ಕಲಬುರಗಿಜಿಲ್ಲೆ ಸುದ್ದಿ

ಚಿತ್ತಾಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ 11, ವಾಡಿಯಲ್ಲಿ 6 ಅರ್ಜಿ ಸಲ್ಲಿಕೆ

ಡಿಸೆಂಬರ್‌ನಲ್ಲಿ ನೂತನ ಅಧ್ಯಕ್ಷರ ಘೋಷಣೆ ಸಾಧ್ಯತೆ | ಕಾರ್ಯಕರ್ತರ ಅಭಿಪ್ರಾಯದ ಮೇರೆಗೆ ಪದಾಧಿಕಾರಿಗಳ ನೇಮಕ

ಚಿತ್ತಾಪುರ: ಕಾಂಗ್ರೆಸ್ ಪಕ್ಷದ ಸಂಘಟನೆಯನ್ನು ತಳಮಟ್ಟದಿಂದ ಬಲಪಡಿಸುವ ಉದ್ದೇಶದಿಂದ ಹಮ್ಮಿಕೊಂಡಿರುವ ‘ಸಂಘಟನ್ ಸೃಜನ್ ಅಭಿಯಾನ-2’ರ ಭಾಗವಾಗಿ ಚಿತ್ತಾಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ 11 ಹಾಗೂ ವಾಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ 6 ಅರ್ಜಿಗಳು ಸಲ್ಲಿಕೆಯಾಗಿವೆ ಎಂದು ಜಿಲ್ಲಾ ಉಸ್ತುವಾರಿ ವೀಕ್ಷಕ ಹಾಗೂ ವಿಧಾನ ಪರಿಷತ್ತಿನ ಮಾಜಿ ಸದಸ್ಯ ಅರವಿಂದಕುಮಾರ ಅರಳಿ ತಿಳಿಸಿದರು.

ಪಟ್ಟಣದ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಮಂಗಳವಾರ ನಡೆದ ಚಿತ್ತಾಪುರ ಮತ್ತು ವಾಡಿ ಬ್ಲಾಕ್ ಕಾಂಗ್ರೆಸ್ ಸಮಿತಿಗಳ ನೂತನ ಅಧ್ಯಕ್ಷರು ಹಾಗೂ ಪದಾಧಿಕಾರಿಗಳ ನೇಮಕ ಪ್ರಕ್ರಿಯೆಗೆ ಸಂಬಂಧಿಸಿದ ಸಭೆಯಲ್ಲಿ ಅರ್ಜಿಗಳನ್ನು ಸ್ವೀಕರಿಸಿದ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

ಈ ಬಾರಿ ಜಿಲ್ಲಾ ಕಾಂಗ್ರೆಸ್ ಸಮಿತಿ (ಡಿಸಿಸಿ), ಬ್ಲಾಕ್ ಕಾಂಗ್ರೆಸ್ ಸಮಿತಿ (ಬಿಸಿಸಿ) ಹಾಗೂ 31 ವಿವಿಧ ಸೆಲ್‌ಗಳಿಗೆ ಪೂರ್ಣ ಪ್ರಮಾಣದ ಪದಾಧಿಕಾರಿಗಳನ್ನು ನೇಮಕ ಮಾಡಲಾಗುವುದು. ಅಲ್ಲದೆ, ಪ್ರತಿ 10 ಬೂತ್‌ಗಳಿಗೆ ಒಬ್ಬ ಅಧ್ಯಕ್ಷರನ್ನು ನೇಮಿಸುವ ಉದ್ದೇಶವಿದೆ. ಕಾರ್ಯಕರ್ತರ ಅಭಿಪ್ರಾಯ ಪಡೆದು ನೇಮಕಾತಿ ಪ್ರಕ್ರಿಯೆ ನಡೆಸಲಾಗುವುದು. ಪಕ್ಷವನ್ನು ನಾಯಕರನ್ನು ಕೇಂದ್ರವಾಗಿಟ್ಟುಕೊಂಡ ವ್ಯವಸ್ಥೆಯಿಂದ ಕಾರ್ಯಕರ್ತರನ್ನು ಆಧರಿಸಿದ ಸಂಘಟನೆಯಾಗಿ ರೂಪಿಸುವುದು ಅಭಿಯಾನದ ಮುಖ್ಯ ಉದ್ದೇಶವಾಗಿದೆ ಎಂದು ಹೇಳಿದರು.

