ಭೂಸನೂರಿನಲ್ಲಿ ಸೆ.17ರಂದು ಸ್ವಾತಂತ್ರ್ಯೋತ್ಸವ ಅಂಗವಾಗಿ ಭೈರಪ್ಪಗೌಡ ಸ್ಮರಣೆ

ಕಲಬುರಗಿ: ನಿಜಾಮರ ಆಡಳಿತ ಹಾಗೂ ರಜಾಕಾರರ ವಿರುದ್ಧ ಹೋರಾಡಿ ಈ ಭಾಗದ ಸ್ವಾತಂತ್ರ್ಯ ಹೋರಾಟಕ್ಕೆ ಮಹತ್ವದ ಕೊಡುಗೆ ನೀಡಿದ ಧೈರ್ಯವೀರ ಭೈರಪ್ಪಗೌಡ ಭೂಸನೂರ ಅವರ ತ್ಯಾಗ, ಶೌರ್ಯ ಹಾಗೂ ದೇಶಭಕ್ತಿಯನ್ನು ಸ್ಮರಿಸುವ ಕಾರ್ಯಕ್ರಮವನ್ನು ಕಲ್ಯಾಣ ಕರ್ನಾಟಕ ಸ್ವಾತಂತ್ರ್ಯೋತ್ಸವದ ಅಂಗವಾಗಿ ಸೆ.17ರಂದು ಆಳಂದ ತಾಲ್ಲೂಕಿನ ಭೂಸನೂರ ಗ್ರಾಮದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಗುಲಬರ್ಗಾ ಜಿಲ್ಲಾ ಹಿಂದೂ ಗಣಿಗಾರರ ಸಂಘದ ಅಧ್ಯಕ್ಷ ಶರಣಕುಮಾರ ಜಿಲಾಡಿ ತಿಳಿಸಿದ್ದಾರೆ.
1896ರ ಮಾರ್ಚ್ 27ರಂದು ಭೂಸನೂರ ಗ್ರಾಮದಲ್ಲಿ ಸಾಯಿಬಣ್ಣಗೌಡ ಹಾಗೂ ರೇವಮ್ಮಗೌಡತಿ ದಂಪತಿಯ ಪುತ್ರನಾಗಿ ಜನಿಸಿದ ಭೈರಪ್ಪಗೌಡರು ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಗಡಿಭಾಗದ ಹಲವು ಪ್ರದೇಶಗಳಲ್ಲಿ ಹೋರಾಟದ ಶಿಬಿರಗಳನ್ನು ಸ್ಥಾಪಿಸಿ ಯುವಕರಲ್ಲಿ ದೇಶಭಕ್ತಿಯ ಕಿಚ್ಚು ಹೊತ್ತಿಸಿದ್ದರು.
ಭೂಸನೂರ, ದುಧನಿ, ಆಳಂದ, ಮಹಾಗಾಂವ, ಸಾವಳಗಿ, ಹಿಪ್ಪರಗಿ, ಯಳಸಂಗಿ ಹಾಗೂ ಅಕ್ಕಲಕೋಟ ಸೇರಿದಂತೆ ಹಲವು ಪ್ರದೇಶಗಳಲ್ಲಿ ಹೋರಾಟಗಾರರನ್ನು ಸಂಘಟಿಸಿ ಅವರಿಗೆ ಆಹಾರ, ಆಶ್ರಯ ಮತ್ತು ವೈದ್ಯಕೀಯ ನೆರವು ಒದಗಿಸಿದ್ದರು. ರಜಾಕಾರರ ವಿರುದ್ಧ ಗೆರಿಲ್ಲಾ ಮಾದರಿಯ ಹೋರಾಟ ನಡೆಸಿದ್ದ ಭೈರಪ್ಪಗೌಡರ ಸಾಹಸಗಾಥೆಗಳು ಇಂದಿಗೂ ಈ ಭಾಗದ ಜನರ ನೆನಪಿನಲ್ಲಿ ಜೀವಂತವಾಗಿವೆ.
1947ರ ಆಗಸ್ಟ್ 20ರಂದು ಕಡೇಗಂಚಿ, ನಿಂಬರ್ಗಾ, ಭೂಸನೂರ ಹಾಗೂ ಯಳಸಂಗಿ ಭಾಗಗಳಲ್ಲಿ ರಜಾಕಾರರ ವಿರುದ್ಧ ನಡೆದ ಕಾರ್ಯಾಚರಣೆಗಳಲ್ಲಿಯೂ ಭೈರಪ್ಪಗೌಡರು ವಹಿಸಿದ ಪಾತ್ರ ಗಮನಾರ್ಹವಾಗಿತ್ತು ಎಂದು ಸ್ಥಳೀಯ ಹಿರಿಯರು ಸ್ಮರಿಸುತ್ತಾರೆ.
ಇಂತಹ ಅಪರೂಪದ ಸ್ವಾತಂತ್ರ್ಯ ಹೋರಾಟಗಾರರ ಇತಿಹಾಸವನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಅಗತ್ಯವಿದೆ. ಸರ್ಕಾರವು ಭೈರಪ್ಪಗೌಡ ಭೂಸನೂರ ಅವರ ಜೀವನ ಹಾಗೂ ಹೋರಾಟದ ಕುರಿತು ಸಮಗ್ರ ಸಂಶೋಧನೆ ನಡೆಸಿ, ಅಧಿಕೃತ ದಾಖಲೆಗಳನ್ನು ಸಂಗ್ರಹಿಸಬೇಕು. ಅವರ ಹೆಸರಿನಲ್ಲಿ ಸ್ಮಾರಕ ನಿರ್ಮಿಸಿ, ತ್ಯಾಗ, ಶೌರ್ಯ ಮತ್ತು ದೇಶಭಕ್ತಿಯ ಇತಿಹಾಸವನ್ನು ಶಾಶ್ವತವಾಗಿ ಉಳಿಸುವ ಕಾರ್ಯ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.



