ಕಲಬುರಗಿಜಿಲ್ಲಾಸುದ್ದಿ

ಸಾಮ್ರಾಜ್ಯವಾದ ವಿರೋಧಿ ದಿನಾಚರಣೆ: ಭಗತ್ ಸಿಂಗ್ ತ್ಯಾಗ ಸ್ಮರಣೆ

ಆಳಂದ: ಮಾರ್ಚ್ 23 ಅನ್ನು ಸಾಮ್ರಾಜ್ಯವಾದ ವಿರೋಧಿ ದಿನವಾಗಿ ಆಚರಿಸುವ ಮೂಲಕ ದೇಶದ ಸ್ವಾತಂತ್ರ್ಯಕ್ಕಾಗಿ ಅತ್ಯುನ್ನತ ತ್ಯಾಗ ಮಾಡಿದ ಭಗತ್ ಸಿಂಗ್, ರಾಜಗುರು ಮತ್ತು ಸುಖದೇವರನ್ನು ಸ್ಮರಿಸುವುದು ನಮ್ಮ ಕರ್ತವ್ಯ ಎಂದು ಭಾರತ ಕಮ್ಯುನಿಸ್ಟ್ ಪಕ್ಷ (CPI) ಜಿಲ್ಲಾ ಕಾರ್ಯದರ್ಶಿ ಡಾ. ಮಹೇಶಕುಮಾರ ರಾಠೋಡ್ ಹೇಳಿದರು.

ಭಾರತ ಕಮ್ಯುನಿಸ್ಟ್ ಪಕ್ಷದ ರಾಷ್ಟ್ರೀಯ ಮಂಡಳಿಯ ಕರೆಯ ಮೇರೆಗೆ ದೇಶಾದ್ಯಂತ ಆಚರಿಸಲಾಗುತ್ತಿರುವ ಸಾಮ್ರಾಜ್ಯವಾದ ವಿರೋಧಿ ದಿನದ ಅಂಗವಾಗಿ ತಾಲೂಕಿನ ಆಳಂದದಲ್ಲಿ ನಡೆದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಬ್ರಿಟಿಷ್ ಸಾಮ್ರಾಜ್ಯಶಾಹಿಗಳ ವಿರುದ್ಧ ಹೋರಾಡಿದ ಹುತಾತ್ಮರ ತ್ಯಾಗ, ಧೈರ್ಯ ಹಾಗೂ ದೇಶಭಕ್ತಿ ಇಂದಿನ ಪೀಳಿಗೆಗೆ ಪ್ರೇರಣೆಯಾಗಬೇಕು ಎಂದು ಹೇಳಿದರು. ಇಂದಿನ ದಿನಗಳಲ್ಲಿ ವಿಶೇಷವಾಗಿ ಅಮೆರಿಕದ ಸಾಮ್ರಾಜ್ಯವಾದಿ ನೀತಿಗಳು ವೆನಿಜುವೆಲಾ, ಇರಾನ್ ಹಾಗೂ ಪ್ಯಾಲೇಸ್ಟೈನ್ (ಗಾಜಾ) ಸೇರಿದಂತೆ ವಿವಿಧ ದೇಶಗಳ ಮೇಲೆ ತನ್ನ ಪ್ರಭಾವವನ್ನು ಹೇರಲು ಯತ್ನಿಸುತ್ತಿವೆ. ಇಂತಹ ನೀತಿಗಳ ವಿರುದ್ಧ ಜಾಗೃತಿ ಮೂಡಿಸುವುದು ಅವಶ್ಯಕ ಎಂದು ಅವರು ತಿಳಿಸಿದರು.

ಕಾರ್ಯಕ್ರಮದಲ್ಲಿ ಮಾತನಾಡಿದ ಬೀದರ ಜಿಲ್ಲೆಯ ಹಿರಿಯ ಕಮ್ಯುನಿಸ್ಟ್ ನಾಯಕ ಬಾಬುರಾವ ಹೊನ್ನಾ, ಅಮೆರಿಕವು ತನ್ನ ಸಾಮ್ರಾಜ್ಯಶಾಹಿ ನೀತಿಗಳ ಮೂಲಕ ವಿಶ್ವದಲ್ಲಿ ಅಶಾಂತಿ ಸೃಷ್ಟಿಸುತ್ತಿದೆ ಎಂದು ಆರೋಪಿಸಿದರು. ಯುದ್ಧಗಳನ್ನು ತಪ್ಪಿಸಲು ಭಾರತವು ಹಿಂದಿನಂತೆ ಅಲಿಪ್ತ ನೀತಿಯನ್ನು ಅನುಸರಿಸಬೇಕು. ಆಗ ಮಾತ್ರ ಭಾರತವು ನಿಜವಾದ ಅರ್ಥದಲ್ಲಿ ‘ವಿಶ್ವಗುರು’ ಸ್ಥಾನಕ್ಕೇರಲಿದೆ ಎಂದು ಅಭಿಪ್ರಾಯಪಟ್ಟರು.

ರಾಜ್ಯ ಮಂಡಳಿ ಸದಸ್ಯ ಕಾಂ. ಮೌಲಾಮುಲ್ಲಾ ಮಾತ ನಾಡಿ, ಸಾಮ್ರಾಜ್ಯಶಾಹಿ ಶಕ್ತಿಗಳು ಈಗ ಆರ್ಥಿಕ ವ್ಯವಸ್ಥೆಗಳ ಮೂಲಕ ಮನೆಮನೆಗೆ ಪ್ರವೇಶಿಸುತ್ತಿವೆ. ಅಕ್ರಮ ಮೈಕ್ರೋಫೈನಾನ್ಸ್ ಸಂಸ್ಥೆಗಳು ಬಡವರ ಮೇಲೆ ಚಕ್ರಬಡ್ಡಿ, ಮೀಟರ್ ಬಡ್ಡಿ ರೂಪದಲ್ಲಿ ಶೋಷಣೆ ನಡೆಸುತ್ತಿವೆ. ಇವುಗಳಿಗೆ ಕಡಿವಾಣ ಹಾಕಲು ನಿರಂತರ ಹೋರಾಟ ಅಗತ್ಯವಿದೆ ಎಂದು ಹೇಳಿದರು.

ಈ ಕಾರ್ಯಕ್ರಮದಲ್ಲಿ AIKS ಜಿಲ್ಲಾ ಅಧ್ಯಕ್ಷ ಭೀಮಾಶಂಕರ ಮಾಡಿಯಾಳ, ಕಾಂ. ಆಸ್ಪಕ್ ಮುಲ್ಲಾ, ಮಹಮ್ಮದ್ ಚೌದರಿ, ಮಲ್ಲೇಶಿ, ಜಯಶೀಲ, ಸೂರ್ಯ ಕಾಂತ ಮಾಡಾಕಟ್ಟಿ, ಚಂದ್ರಕಾಂತ ಖೋಬ್ರೆ, ಮಹದೇವ ಪೂಜಾರಿ, ರಾಜಶೇಖರ ಭಸ್ಮೆ, ಕಮಲೇಶ್ ಅವಟೆ, ಮಹದೇವ ಜಿಡ್ಡೆ, ಮಹದೇವಿ ಮಂಟಕಿ, ಶಿವಕುಮಾರ ಪಾಟೀಲ, ಗುರಪಾದ ಬಂಸೋಡೆ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Related Articles

Leave a Reply

Your email address will not be published. Required fields are marked *

Back to top button