ಕಲಬುರಗಿಜಿಲ್ಲೆ ಸುದ್ದಿ

ಕಾನ್ಶಿರಾಂಜಿ ಅವರ ತತ್ವಾದರ್ಶಗಳು ಇಂದಿಗೂ ಪ್ರಸ್ತುತ: ಡಾ. ಅನಿಲ್ ಟೆಂಗಳಿ

ಕಲಬುರಗಿ: ಬಹುಜನ ಸಮಾಜದ ರಾಜಕೀಯ, ಸಾಮಾಜಿಕ ಹಾಗೂ ಆರ್ಥಿಕ ಪ್ರಗತಿಗಾಗಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟಿದ್ದ ಬಾಮ್ಸೆಫ್, ಡಿಎಸ್-4 ಹಾಗೂ ಬಹುಜನ ಸಮಾಜ ಪಕ್ಷದ ಸಂಸ್ಥಾಪಕರಾದ ಮಾನ್ಯವರ ದಾದಾಸಾಹೇಬ್ ಕಾನ್ಶಿರಾಂಜಿ ಅವರ ತತ್ವಾದರ್ಶಗಳು ಇಂದಿಗೂ ಪ್ರಸ್ತುತವಾಗಿವೆ ಎಂದು ಡಾ. ಅನಿಲ್ ಟೆಂಗಳಿ ಹೇಳಿದರು.

ದಾದಾಸಾಹೇಬ್ ಕಾನ್ಶಿರಾಂಜಿ ಅವರ 20ನೇ ಪುಣ್ಯಸ್ಮರಣೆಯ ಅಂಗವಾಗಿ ಬಹುಜನ ಸಮಾಜ ಪಕ್ಷದ ಕಲಬುರಗಿ ವಲಯದ ವತಿಯಿಂದ ನಗರದ ಜಗತ್ ವೃತ್ತದಲ್ಲಿರುವ ಡಾ. ಬಿ.ಆರ್. ಅಂಬೇಡ್ಕರ್ ಅವರ ಪ್ರತಿಮೆ ಎದುರು ಶುಕ್ರವಾರ ಆಯೋಜಿಸಿದ್ದ ಬಹುಜನರ ಸಂಕಲ್ಪ ಸಮಾವೇಶದಲ್ಲಿ ಅವರು ಮಾತನಾಡಿದರು.

ಬಹುಜನ ಸಮುದಾಯದ ರಾಜಕೀಯ ಜಾಗೃತಿ, ಸಾಮಾಜಿಕ ನ್ಯಾಯ ಮತ್ತು ಆರ್ಥಿಕ ಪ್ರಗತಿಗಾಗಿ ಕಾನ್ಶಿರಾಂಜಿ ಅವರು ನಿರಂತರವಾಗಿ ಶ್ರಮಿಸಿದ್ದರು. ಅವರ ವಿಚಾರಧಾರೆ ಹಾಗೂ ಹೋರಾಟದ ಮಾರ್ಗವನ್ನು ಅನುಸರಿಸುವ ಮೂಲಕ ಬಹುಜನರು ಶಿಕ್ಷಣ, ಸಂಘಟನೆ ಮತ್ತು ಹೋರಾಟಕ್ಕೆ ಆದ್ಯತೆ ನೀಡಬೇಕು. ಆ ಮೂಲಕ ತಮ್ಮ ಹಕ್ಕುಗಳನ್ನು ಪಡೆದುಕೊಳ್ಳಲು ಮುಂದಾಗಬೇಕು ಎಂದು ಅವರು ಕರೆ ನೀಡಿದರು.

ಬಹುಜನ ಸಮಾಜದ ಜನರು ರಾಜಕೀಯವಾಗಿ ಜಾಗೃತರಾಗಿ, ತಮ್ಮ ಹಕ್ಕುಗಳ ರಕ್ಷಣೆಗಾಗಿ ಒಗ್ಗಟ್ಟಿನಿಂದ ಕಾರ್ಯನಿರ್ವಹಿಸಬೇಕು. ಸಮಾಜದಲ್ಲಿ ಸಮಾನತೆ ಮತ್ತು ಸಾಮಾಜಿಕ ನ್ಯಾಯವನ್ನು ಸ್ಥಾಪಿಸುವುದರ ಜತೆಗೆ, ಸಂವಿಧಾನದ ಆಶಯಗಳನ್ನು ಸಾಕಾರಗೊಳಿಸಲು ಕಾನ್ಶಿರಾಂಜಿ ಅವರ ವಿಚಾರಧಾರೆಗಳು ಮಾರ್ಗದರ್ಶನ ನೀಡುತ್ತವೆ ಎಂದು ಹೇಳಿದರು.

ಸಮಾವೇಶವನ್ನು ಬಹುಜನ ಸಮಾಜ ಪಕ್ಷದ ಕಲಬುರಗಿ ವಲಯ ಉಸ್ತುವಾರಿ ಎಲ್.ಆರ್. ಬೋಸ್ಲೆ ಉದ್ಘಾಟಿಸಿದರು. ಬಿಎಸ್‌ಪಿ ಕಲಬುರಗಿ ಜಿಲ್ಲಾಧ್ಯಕ್ಷ ಶಿವಯೋಗಿ ಹಡಗಿಲಕರ್ ಅಧ್ಯಕ್ಷತೆ ವಹಿಸಿದ್ದರು.

ರಾಜ್ಯ ಸಂಯೋಜಕರು ಹಾಗೂ ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಬಸವರಾಜ ಭಂಡಾರಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ರಾಜ್ಯ ಕಾರ್ಯದರ್ಶಿಗಳಾದ ತಿಪ್ಪಣ್ಣ ಕಿನ್ನೂರ, ಜ್ಞಾನೇಶ್ವರ ಸಿಂಗಾರೆ, ಹಣಮಂತಪ್ಪ ಅತನೂರ, ಮೈಲಾರಿ ಶೇಳಗಿ, ಕಪಿಲ್ ಗೋಡಬೋಳೆ, ಯಶೋಧ ಪ್ರಕಾಶ ಟಿ. ಸೇರಿದಂತೆ ವಿವಿಧ ಜಿಲ್ಲೆಗಳ ಬಿಎಸ್‌ಪಿ ಮುಖಂಡರು ಉಪಸ್ಥಿತರಿದ್ದರು.

janabhipraya

https://janabhipraya.com

Related Articles

Leave a Reply

Your email address will not be published. Required fields are marked *

Back to top button