ರಾಜಾಪೂರ ವಾರ್ಡ್ನಲ್ಲಿ ₹90.02 ಲಕ್ಷ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಅಲ್ಲಮಪ್ರಭು ಪಾಟೀಲ್ ಚಾಲನೆ

ಕಲಬುರಗಿ, ಜು. 26: ದಕ್ಷಿಣ ವಿಧಾನಸಭಾ ಕ್ಷೇತ್ರದ ರಾಜಾಪೂರ ವಾರ್ಡ್ ನಂ. 47ರಲ್ಲಿ ಒಟ್ಟು ₹90.02 ಲಕ್ಷ ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಅಲ್ಲಮಪ್ರಭು ಪಾಟೀಲ್ ಭಾನುವಾರ ಭೂಮಿಪೂಜೆ ನೆರವೇರಿಸಿ ಚಾಲನೆ ನೀಡಿದರು.
2025-26ನೇ ಸಾಲಿನ ಕೆ.ಕೆ.ಆರ್.ಡಿಬಿ ಯೋಜನೆಯಡಿ ₹20.02 ಲಕ್ಷ ವೆಚ್ಚದಲ್ಲಿ ಗ್ರಂಥಾಲಯ ನಿರ್ಮಾಣ ಕಾಮಗಾರಿ, ಮುಖ್ಯಮಂತ್ರಿಗಳ ಮೂಲಸೌಕರ್ಯ ಅಭಿವೃದ್ಧಿ ಯೋಜನೆಯಡಿ ₹45 ಲಕ್ಷ ವೆಚ್ಚದಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಸಮುದಾಯ ಭವನ ನಿರ್ಮಾಣ ಹಾಗೂ ₹25 ಲಕ್ಷ ವೆಚ್ಚದಲ್ಲಿ 12 ಜ್ಯೋತಿರ್ಲಿಂಗ ದೇವಸ್ಥಾನದ ಸಮೀಪ ಸಮುದಾಯ ಭವನ ನಿರ್ಮಾಣ ಕಾಮಗಾರಿಗಳಿಗೆ ಚಾಲನೆ ನೀಡಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಅಲ್ಲಮಪ್ರಭು ಪಾಟೀಲ್, ರಾಜಾಪೂರ ವಾರ್ಡ್ನ ಸಮಗ್ರ ಅಭಿವೃದ್ಧಿಗೆ ರಾಜ್ಯ ಸರ್ಕಾರ ವಿಶೇಷ ಆದ್ಯತೆ ನೀಡಿದ್ದು, ಸಾರ್ವಜನಿಕರ ಅಗತ್ಯಗಳಿಗೆ ಅನುಗುಣವಾಗಿ ಮೂಲಸೌಕರ್ಯಗಳನ್ನು ಬಲಪಡಿಸುವ ಕಾರ್ಯ ನಿರಂತರವಾಗಿ ನಡೆಯುತ್ತಿದೆ ಎಂದು ಹೇಳಿದರು.
ಸಮುದಾಯ ಭವನಗಳು, ಗ್ರಂಥಾಲಯ ಸೇರಿದಂತೆ ಜನೋಪಯೋಗಿ ಕಾಮಗಾರಿಗಳನ್ನು ಹಂತ ಹಂತವಾಗಿ ಕೈಗೆತ್ತಿಕೊಳ್ಳಲಾಗುತ್ತಿದ್ದು, ಎಲ್ಲ ಕಾಮಗಾರಿಗಳನ್ನು ಗುಣಮಟ್ಟದೊಂದಿಗೆ ನಿಗದಿತ ಅವಧಿಯೊಳಗೆ ಪೂರ್ಣಗೊಳಿಸಿ ಸಾರ್ವಜನಿಕರ ಬಳಕೆಗೆ ಸಮರ್ಪಿಸಲಾಗುವುದು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಮುಖಂಡ ಲಿಂಗರಾಜ್ ಕಣ್ಣಿ, ಸಿದ್ದಾರ್ಥ ಟ್ರಸ್ಟ್ ಅಧ್ಯಕ್ಷ ಭೀಮರಾವ್ ತೇಗಲತಿಪ್ಪಿ, ಪ್ರಧಾನ ಕಾರ್ಯದರ್ಶಿ ಮಹಾಂತಪ್ಪ ಸಂಗವಿ, ಮಾಜಿ ಮೇಯರ್ ರವೀಂದ್ರನಾಥ್ ಹೊನ್ನಳ್ಳಿ, ಸುರೇಶ್ ಜಾಧವ್, ಚಂದ್ರಶೇಖರ ಹಾವೇರಿ, ಶಿವಲಿಂಗಪ್ಪ ಜಕ್ನಳ್ಳಿ, ಸಿದ್ದು ಹಿರೇಮಠ, ರಾಹುಲ್ ಹೊನ್ನಳ್ಳಿ, ಸೂರ್ಯಕಾಂತ ನಿಲೂರ್, ಮಲ್ಲಿಕಾರ್ಜುನ ಕನ್ವರಕರ್, ಕಿರಣ್ ವಾಲೀಕರ್, ಪ್ರಶಾಂತ್ ಕಾಂತಿ ಸೇರಿದಂತೆ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಹಾಗೂ ವಾರ್ಡ್ನ ಸಾರ್ವಜನಿಕರು ಉಪಸ್ಥಿತರಿದ್ದರು.


