ಕಲ್ಯಾಣ ಕರ್ನಾಟಕ ವಿದ್ಯಾರ್ಥಿರತ್ನ’ ಪ್ರಶಸ್ತಿಗೆ 22 ಪ್ರತಿಭಾವಂತ ವಿದ್ಯಾರ್ಥಿಗಳ ಆಯ್ಕೆ

ಕಲಬುರಗಿ: ಡಾ. ರಾಜಕುಮಾರ್ ಸಾಹಿತ್ಯಿಕ ಮತ್ತು ಸಾಂಸ್ಕೃತಿಕ ಕಲಾ ಸಂಘದ ವತಿಯಿಂದ ರಾಷ್ಟ್ರೀಯ ಶಿಕ್ಷಕರ ದಿನಾಚರಣೆ ಹಾಗೂ 5ನೇ ವರ್ಷದ ಶಿಕ್ಷಕರ ಉತ್ಸವ–2026ರ ಅಂಗವಾಗಿ 2025–26ನೇ ಸಾಲಿನ ಎಸ್ಎಸ್ಎಲ್ಸಿ ಹಾಗೂ ಪಿಯುಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ‘ಕಲ್ಯಾಣ ಕರ್ನಾಟಕ ವಿದ್ಯಾರ್ಥಿರತ್ನ’ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಸೆ.20ರಂದು ಆಯೋಜಿಸಲಾಗಿದೆ.
ನಗರದ ಡಾ. ಎಸ್.ಎಂ. ಪಂಡಿತ್ ರಂಗಮಂದಿರದಲ್ಲಿ ಸೆ.20ರಂದು ನಡೆಯಲಿರುವ ಕಾರ್ಯಕ್ರಮದಲ್ಲಿ ಕಲ್ಯಾಣ ಕರ್ನಾಟಕದ ವಿವಿಧ ಜಿಲ್ಲೆಗಳಿಂದ ಆಯ್ಕೆಯಾಗಿರುವ ಸುಮಾರು 22 ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಗುವುದು.
ಕಾರ್ಯಕ್ರಮವನ್ನು ಮಾಜಿ ಸಚಿವ ಸುನೀಲ ವಲ್ಯಾಪುರೆ ಹಾಗೂ ವಿಧಾನ ಪರಿಷತ್ ಸದಸ್ಯ ಶಶೀಲ ನಮೋಶಿ ಉದ್ಘಾಟಿಸಲಿದ್ದಾರೆ. ಕೊಪ್ಪಳ ಜಿಲ್ಲೆಯ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಕರ್ಣಕುಮಾರ ಜೈನಾಪುರ ಅವರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ವಿವಿಧ ಕ್ಷೇತ್ರಗಳ ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
ಪ್ರತಿವರ್ಷದಂತೆ ಈ ವರ್ಷವೂ ವಿದ್ಯಾರ್ಥಿಗಳ ಶೈಕ್ಷಣಿಕ ಸಾಧನೆಯನ್ನು ಗುರುತಿಸಿ, ಅವರನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಸಂಘದ ಅಧ್ಯಕ್ಷ ಪ್ರೊ. ರಮೇಶ ಯಾಳಗಿ, ಕಾರ್ಯದರ್ಶಿ ಯಲ್ಲಾಲಿಂಗ ದಂಡಿನ್ ಹಾಗೂ ಸಂಚಾಲಕ ಅಶೋಕಕುಮಾರ ಉಪ್ಪಿನ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.



