ರೈತರ ಮನವಿಗೆ ಅವಕಾಶ ಕೊಡಿ ಇಲ್ಲದಿದ್ದರೆ ಮುಖ್ಯಮಂತ್ರಿ ಬರುವ ಮಾರ್ಗ ತಡೆದುಪ್ರತಿಭಟನೆ
ಅತಿವೃಷ್ಟಿಯಿಂದ ತತ್ತರಿಸಿದ ರೈತರಿಗೆ ಪರಿಹಾರ–ಬೆಂಬಲ ಬೆಲೆ ಆಗ್ರಹ

ಕಲಬುರಗಿ:ಸತತ ಅತಿವೃಷ್ಟಿಯಿಂದ ಕಲಬುರಗಿ ಭಾಗದ ರೈತರು ಸಂಪೂರ್ಣ ಬೆಳೆ ನಷ್ಟ ಅನುಭವಿಸಿ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಜಿಲ್ಲೆಯು ತೊಗರಿಯ ಕಣಜವೆಂದು ಹೆಸರು ಪಡೆದಿದ್ದರೂ, ಈ ವರ್ಷದ ಭಾರೀ ಮಳೆಯಿಂದ ತೊಗರಿ ಬೆಳೆ ಸಂಪೂರ್ಣ ಹಾಳಾಗಿದ್ದು, ಇಳುವರಿ ಇಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಹಿನ್ನೆಲೆಯಲ್ಲಿ ಸರ್ಕಾರವು ತೊಗರಿಗೆ ಪ್ರತಿ ಕ್ವಿಂಟಾಲ್‌ಗೆ ₹15,000 ಬೆಂಬಲ ಬೆಲೆ ಘೋಷಿಸಿ ರೈತರನ್ನು ಉಳಿಸಬೇಕೆಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಕಲಬುರಗಿ ಜಿಲ್ಲಾ ಅಧ್ಯಕ್ಷರಾದ ಪ್ರಶಾಂತಗೌಡ ಮಾಲಿಪಾಟೀಲ್ ಆಗ್ರಹಿಸಿದ್ದಾರೆ.
ಅವರು ಮಾತನಾಡಿ, ರೈತರಿಗೆ ಇನ್ನೂ ಬಾಕಿಯಿರುವ ಬೆಳೆ ಹಾನಿ ಪರಿಹಾರ ಧನವನ್ನು ತಕ್ಷಣ ಬಿಡುಗಡೆ ಮಾಡಬೇಕು, ಈ ವರ್ಷದ ಬೆಳೆ ವಿಮೆ ಮೊತ್ತವನ್ನು ಶೀಘ್ರ ಜಮಾ ಮಾಡಬೇಕು ಎಂದು ಒತ್ತಾಯಿಸಿದರು. ಜೊತೆಗೆ ಜಿಲ್ಲೆಯಲ್ಲಿ ಘೋಷಣೆಗೊಂಡಿರುವ ಹೊಸ ತಾಲೂಕುಗಳಲ್ಲಿ ಮೂಲಭೂತ ಕಚೇರಿಗಳ ಸ್ಥಾಪನೆ ಮತ್ತು ಅಭಿವೃದ್ಧಿ ಕಾಮಗಾರಿಗಳನ್ನು ತಕ್ಷಣ ಆರಂಭಿಸಬೇಕು, ಹಾಗೂ ಮಲ್ಲಾಬಾದ್ ಏತ್ ನೀರಾವರಿ ಯೋಜನೆಯ ಕಾಮಗಾರಿಯನ್ನು ಕೂಡಲೇ ಆರಂಭಿಸಬೇಕು ಎಂದು ಸರ್ಕಾರವನ್ನು ಆಗ್ರಹಿಸಿದರು.
ಈ ಎಲ್ಲಾ ಬೇಡಿಕೆಗಳ ಕುರಿತು ಜನವರಿ 12ರಂದು ಕಲಬುರಗಿಗೆ ಆಗಮಿಸುವ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲು ಅವಕಾಶ ನೀಡಬೇಕು, ಇಲ್ಲವಾದಲ್ಲಿ ಮುಖ್ಯಮಂತ್ರಿಗಳು ಸಾಗುವ ಮಾರ್ಗವನ್ನು ಅಡ್ಡಗಟ್ಟಿ ರಸ್ತೆ ತಡೆ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಅವರು ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಜೇವರ್ಗಿ ತಾಲೂಕು ಅಧ್ಯಕ್ಷ ಪಂಚಯ್ಯ ಹಿರೇಮಠ (ಯಡ್ರಾಮಿ), ಮಲ್ಲಿಕಾರ್ಜುನ್, ಶಂಕರಯ್ಯ, ಸುಬೆದಾರ್ (ಚಿತ್ತಾಪುರ), ಮೌನೇಶ್ (ಅಫಜಲಪುರ), ಸದಾಶಿವ (ಆಳಂದ), ಶರಣು (ಶಾಹಾಬಾದ್), ಸಂಗೀತ ವಾಲಿ, ಯಲ್ಲಾಲಿಂಗ ಸೇರಿದಂತೆ ಇತರ ರೈತ ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.



