“ಸಸಿ ನೆಡುವುದಷ್ಟೇ ಸಾಲದು, ಉಳಿಸುವ ಸಂಕಲ್ಪವೂ ಅಗತ್ಯ” : ನ್ಯಾಯಾಧೀಶ ಕಾಶಿನಾಥ್ ಉಪ್ಪಾರ್ ಕರೆ

ಜೇವರ್ಗಿ: ಪರಿಸರ ಸಂರಕ್ಷಣೆ ಪ್ರತಿಯೊಬ್ಬ ನಾಗರಿಕನ ಜವಾಬ್ದಾರಿಯಾಗಿದ್ದು, ಸಸಿ ನೆಡುವುದರೊಂದಿಗೆ ಅದರ ಪೋಷಣೆ ಮತ್ತು ಸಂರಕ್ಷಣೆಯ ಹೊಣೆಗಾರಿಕೆಯನ್ನು ಸಹ ವಹಿಸಿಕೊಳ್ಳಬೇಕು ಎಂದು ತಾಲೂಕು ಕಾನೂನು ಸೇವೆಗಳ ಸಮಿತಿಯ ಸದಸ್ಯ ಕಾರ್ಯದರ್ಶಿ ಹಾಗೂ ಸಿವಿಲ್ ನ್ಯಾಯಾಧೀಶರಾದ ಕಾಶಿನಾಥ್ ಉಪ್ಪಾರ್ ಹೇಳಿದರು.
ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ತಾಲೂಕು ಕಾನೂನು ಸೇವೆಗಳ ಸಮಿತಿ, ವಕೀಲರ ಸಂಘ, ಅರಣ್ಯ ಇಲಾಖೆ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ ಸಂಯುಕ್ತ ಆಶ್ರಯದಲ್ಲಿ ವಿಜಯಪುರ ರಸ್ತೆಯ ಸರ್ಕಾರಿ ಕನ್ಯಾ ಪ್ರೌಢಶಾಲೆಯಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಕಾನೂನು ಸಾಕ್ಷರತೆ ಮತ್ತು ಪರಿಸರ ಜಾಗೃತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
“ಪ್ರಕೃತಿ ಮಾನವನ ಬದುಕಿನ ಮೂಲಾಧಾರವಾಗಿದೆ. ಪರಿಸರ ಸಮತೋಲನ ಕಾಪಾಡುವುದು ಪ್ರತಿಯೊಬ್ಬರ ಕರ್ತವ್ಯ. ‘ಕಾಡು ಉಳಿಸಿ–ನಾಡು ಬೆಳೆಸಿ’ ಎಂಬ ಧ್ಯೇಯದೊಂದಿಗೆ ಪ್ರತಿಯೊಬ್ಬರೂ ಸಸಿ ನೆಟ್ಟು ಅದರ ಸಂರಕ್ಷಣೆಗೆ ಮುಂದಾಗಬೇಕು. ಈ ವರ್ಷ ಸುಮಾರು 10 ಸಾವಿರ ಸಸಿಗಳನ್ನು ನೆಡುವ ಗುರಿಯೊಂದಿಗೆ ಅರಣ್ಯ ವಿಸ್ತರಣೆಗೆ ಎಲ್ಲರೂ ಕೈಜೋಡಿಸಬೇಕು” ಎಂದು ಕರೆ ನೀಡಿದರು.
ಹಿರಿಯ ಶ್ರೇಣಿ ನ್ಯಾಯಾಲಯದ ನ್ಯಾಯಾಧೀಶೆ ಅಯ್ಯಬಾ ಸುಲ್ತಾನ್ ಕಾರ್ಯಕ್ರಮದಲ್ಲಿ ಭಾಗವಹಿಸಿ ಪರಿಸರ ಸಂರಕ್ಷಣೆಯ ಮಹತ್ವದ ಕುರಿತು ವಿದ್ಯಾರ್ಥಿಗಳಿಗೆ ಅರಿವು ಮೂಡಿಸಿದರು.ವಿಶೇಷ ಉಪನ್ಯಾಸ ನೀಡಿದ ವಕೀಲ ಅಪ್ಪಾಸಾಹೇಬ್, ಪರಿಸರ ಸಂರಕ್ಷಣೆ ಕೇವಲ ಸರ್ಕಾರದ ಜವಾಬ್ದಾರಿಯಲ್ಲ, ಸಮಾಜದ ಪ್ರತಿಯೊಬ್ಬ ಸದಸ್ಯನ ಕರ್ತವ್ಯವಾಗಿದೆ ಎಂದು ಹೇಳಿದರು.
