ಕಲಬುರಗಿ

ಡಾ. ಶರಣಪ್ಪ ಸೈದಾಪೂರ ಅವರಿಗೆ ನುಡಿ ನಮನ: ಸಮಾಜಮುಖಿ ಚಿಂತನೆಯ ಸ್ಮರಣೆ

ಕಲಬುರಗಿ: ಸಮಾಜಮುಖಿ ಚಿಂತನೆ ಮತ್ತು ಹೋರಾಟದ ಮನೋಭಾವದಿಂದ ಗುರುತಿಸಿಕೊಂಡಿದ್ದ ಪ್ರಾಧ್ಯಾಪಕ ಡಾ. ಶರಣಪ್ಪ ಸೈದಾಪೂರ ಅವರಿಗೆ ನಗರದ ಕನ್ನಡ ಭವನದಲ್ಲಿ ನುಡಿ ನಮನ ಸಲ್ಲಿಸಲಾಯಿತು. ಹೈದರಾಬಾದ್ ಕರ್ನಾಟಕ ಸರ್ಕಾರಿ ಕಾಲೇಜು ಅಧ್ಯಾಪಕರ ಸಂಘ (ರಿ) ವಿಭಾಗೀಯ ಘಟಕದ ವತಿಯಿಂದ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು.

ಕಾರ್ಯಕ್ರಮದಲ್ಲಿ ಮಾತನಾಡಿದ ಗುಲಬರ್ಗಾ ವಿಶ್ವವಿದ್ಯಾಲಯದ ಕುಲಸಚಿವ ಡಾ. ರಮೇಶ್ ಲಂಡನಕರ ಅವರು, ಡಾ. ಶರಣಪ್ಪ ಸೈದಾಪೂರ ವಿದ್ಯಾರ್ಥಿ ದಶೆಯಿಂದಲೇ ಹೋರಾಟದ ಹಿನ್ನೆಲೆಯನ್ನು ಹೊಂದಿದವರಾಗಿದ್ದು, ಸಂಕಷ್ಟದಲ್ಲಿರುವ ಜನರ ಸಮಸ್ಯೆಗಳಿಗೆ ಸದಾ ಸ್ಪಂದಿಸುವ ಸಹೃದಯಿ ವ್ಯಕ್ತಿಯಾಗಿದ್ದರು ಎಂದರು. ಕೋವಿಡ್ ಸಂದರ್ಭದಲ್ಲಿ ತಮ್ಮ ಜೀವದ ಹಂಗನ್ನೂ ತೊರೆದು ಎನ್‌ಎಸ್‌ಎಸ್ ಸಹಯೋಗದಲ್ಲಿ ಹಳ್ಳಿ ಹಳ್ಳಿಗಳಲ್ಲಿ ಜಾಗೃತಿ ಮೂಡಿಸುವ ಕಾರ್ಯದಲ್ಲಿ ತೊಡಗಿಕೊಂಡಿದ್ದರು. ಸಂವಿಧಾನ ಜಾಗೃತಿ ಜಾಥಾ ಮತ್ತು ವರದಕ್ಷಿಣೆ ವಿರೋಧಿ ಅಭಿಯಾನಗಳಲ್ಲಿ ಸಕ್ರಿಯವಾಗಿ ಭಾಗವಹಿಸಿ ಮಾನವೀಯ ಮೌಲ್ಯಗಳನ್ನು ಮೆರೆದ ಪ್ರಾಧ್ಯಾಪಕರಾಗಿದ್ದರು ಎಂದು ಸ್ಮರಿಸಿದರು.

ಚಿಂತಕ ಪ್ರೊ. ಆರ್.ಕೆ. ಹುಡುಗಿ ಅವರು ಮಾತನಾಡಿ, ಡಾ. ಶರಣಪ್ಪ ಸೈದಾಪೂರ ಒಬ್ಬ ಸಂಶೋಧಕ, ಅರ್ಥಶಾಸ್ತ್ರಜ್ಞ ಹಾಗೂ ಬರಹಗಾರರಾಗಿದ್ದರು. ದೇಶ-ವಿದೇಶಗಳಲ್ಲಿ ಬಡವರು ಮತ್ತು ದೀನ ದಲಿತರು ಅನುಭವಿಸುವ ಕಷ್ಟಗಳಿಗೆ ಸ್ಪಂದಿಸುವ ಗುಣ ಮತ್ತು ಹೋರಾಟದ ಮನೋಭಾವ ಹೊಂದಿದ ವ್ಯಕ್ತಿತ್ವವಾಗಿದ್ದರು ಎಂದು ಹೇಳಿದರು.

ಇದೇ ವೇಳೆ ಡಾ. ಸವಿತಾ ತಿವಾರಿ, ಡಾ. ಸಂತೋಷ ಪಾಟೀಲ ಹೆಬ್ಬಾಳ, ಡಾ. ಇಂದುಮತಿ ಪಾಟೀಲ, ಡಾ. ಜಯದೇವಿ ಗಾಯಕವಾಡ, ಡಾ. ಶಾಂತಾ ಅಷ್ಟಗಿ, ಎಸ್.ಪಿ. ಸುಳ್ಳದ, ಡಾ. ಶಿವಶರಣಪ್ಪ ಬಿರಾದಾರ, ಡಾ. ಪ್ರಲ್ಲಾದ ಚೇಂಗಟೆ, ಸುನೀಲಕುಮಾರ ಒಂಟಿ, ಡಾ. ನಾಗಪ್ಪ ಗೋಗಿ, ಪದ್ಮಣ್ಣ ರಾಸಣಗಿ, ಡಾ. ಚಿನ್ನಾ ಆಶಪ್ಪ, ಡಾ. ಶರಣಪ್ಪ ಗುಂಡಗುರ್ತಿ ಸೇರಿದಂತೆ ಹಲವರು ನುಡಿ ನಮನ ಸಲ್ಲಿಸಿದರು. ಸಂಗೀತಾ ಸೈದಾಪೂರ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಡಾ. ಶ್ರೀಮಂತ ಬಿ. ಹೋಳಕರ ಪ್ರಾಸ್ತಾವಿಕವಾಗಿ ಮಾತನಾಡಿದ್ದು, ಡಾ. ಮಲ್ಲಿಕಾರ್ಜುನ ಶೆಟ್ಟಿ ಕಾರ್ಯಕ್ರಮವನ್ನು ನಿರೂಪಿಸಿದರು. ಕಾರ್ಯಕ್ರಮದಲ್ಲಿ ಅನೇಕ ಗಣ್ಯರು ಮತ್ತು ಅಧ್ಯಾಪಕರು ಭಾಗವಹಿಸಿದರು.

Related Articles

Leave a Reply

Your email address will not be published. Required fields are marked *

Back to top button