ಕೆಪಿಸಿಸಿಗೆ ಗೌಪ್ಯ ವರದಿ

ಅಧ್ಯಕ್ಷ ಸ್ಥಾನಕ್ಕೆ ಅರ್ಜಿ ಸಲ್ಲಿಸಿರುವ ಆಕಾಂಕ್ಷಿಗಳ ಹೆಸರು, ಅವರ ಅಭಿಪ್ರಾಯ, ಬೆಂಬಲಿಗರು ಹಾಗೂ ಕಾರ್ಯಕರ್ತರಿಂದ ಸಂಗ್ರಹಿಸಿದ ಮಾಹಿತಿಯನ್ನು ಪರಿಗಣಿಸಿ ಗೌಪ್ಯ ವರದಿ ಸಿದ್ಧಪಡಿಸಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಗೆ (ಕೆಪಿಸಿಸಿ) ಕಳುಹಿಸಲಾಗುವುದು. ಮುಂದಿನ ಡಿಸೆಂಬರ್‌ನಲ್ಲಿ ನೂತನ ಅಧ್ಯಕ್ಷರು ಹಾಗೂ ಪದಾಧಿಕಾರಿಗಳ ಹೆಸರುಗಳನ್ನು ಘೋಷಿಸುವ ಸಾಧ್ಯತೆಯಿದೆ ಎಂದು ಅರವಿಂದಕುಮಾರ ಅರಳಿ ಮಾಹಿತಿ ನೀಡಿದರು.

ಇದೇ ಸಂದರ್ಭದಲ್ಲಿ ಜಿಲ್ಲಾ ಉಸ್ತುವಾರಿ ವೀಕ್ಷಕ ಅರವಿಂದಕುಮಾರ ಅರಳಿ, ಕೆಪಿಸಿಸಿ ಸಂಯೋಜಕರಾದ ಲಕ್ಷ್ಮೀಪತಿ ಹಾಗೂ ಅಕ್ಕಮಹಾದೇವಿ ಆರ್. ಪಾಟೀಲ ಅವರನ್ನು ಬ್ಲಾಕ್ ಕಾಂಗ್ರೆಸ್ ವತಿಯಿಂದ ಸನ್ಮಾನಿಸಲಾಯಿತು.

ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಮೇಶ್ ಮರಗೋಳ, ಕೆಪಿಸಿಸಿ ಸದಸ್ಯ ನಾಗರೆಡ್ಡಿ ಪಾಟೀಲ ಕರದಾಳ, ಬ್ಲಾಕ್ ಅಧ್ಯಕ್ಷ ಭೀಮಣ್ಣ ಸಾಲಿ, ಮುಕ್ತಾರ್ ಪಟೇಲ್, ಮಲ್ಲಿಕಾರ್ಜುನ ಬೊಮ್ಮನಳ್ಳಿ, ಚಂದ್ರಶೇಖರ ಕಾಶಿ, ಶೀಲಾ ಕಾಶಿ, ನಾಗರೆಡ್ಡಿ ಗೋಪಸೇನ್, ಎಂ.ಎ. ರಷೀದ್, ದೇವಿಂದ್ರ ಅರಣಕಲ್, ದೇವು ಯಾಬಾಳ, ಸಂಜಯ್ ಬುಳಕರ್, ನಜೀರ್ ಆಡಕಿ, ವಿನ್ನು ಕುಮಾರ ಜೆ.ಡಿ., ಮಾರುತಿ ಹುಳಗೋಳಕರ್, ಶಿವಯೋಗಿ ರಾವೂರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Related Articles

Leave a Reply

Your email address will not be published. Required fields are marked *

Back to top button