ಜಿಲ್ಲಾಸುದ್ದಿಯಾದಗಿರಿ

ಎಸ್.ಸಿ ಎಸ್.ಟಿ ಸಮುದಾಯಕ್ಕೆ ಅನುಗುಣವಾಗಿ 24.1% ಅನುದಾನ ನೀಡಬೇಕು – ದಲಿತ ಸಂಘರ್ಷ ಸಮಿತಿ ಆಗ್ರಹ

ಯಾದಗಿರಿ: ರಾಜ್ಯ ಸರ್ಕಾರವು 2026–27ನೇ ಸಾಲಿನ ಆಯವ್ಯಯ ಮಂಡಿಸಲು ಸಿದ್ಧತೆ ನಡೆಸುತ್ತಿರುವ ಸಂದರ್ಭದಲ್ಲಿ ಎಸ್.ಸಿ/ಎಸ್.ಟಿ ಸಮುದಾಯಗಳ ಸರ್ವತೋಮುಖ ಅಭಿವೃದ್ಧಿಗೆ ಜನಸಂಖ್ಯೆಗೆ ಅನುಗುಣವಾಗಿ ನ್ಯಾಯಯುತವಾದ ಪಾಲನ್ನು ನೀಡಬೇಕು ಎಂದು ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ (ಲಕ್ಷೀನಾರಾಯಣ ನಾಗವಾರ ಬಣ) ಜಿಲ್ಲಾ ಸಂಚಾಲಕ ಗೋಪಾಲ ತಳವಾರ ವಜ್ಜಲ್ ಆಗ್ರಹಿಸಿದರು.

ಈ ಕುರಿತು ಯಾದಗಿರಿ ಜಿಲ್ಲಾ ಅಧಿಕಾರಿಗಳ ಮೂಲಕ ಕರ್ನಾಟಕದ ಮಾನ್ಯ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿ ಮಾತನಾಡಿದ ಅವರು, ಕಳೆದ ಹಲವು ವರ್ಷಗಳಿಂದ ದಲಿತ ಸಮುದಾಯದ ಅಭಿವೃದ್ಧಿಗೆ ಮೀಸಲಿಟ್ಟ ಹಣವನ್ನು ಬೇರೆ ಯೋಜನೆಗಳಿಗೆ ಬಳಸುತ್ತಿರುವುದು ಹಾಗೂ ಸಂಪೂರ್ಣ ಅನುದಾನ ನೀಡದಿರುವುದು ಕಾಣಿಸುತ್ತಿದೆ. ಈ ಅನ್ಯಾಯವನ್ನು ತಡೆಯಲು ಮತ್ತು ನಮ್ಮ ಹಕ್ಕನ್ನು ಪಡೆಯಲು ಸಮುದಾಯದವರು ಒಗ್ಗೂಡಿ ಧ್ವನಿ ಎತ್ತಬೇಕಾಗಿದೆ ಎಂದು ಹೇಳಿದರು.

ಕಲಬುರಗಿ ವಿಭಾಗದ ಸಂಘಟನೆ ಸಂಚಾಲಕರಾದ ಹೊನ್ನಪ್ಪ ರಸ್ತಾಪುರ ಮಾತನಾಡಿ, 2026–27ನೇ ಸಾಲಿನ ಬಜೆಟ್‌ನಲ್ಲಿ ಎಸ್.ಸಿ/ಎಸ್.ಟಿ ಸಮುದಾಯಕ್ಕೆ ಜನಸಂಖ್ಯೆಯ ಆಧಾರದ ಮೇಲೆ ಶೇ.24.1 ಅನುದಾನವನ್ನು ಕಟ್ಟುನಿಟ್ಟಾಗಿ ಮೀಸಲಿಡಬೇಕು. ಮೀಸಲಿಟ್ಟ ಹಣವನ್ನು ಅದೇ ಸಮುದಾಯದ ಅಭಿವೃದ್ಧಿಗೆ ಮಾತ್ರ ಬಳಸಬೇಕು, ಇತರ ಯೋಜನೆಗಳಿಗೆ ವರ್ಗಾಯಿಸಬಾರದು ಎಂದು ಒತ್ತಾಯಿಸಿದರು.