ಹೆಚ್ಚುತ್ತಿರುವ ಮಾಲಿನ್ಯ, ಅರಣ್ಯ ನಾಶ ಹಾಗೂ ಹವಾಮಾನ ಬದಲಾವಣೆಯಂತಹ ಸವಾಲುಗಳನ್ನು ಎದುರಿಸಲು ಯುವಜನರು ಮತ್ತು ವಿದ್ಯಾರ್ಥಿಗಳು ಪರಿಸರ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಕಾರ್ಯಕ್ರಮದ ಅಂಗವಾಗಿ ವಿದ್ಯಾರ್ಥಿಗಳಿಗೆ ಸಸಿಗಳನ್ನು ವಿತರಿಸಿ ಪರಿಸರ ಸಂರಕ್ಷಣೆಯ ಸಂಕಲ್ಪ ಮಾಡಿಸಲಾಯಿತು. ವಿದ್ಯಾರ್ಥಿಗಳು ತಮ್ಮ ಮನೆ, ಶಾಲೆ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸಸಿಗಳನ್ನು ನೆಟ್ಟು ಅವುಗಳ ಪೋಷಣೆ ಮಾಡುವ ಪ್ರತಿಜ್ಞೆ ಸ್ವೀಕರಿಸಿದರು.
ಸಹಾಯಕ ಸರ್ಕಾರಿ ಅಭಿಯೋಜಕರಾದ ಬಸಲಿಂಗಮ್ಮ, ನಾಗವೇಣಿ ಧನ್, ವಕೀಲರ ಸಂಘದ ಅಧ್ಯಕ್ಷ ಶಾಂತರಾಜ್ ಪಾಟೀಲ್, ಕಾರ್ಯದರ್ಶಿ ರಾಜಶೇಖರ್ ಶಿಲ್ಪಿ, ಉಪಾಧ್ಯಕ್ಷ ಭಾಷಾ ಪಟೇಲ್ ಯಾಳವಾರ್, ಹಿರಿಯ ವಕೀಲ ಎಂ.ಐ. ಸೂಗೂರು, ವಕೀಲರಾದ ಬೆಣ್ಣೆಪ್ಪ ಕೊಂಬಿನ ಮತ್ತು ಮಲ್ಲಿಕಾರ್ಜುನ ಸೊನ್ನದ, ನಗರ ವಲಯ ಅರಣ್ಯಾಧಿಕಾರಿ ಪ್ರಿಯಾಂಕ, ಅರಣ್ಯ ಇಲಾಖೆ ಸಿಬ್ಬಂದಿ, ತಾಲೂಕು ಕಾನೂನು ಸೇವೆಗಳ ಸಮಿತಿಯ ಹುಣಚಿರಾಯ ಹಾಗೂ ಶ್ರೀಕಾಂತ, ಶಾಲೆಯ ಮುಖ್ಯಗುರುಗಳು, ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಪರಿಸರ ಸಂರಕ್ಷಣೆ ಮತ್ತು ಕಾನೂನು ಅರಿವಿನ ಮಹತ್ವವನ್ನು ಒಟ್ಟಿಗೆ ಸಾರಿದ ಈ ಕಾರ್ಯಕ್ರಮವು ವಿದ್ಯಾರ್ಥಿಗಳಲ್ಲಿ ಪ್ರಕೃತಿ ಪ್ರೇಮ ಹಾಗೂ ಸಾಮಾಜಿಕ ಜವಾಬ್ದಾರಿಯ ಮನೋಭಾವ ಬೆಳೆಸುವಲ್ಲಿ ಯಶಸ್ವಿಯಾಯಿತು.




