“ಸಂವಿಧಾನ ಜಾಗೃತಿ ಮೆರವಣಿಗೆಗೆ ಸಜ್ಜಾಗೋಣ” – ದಲಿತ ಪ್ಯಾಂಥರ್ ಕರೆ
ಸಂವಿಧಾನ ಹಿಡಿದು ದಲಿತ ಪ್ಯಾಂಥರ್ ಪಥಸಂಚನ

ಚಿತ್ತಾಪುರ: ಪಟ್ಟಣದಲ್ಲಿ ಮುಂದಿನ ದಿನಗಳಲ್ಲಿ ಕೈಗೊಳ್ಳುವ ಆರ್ ಎಸ್ ಎಸ್ ಪಥಸಂಚಲಕ್ಕೆ ಪ್ರತಿಯಾಗಿ ದಲಿತ ಪ್ಯಾಂಥರ್ ನೀಲಿ ಶಾಲು ಹಾಕಿ ಸಂವಿಧಾನ ಜಾಥಾಕ್ಕೆ ಸಿದ್ಧವಿದೆ ಎಂದು ಭಾರತೀಯ ದಲಿತ ಪ್ಯಾಂಥರ್ ಸಂಘಟನೆ ರಾಜ್ಯಾಧ್ಯಕ್ಷ ಮಲ್ಲಪ್ಪ ಹೊಸಮನಿ ತಿಳಿಸಿದ್ದಾರೆ.
ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಂವಿಧಾನ ವಿರೋಧಿ ಚಟುವಟಿಕೆಗಳನ್ನು ಖಂಡಿಸಲು ಈ ತೀರ್ಮಾನ ಕೈಗೊಳ್ಳಲಾಗಿದೆ. ಸಂಘದ ನೊಂದಣಿ ಮಾಡಿಸಿದೆ ಗುಪ್ತವಾಗಿ ನೂರು ವರ್ಷಗಳಿಂದ ಚಟುವಟಿಕೆಗಳನ್ನು ಮಾಡಿಕೊಂಡು ಬರುತ್ತಿರುವ ರಾಷ್ಟ್ರೀಯ ಸ್ವಯಂ ಸೇವಕ ಸಂಘ ರಾಷ್ಟ್ರ ಧ್ವಜ, ರಾಷ್ಟ್ರ ಗೀತೆಯನ್ನು ತಿರಸ್ಕಾರ ಭಾವದಿಂದ ಕಾಣುತ್ತಲೇ ಬಂದಿದೆ. ಸಂವಿಧಾನ ಬದಲಿಸಿ ಹಿಂದೂ ರಾಷ್ಟ್ರ ನಿರ್ಮಾಣದ ಗುರಿ ಹೊತ್ತಿರುವ ಆರ್ ಎಸ್ ಎಸ್ ಗೆ ಜಾತ್ಯತೀತ ತತ್ವಗಳ ಬಗ್ಗೆ ತಾತ್ಸಾರ ಭಾವ ಹೊಂದಿರುವುದು ಸ್ಪಷ್ಟವಾಗಿದೆ. ಇಂಥಹ ಕೋಮುವಾದಿ ಸಂಘದ ಪಥಸಂಚಲನ ಯುವಜನರಲ್ಲಿ ವಿಷಕಾರಿ ಚಿಂತನೆಗಳನ್ನು ಬಿತ್ತುವ ಆತಂಕವಿದೆ ಎಂದಿದ್ದಾರೆ.
ಆದ್ದರಿಂದ, ಚಿತ್ತಾಪುರ ಪಟ್ಟಣದಲ್ಲಿ ಯಾವ ದಿನ ಆರೆಸ್ಸೆಸ್ ಪಥಸಂಚಲನ ನಡೆಸಲು ಮುಂದಾಗುತ್ತದೋ ಅದೇ ದಿನ ದಲಿತ ಪ್ಯಾಂಥರ್ ಸಾವಿರಾರು ಜನ ಕಾರ್ಯಕರ್ತರು ನೀಲಿ ಶಾಲು ಧರಿಸುವ ಜೊತೆಗೆ ಒಂದು ಕೈಯಲ್ಲಿ ಸಂವಿಧಾನ ಮತ್ತೊಂದು ಕೈಯಲ್ಲಿ ಲಾಠಿ ಹಿಡಿದು ಪಥಸಂಚಲನ ನಡೆಸಲಿದ್ದಾರೆ. ಇದಕ್ಕಾಗಿ ಅಧಿಕೃತವಾಗಿ ಪರವಾನಿಗೆ ಪಡೆದು ಕಾರ್ಯಕ್ರಮ ಆಯೋಜನೆ ಮಾಡುತ್ತೇವೆ. ಅವಕಾಶ ನೀಡದಿದ್ದರೆ ಕೋರ್ಟ್ ಮೊರೆ ಹೋಗಲು ಹಿಂಜರಿಯುವುದಿಲ್ಲ. ಒಟ್ಟಾರೆ ಸಂವಿಧಾನ ವಿರೋಧಿಗಳ ವಿರುದ್ಧ ಸಂವಿಧಾನ ಜಾಗೃತಿ ನಡೆಸಲು ನಾವು ಸದಾ ಸಿದ್ಧರಿದ್ದೇವೆ ಎಂದು ಹೊಸಮನಿ ಪ್ರತಿಕ್ರಿಯಿಸಿದರು.