ಹಿಂದಿನ ವರ್ಷಗಳಲ್ಲಿ ಬಳಕೆಯಾಗದೆ ಉಳಿದಿರುವ ವಿಶೇಷ ಘಟಕ ಯೋಜನೆಯ ಹಣವನ್ನು ಕೂಡಲೇ ಬಿಡುಗಡೆ ಮಾಡಬೇಕು. ವಿದ್ಯಾರ್ಥಿಗಳಿಗೆ ಸ್ಕಾಲರ್‌ಶಿಪ್ ಹಾಗೂ ವಸತಿ ನಿಲಯಗಳ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಬೇಕು. “ನಮ್ಮ ಪಾಲು ನಮ್ಮ ಹಕ್ಕು – ಹೋರಾಟವೇ ನಮ್ಮ ಹಾದಿ” ಎಂಬ ಘೋಷಣೆಯೊಂದಿಗೆ ಸಮುದಾಯದ ಹಕ್ಕುಗಳಿಗಾಗಿ ಹೋರಾಟ ಮುಂದುವರಿಯಲಿದೆ ಎಂದು ಹೇಳಿದರು.

ಪ್ರತಿ ಗ್ರಾಮದಲ್ಲಿ ದಲಿತರಿಗೆ ಸ್ಮಶಾನ ಭೂಮಿಯನ್ನು ಕಡ್ಡಾಯವಾಗಿ ಮೀಸಲಿಡಬೇಕು. ಎಸ್.ಸಿ/ಎಸ್.ಟಿ ಮೀಸಲಾತಿಗೆ ನಿಗದಿಪಡಿಸಿರುವ ಆದಾಯ ಮಿತಿಯನ್ನು 15 ಲಕ್ಷ ರೂ.ಗಳಿಗೆ ಏರಿಸಬೇಕು. ಅರ್ಚಕ ಮತ್ತು ಪೌರಕಾರ್ಮಿಕ ವೃತ್ತಿಗಳನ್ನು ಸಾರ್ವತ್ರಿಕಗೊಳಿಸಿ, ಈ ಕ್ಷೇತ್ರಗಳಲ್ಲಿ ಮೀಸಲಾತಿ ನೀತಿಯನ್ನು ಜಾರಿಗೆ ತರಬೇಕು. ಹಂಗಾಮಿ ಪೌರಕಾರ್ಮಿಕರನ್ನು ಖಾಯಂಗೊಳಿಸಬೇಕು ಹಾಗೂ ಖಾಸಗಿ ಕ್ಷೇತ್ರಗಳಲ್ಲೂ ಸಾಮಾಜಿಕ ನ್ಯಾಯದ ಹಿನ್ನೆಲೆಯ ಮೀಸಲಾತಿಯನ್ನು ಜಾರಿಗೊಳಿಸಬೇಕು ಎಂದು ಅವರು ಆಗ್ರಹಿಸಿದರು.

ಈ ವೇಳೆ ಜಿಲ್ಲಾ ಸಂಘಟನೆ ಸಂಚಾಲಕರಾದ ಶಿವಶರಣ ಯಾಳಗಿ, ಶರಣಪ್ಪ ಅನವಾರ, ಸಿದ್ದಣ್ಣ ಬೇವಿನಹಳ್ಳಿ, ಹಣಮಂತ ಭದ್ರಾವತಿ, ಸಿದ್ದರಾಮ ಬಾರಿಗಿಡ, ಗುರುಪುತ್ರ ಮೂದನೂರ್, ಶರಣಪ್ಪ ಮದ್ರಕಿ, ಶಿವಪ್ಪ ಕಂಬಾರ, ಪರಶುರಾಮ್ ಮೂದನೂರ್, ಮರೆಪ್ಪ ಮಲ್ಲಾ, ಬಸವರಾಜ ವಜ್ಜಲ್, ಜಗದೀಶ್ ಶಾಖಾನವರು, ಮಂಜುನಾಥ ಮಲ್ಲಾ, ರಾಯಪ್ಪ ಯತ್ನಾಳ್, ಅಂಬಿರೀಶ್ ಬೊಮ್ಮನಹಳ್ಳಿ, ಹಣಮಂತ ಬೊಮ್ಮನಹಳ್ಳಿ, ಖಂಡಪ್ಪ ಯಾಳಗಿ, ಸಿದ್ದು ಕರೆಡಕಲ್ಲ, ಸಂಗಣ್ಣ ಮಲ್ಲಾ, ಶಿವಶರಣ ಸಂದಿಮನಿ, ಶಿವು ಗುಳಬಾಳ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

Related Articles

Leave a Reply

Your email address will not be published. Required fields are marked *

Back to top button