ದಸರಾ ಸಂಭ್ರಮದ ನಡುವೆಯೇ ಭೀಮಾ ತೀರ ಸಂತ್ರಸ್ತರ ಕಣ್ಣೀರು

ಜೇವರ್ಗಿ:ನಾಡೆಲ್ಲೆಡೆ ದಸರಾ ಹಬ್ಬವನ್ನು ಸಡಗರ ಸಂಭ್ರಮದಿಂದ ಆಚರಿಸುತ್ತಿರುವಾಗ, ಜೇವರ್ಗಿ ತಾಲ್ಲೂಕಿನ ಭೀಮಾ ನದಿ ತೀರದ 30ಕ್ಕೂ ಹೆಚ್ಚು ಗ್ರಾಮಗಳ ಪ್ರವಾಹ ಸಂತ್ರಸ್ತರು ಮಾತ್ರ ಕಣ್ಣೀರಲ್ಲೇ ಹಬ್ಬ ಆಚರಿಸುವಂತಾಗಿ ದೆ.
ರದ್ದೇವಾಡಗಿ, ಕೂಡಿ, ಕೋಬಾಳ, ಮಂದರವಾಡ, ಕೋನಾಹಿಪ್ಪರಗಾ, ಕಟ್ಟಿಸಂಗಾವಿ, ಮದರಿ, ಯನಗುಂಟ, ನರಿಬೋಳ, ಮಲ್ಲಾ ಕೆ., ಮಲ್ಲಾ ಬಿ., ರಾಜವಾಳ, ಹೋತಿನಮಡು, ಹೊನ್ನಾಳ, ರಾಂಪೂರ, ಮಾಹೂರ, ಯಂಕಂಚಿ, ಕೂಡಲಗಿ, ಕಲ್ಲೂರ ಬಿ., ಬಳ್ಳುಂಡಗಿ, ಹರವಾಳ, ಇಟಗಾ ಸೇರಿದಂತೆ ತಾಲ್ಲೂಕಿನ ಅನೇಕ ಗ್ರಾಮಗಳು ಪ್ರವಾಹದಿಂದ ಬಾಧಿತಗೊಂಡಿದ್ದು, ಅನೇಕರ ಮನೆಗಳು ಇನ್ನೂ ಜಲಾವೃತಗೊಂಡಿವೆ.
ಹಬ್ಬದ ದಿನ ಪ್ರತಿಯೊಬ್ಬರ ಮನೆಯಲ್ಲಿ ಸಿಹಿಯೂಟ ಸಾಮಾನ್ಯ. ಆದರೆ ಸಂತ್ರಸ್ತರಿಗೆ ಕುಡಿಯಲು ಶುದ್ಧ ನೀರೇ ದೊರೆಯದ ಸ್ಥಿತಿ ಉಂಟಾಗಿದೆ. ಗಲೀಜು ನೀರನ್ನೇ ಕುಡಿಯುವಂತಾದ್ದರಿಂದ ಸಾಂಕ್ರಾಮಿಕ ರೋಗದ ಭೀತಿ ಹೆಚ್ಚಾಗಿದೆ. ಮಹಿಳೆಯರು ಹಬ್ಬದ ಸಡಗರದಲ್ಲಿ ಇರಬೇಕಾದರೆ, ಅವರು ಪ್ರವಾಹದಿಂದ ಕೊಳಚೆಯಾದ ಮನೆಗಳ ಸ್ವಚ್ಛತೆಗೆ ತೊಡಗಿದ್ದಾರೆ.
“ದಸರಾ ಹಬ್ಬ ಇದ್ದರೂ ಪ್ರವಾಹದಿಂದ ನಾವು ಹಬ್ಬ ಮಾಡದಂತಾಗಿದೆ. ಅಡುಗೆ ಮಾಡಲು ಹಿಡಿ ಅಕ್ಕಿಯೂ ಇಲ್ಲ,” ಎಂದು ರದ್ದೇವಾಡಗಿ ಗ್ರಾಮದ ಶಾಂತಮ್ಮ ಆಕ್ರೋಶ ವ್ಯಕ್ತಪಡಿಸಿದರು. “ಹಬ್ಬದಂದು ಹೋಳಿಗೆ ಬಿಡಿ, ಕುಡಿಯಲು ಶುದ್ಧ ನೀರೇ ಸಿಗುತ್ತಿಲ್ಲ,” ಎಂದು ಸಂತ್ರಸ್ತೆ ಲಕ್ಷ್ಮಿಬಾಯಿ ಕಣ್ಣೀರಿಟ್ಟರು.
“ಪ್ರವಾಹದಲ್ಲಿ ನಮ್ಮ ಟಿವಿ, ಅಕ್ಕಿ, ಬೇಳೆ, ಜೋಳ ಎಲ್ಲವೂ ಹಾಳಾಗಿದೆ. ಶಿಥಿಲಗೊಂಡ ಮನೆಗಳಿಗೆ ಹಾಗೂ ಹಾಳಾದ ಬೆಳೆಗಳಿಗೆ ಸರ್ಕಾರ ಪರಿಹಾರ ನೀಡಬೇಕು,” ಎಂದು ಮಂದರವಾಡ ಗ್ರಾಮದ ಮಲ್ಲಪ್ಪ ಹೊಸಮನಿ ಬೇಡಿಕೊಂಡರು.
ಪ್ರವಾಹದಿಂದ ಹಲವಾರು ಗ್ರಾಮಗಳಿಗೆ ಹೋಗಲು ಇನ್ನೂ ಸಾಧ್ಯವಾಗದೆ ಜನ ಪರದಾಡುತ್ತಿದ್ದಾರೆ. ದಸರಾ ಹಬ್ಬದ ಸಂಭ್ರಮದ ನಡುವೆಯೇ ಸಂತ್ರಸ್ತರ ಬದುಕು ಇನ್ನೂ ಸಂಕಷ್ಟದಲ್ಲೇ ಮುಂದುವರಿದಿದೆ.