ಡಾಲಿ ಧನಂಜಯ್-ಧನ್ಯತಾ ದಂಪತಿಗೆ ಗಂಡು ಮಗು; ಗಣೇಶ ಚತುರ್ಥಿಯಂದು ಮಗನ ಹೆಸರು ಬಹಿರಂಗ

ಬೆಂಗಳೂರು: ಸ್ಯಾಂಡಲ್ವುಡ್ ನಟ ಡಾಲಿ ಧನಂಜಯ್ ಹಾಗೂ ಧನ್ಯತಾ ದಂಪತಿ ತಮ್ಮ ಮೊದಲ ಮಗುವನ್ನು ಬರಮಾಡಿಕೊಂಡಿದ್ದಾರೆ. ಗಂಡು ಮಗುವಿನ ಆಗಮನದ ಸಂಭ್ರಮದಲ್ಲಿರುವ ದಂಪತಿ, ಗಣೇಶ ಚತುರ್ಥಿಯಂದೇ ಮಗನ ಹೆಸರನ್ನೂ ಬಹಿರಂಗಪಡಿಸಿದ್ದಾರೆ.
ಕರ್ನಾಟಕದ ನಕ್ಷೆಯ ಮಧ್ಯೆ ಮಗನ ಹೆಸರು ಮೂಡಿಸಿರುವ ವಿಶೇಷ ಡಾಲರ್ ಮೂಲಕ ಧನಂಜಯ್ ಹಾಗೂ ಧನ್ಯತಾ ತಮ್ಮ ಮಗನ ಹೆಸರನ್ನು ಪರಿಚಯಿಸಿದ್ದಾರೆ. ‘ಎರೆಯ’ ಎಂದು ಮಗುವಿಗೆ ಹೆಸರಿಟ್ಟಿರುವುದಾಗಿ ದಂಪತಿ ತಿಳಿಸಿದ್ದಾರೆ.
‘ಎರೆಯ’ ಎಂದರೆ ಒಡೆಯ, ಅಧಿಪತಿ ಎಂಬ ಅರ್ಥವಿದೆ. ಇತಿಹಾಸದಲ್ಲಿಯೂ ಇಮ್ಮಡಿ ಪುಲಕೇಶಿಯ ಬಾಲ್ಯದ ಹೆಸರು ‘ಎರೆಯ’ ಆಗಿತ್ತು ಎನ್ನಲಾಗುತ್ತದೆ. ಈ ಹಿನ್ನೆಲೆಯಲ್ಲಿ ಪಾರಂಪರಿಕ ಹಿನ್ನೆಲೆಯೊಂದಿಗೆ ಶಕ್ತಿಯುತ ಅರ್ಥವನ್ನು ಹೊಂದಿರುವ ಹೆಸರನ್ನು ಮಗನಿಗೆ ಆಯ್ಕೆ ಮಾಡಲಾಗಿದೆ.
“ರಾಜರ, ಪಾರಂಪರಿಕ ಮತ್ತು ಶಕ್ತಿಯುತ ಅರ್ಥವನ್ನು ಹೊತ್ತಿರುವ ನಮ್ಮ ಪುಟ್ಟ ಬದುಕಿನ ಅಧಿಪತಿ, ನಮ್ಮ ಹೃದಯದ ರಾಜ ನಮ್ಮ ಎರೆಯ” ಎಂದು ಡಾಲಿ ಧನಂಜಯ್ ಹಾಗೂ ಧನ್ಯತಾ ತಮ್ಮ ಮಗನ ಹೆಸರನ್ನು ಪರಿಚಯಿಸಿದ್ದಾರೆ.
ಕಳೆದ ವರ್ಷ ಮೈಸೂರಿನಲ್ಲಿ ಅದ್ಧೂರಿಯಾಗಿ ವಿವಾಹವಾಗಿದ್ದ ಧನಂಜಯ್ ಮತ್ತು ಧನ್ಯತಾ, ಸ್ಯಾಂಡಲ್ವುಡ್ನಲ್ಲಿ ಗಮನ ಸೆಳೆದ ಜೋಡಿಗಳಲ್ಲಿ ಒಬ್ಬರು. ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಬೇಬಿ ಬಂಪ್ ಫೋಟೊಗಳನ್ನು ಹಂಚಿಕೊಂಡಿದ್ದ ದಂಪತಿ, ‘ನಮ್ಮ ಪ್ರಪಂಚ ವಿಸ್ತರಿಸುತ್ತಿದೆ’ ಎಂದು ಪೋಷಕರಾಗುತ್ತಿರುವ ಸಂತಸವನ್ನು ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದರು.
ಗಣೇಶ ಚತುರ್ಥಿಯ ವಿಶೇಷ ದಿನದಂದು ಮಗನ ಹೆಸರನ್ನು ಘೋಷಿಸುವ ಮೂಲಕ ಡಾಲಿ ದಂಪತಿ ಸಂಭ್ರಮವನ್ನು ಮತ್ತಷ್ಟು ಹೆಚ್ಚಿಸಿದ್ದಾರೆ.

