ ಎಲ್ಲ ಸಮಾಜದವರು ಒಗ್ಗಟ್ಟಿನಿಂದ ಹಬ್ಬಗಳನ್ನು ಆಚರಿಸುತ್ತಿದ್ದಾರೆ. ಯಾವುದೇ ಜಾತಿ-ಧರ್ಮದ ಭೇದಭಾವವಿಲ್ಲದೆ ಎಲ್ಲರೂ ಸೇರಿ ಹಬ್ಬ ಆಚರಿಸುತ್ತಿದ್ದು, ಅಹಿತಕರ ಘಟನೆಗಳಿಗೆ ಅವಕಾಶ ನೀಡುವುದಿಲ್ಲ ಎಂದು ಭರವಸೆ ನೀಡಿದರು.

ತಹಶೀಲ್ದಾರ್ ನಾಗಯ್ಯ ಹಿರೇಮಠ, ಪುರಸಭೆ ಮಾಜಿ ಅಧ್ಯಕ್ಷ ಮಲ್ಲಿಕಾರ್ಜುನ ಕಾಳಗಿ, ಮುಖಂಡರಾದ ಹಣಮಂತ ಸಂಕನೂರ, ಬಾಬು ಕಾಶಿ, ಅಂಬರೀಶ್ ಸುಲೇಗಾಂವ ಸೇರಿದಂತೆ ಹಲವರು ಮಾತನಾಡಿದರು.

ಅಗ್ನಿಶಾಮಕ ದಳದ ಸಿಪಿಐ ನಾಗರಾಜ, ಎಂ.ಎ. ರಶೀದ್, ಖಾಸಿಂ ಎ.ಟು.ಜೆಡ್., ಸಾಬಣ್ಣ ಕಾಶಿ, ಕೋಟೇಶ್ವರ ರೇಶ್ಮಿ, ನಾಗರಾಜ ರೇಶ್ಮಿ, ಆನಂದ ಯರಗಲ್, ದೇವು ಯಾಬಾಳ, ಲಕ್ಷ್ಮೀಕಾಂತ ತಾಂಡೂರಕರ್, ಸಚಿನ್, ಅಲ್ತಾಫ್, ಸೂರಜ್ ಸೇರಿದಂತೆ ವಿವಿಧ ಸಮಾಜಗಳ ಮುಖಂಡರು, ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿ ಇದ್ದರು. ಮಹೇಶ ರೂಮಾಲ್ ನಿರೂಪಿಸಿ, ವಂದಿಸಿದರು.

Related Articles

Leave a Reply

Your email address will not be published. Required fields are marked *

Back to top button