ಕಲಬುರಗಿಜಿಲ್ಲಾಸುದ್ದಿ

ಜೇವರ್ಗಿಯಲ್ಲಿ ಮಲ್ಲಾಬಾದ್ ಏತ ನೀರಾವರಿ–ಸರ್ಕಾರಿ ಶಾಲೆಗಳ ಉಳಿವಿಗೆ ಹೋರಾಟ ತೀವ್ರಗೊಳಿಸಲು ನಿರ್ಧಾರ

ಜೇವರ್ಗಿ: ಜೇವರ್ಗಿ ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆದ ಮಹತ್ವದ ಸಭೆಯಲ್ಲಿ ಮಲ್ಲಾಬಾದ್ ಏತ ನೀರಾವರಿ ಯೋಜನೆಗೆ ತಕ್ಷಣ ಚಾಲನೆ ನೀಡಬೇಕು ಹಾಗೂ ಗ್ರಾಮೀಣ ಪ್ರದೇಶಗಳ ಸರ್ಕಾರಿ ಶಾಲೆಗಳ ಮುಚ್ಚುವಿಕೆ ಕ್ರಮವನ್ನು ಹಿಂಪಡೆಯಬೇಕು ಎಂದು ರೈತ ಮುಖಂಡರು ಒತ್ತಾಯಿಸಿದರು.

ಸರ್ಕಾರ ತಕ್ಷಣ ಸ್ಪಂದಿಸದಿದ್ದರೆ ಹಂತ ಹಂತವಾಗಿ ಹೋರಾಟ ತೀವ್ರಗೊಳಿಸಲು ನಿರ್ಧಾರ ಕೈಗೊಳ್ಳಲಾಗಿದೆ.

ಸಭೆಯಲ್ಲಿ ಮಾತನಾಡಿದ ಮಹೇಶ್ ಕುಮಾರ್ ರಾಥೋಡ್, “ಮಲ್ಲಾಬಾದ್ ಏತ ನೀರಾವರಿ ಯೋಜನೆ ರೈತರ ಜೀವನಾಡಿ. ವರ್ಷಗಳಿಂದ ನಿರ್ಲಕ್ಷ್ಯಕ್ಕೆ ಒಳಗಾಗಿರುವ ಈ ಯೋಜನೆಯನ್ನು ತಕ್ಷಣ ಜಾರಿಗೊಳಿಸಬೇಕು. ವಿಳಂಬದಿಂದ ರೈತರಿಗೆ ಅಪಾರ ನಷ್ಟವಾಗುತ್ತಿದೆ,” ಎಂದು ಹೇಳಿದರು.

ಬಾಬು ಪಾಟೀಲ್ ಮುತ್ತಕೋಡ ಅವರು, “ಗ್ರಾಮೀಣ ಪ್ರದೇಶಗಳ ಸರ್ಕಾರಿ ಶಾಲೆಗಳನ್ನು ಮುಚ್ಚುವ ಕ್ರಮ ಬಡ ಮಕ್ಕಳ ಭವಿಷ್ಯಕ್ಕೆ ದೊಡ್ಡ ಹೊಡೆತ. ಸರ್ಕಾರ ತನ್ನ ನಿರ್ಧಾರವನ್ನು ಹಿಂಪಡೆಯಬೇಕು. ಶಾಲೆಗಳ ಉಳಿವಿಗೆ ನಮ್ಮ ಹೋರಾಟ ನಿರಂತರವಾಗಿರಲಿದೆ,” ಎಂದು ಎಚ್ಚರಿಸಿದರು.

ಇಬ್ರಾಹಿಂ ಪಟೇಲ್ ಯಾಳವಾರ್ ಶಾಂತಿಪೂರ್ಣ ಹೋರಾಟದ ಮೂಲಕ ಸರ್ಕಾರದ ಗಮನ ಸೆಳೆಯಬೇಕೆಂದು ಕರೆ ನೀಡಿದರು. ಮೈನುದ್ದಿನ್ ಇನಾಮ್ದಾರ್ (ವಕೀಲರು) ಅಗತ್ಯವಿದ್ದರೆ ಕಾನೂನು ಹೋರಾಟಕ್ಕೂ ಮುಂದಾಗುವುದಾಗಿ ತಿಳಿಸಿದರು.

ಸಭೆಯಲ್ಲಿ ಮೊದಲ ಹಂತದಲ್ಲಿ ಸಂಬಂಧಿತ ಅಧಿಕಾರಿಗಳಿಗೆ ಮನವಿ ಸಲ್ಲಿಸುವುದು, ನಂತರ ತಾಲೂಕು ಮಟ್ಟದಲ್ಲಿ ಧರಣಿ ನಡೆಸುವುದು ಹಾಗೂ ಅಗತ್ಯವಿದ್ದರೆ ಭಾರಿ ಪ್ರತಿಭಟನೆ ಹಮ್ಮಿಕೊಳ್ಳುವ ಬಗ್ಗೆ ತೀರ್ಮಾನ ಕೈಗೊಳ್ಳಲಾಗಿದೆ.

ಈ ಸಭೆಯಲ್ಲಿ ಬಿ.ಹೆಚ್. ಮಾಲಿ ಪಾಟೀಲ್, ಭೀಮಶಂಕರ್ ಬಿಲ್ಲಾಡ, ಸಿದ್ದಲಿಂಗ ಪೂಜಾರಿ, ನಿಂಗಪ್ಪ ಪೂಜಾರಿ ಯಾಳವಾರ್, ಪರಮೇಶ್ ಬಿರಾಳ್, ಗುರುನಾಥ್ ಸಾಹು ರಾಜವಾಳ್, ಮಲ್ಲಿಕಾರ್ಜುನ್ ದೊಡ್ಮನಿ ಕೆಲ್ಲೂರು, ಗಿರೀಶ ತುಂಬಗಿ, ದೇವೇಂದ್ರ ಚಿಗರಳ್ಳಿ, ಸಲೀಂ ಪಟೇಲ್ ಸಿಗರತಳ್ಳಿ, ಅಜೀಜ್ ಪಟೇಲ್, ಶಾಂತಯ್ಯ ಗುತ್ತೇದಾರ್, ರಫೀಕ ಸೇರಿದಂತೆ ಅನೇಕ ಮುಖಂಡರು ಉಪಸ್ಥಿತರಿದ್ದರು.

Related Articles

Leave a Reply

Your email address will not be published. Required fields are marked *

Back to top button