ರಾಜ್ಯ

ಹೊಸಕೋಟೆ ಬಳಿ ಭೀಕರ ಸರಣಿ ಅಪಘಾತ: ಅತಿವೇಗದ ಜಾಲಿ ರೈಡ್ 7 ಜೀವ ಬಲಿ

ಬೆಂಗಳೂರು, ಫೆ.13: ಅತಿವೇಗದಲ್ಲಿ ಕಾರು ಚಲಾಯಿಸಿದ ಪರಿಣಾಮ ಭೀಕರ ಸರಣಿ ಅಪಘಾತ ಸಂಭವಿಸಿ 7 ಮಂದಿ ಸಾವನ್ನಪ್ಪಿದ ದುರ್ಘಟನೆ ಬೆಂಗಳೂರಿನ ಹೊರವಲಯದ ಹೊಸಕೋಟೆ ತಾಲೂಕಿನ ಎಂ. ಸತ್ಯವರ ಗ್ರಾಮದ ಬಳಿ ಇಂದು ಮುಂಜಾನೆ ನಡೆದಿದೆ.

ಎಕ್ಸ್‌ಯುವಿ 700 ಕಾರಿನಲ್ಲಿ ನಗರದ ಕಾಲೇಜೊಂದರ ಆರು ಮಂದಿ ಪಿಯುಸಿ ವಿದ್ಯಾರ್ಥಿಗಳು ಮುಂಜಾನೆ 4 ಗಂಟೆ ಸುಮಾರಿಗೆ ಲಾಂಗ್ ಡ್ರೈವ್‌ಗೆ ತೆರಳಿದ್ದರು. ವೇಗವಾಗಿ ಚಲಿಸುತ್ತಿದ್ದ ಕಾರು ಮೊದಲು ಗಗನ್ (26) ಎಂಬುವರ ಬೈಕ್‌ಗೆ ಡಿಕ್ಕಿ ಹೊಡೆದಿದೆ. ಬಳಿಕ ನಿಯಂತ್ರಣ ಕಳೆದುಕೊಂಡ ಕಾರು ಡಿವೈಡರ್ ದಾಟಿ ಎದುರಿನಿಂದ ಬರುತ್ತಿದ್ದ ಕ್ಯಾಂಟರ್‌ಗೆ ಮುಖಾಮುಖಿ ಡಿಕ್ಕಿಯಾಗಿದೆ.

ಡಿಕ್ಕಿಯ ತೀವ್ರತೆ ಎಷ್ಟಿತ್ತೆಂದರೆ ಕಾರಿನಲ್ಲಿದ್ದ ಎಲ್ಲಾ ಏರ್‌ಬ್ಯಾಗ್‌ಗಳು ತೆರೆದುಕೊಂಡಿದ್ದರೂ, ಅಪಘಾತದ ಭಾರೀ ರಭಸಕ್ಕೆ ಪ್ರಾಣ ಉಳಿಸಲು ಸಾಧ್ಯವಾಗಲಿಲ್ಲ. ಕೆಲಸ ಮುಗಿಸಿ ಮನೆಗೆ ಮರಳುತ್ತಿದ್ದ ಗಗನ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ದೃಷ್ಟಿಹೀನ ತಾಯಿಗೆ ಏಕೈಕ ಆಧಾರವಾಗಿದ್ದ ಅವರು ಸಫಲ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು.

ಮೃತರಲ್ಲಿ ಅಶ್ವಿನ್ ನಾಯರ್ (17) ಯಲಹಂಕದ ಆರ್.ವಿ. ಪಿಯು ಕಾಲೇಜಿನ ವಿದ್ಯಾರ್ಥಿಯಾಗಿದ್ದರೆ, ಉಳಿದ ಐವರೂ ಅದೇ ಕಾಲೇಜಿನ ವಿದ್ಯಾರ್ಥಿಗಳಾಗಿದ್ದಾರೆ. ಅರ್ಹನ್, ಅಯನ್ ಆಲಿ ಹಾಗೂ ಭರತ್ ಎಂದು ಮೂವರನ್ನು ಗುರುತಿಸಲಾಗಿದ್ದು, ಇನ್ನಿಬ್ಬರ ಹೆಸರು ತಿಳಿದುಬಂದಿಲ್ಲ.

ಅಶ್ವಿನ್ ನಾಯರ್ ಸ್ನೇಹಿತರೊಂದಿಗೆ ಮನೆವರಿಗೆ ತಿಳಿಸದೆ ಹೊರಟಿದ್ದರೆಂದು ತಿಳಿದುಬಂದಿದೆ. ಮಗ ಮನೆಯಲ್ಲೇ ಮಲಗಿದ್ದಾನೆ ಎಂದು ಭಾವಿಸಿದ್ದ ತಾಯಿಗೆ ಪೊಲೀಸರ ಕರೆ ಮೂಲಕ ವಿಷಯ ತಿಳಿದು ಶೋಕಕ್ಕೊಳಗಾದರು.

ಅಪಘಾತದ ಪರಿಣಾಮ ಕ್ಯಾಂಟರ್ ಪಲ್ಟಿಯಾಗಿದ್ದು, ಅದರ ಚಕ್ರಕ್ಕೆ ಮತ್ತೊಂದು ಬ್ರಿಜಾ ಕಾರು ಡಿಕ್ಕಿಯಾಗಿದೆ. ಹೆದ್ದಾರಿ ಕೆಲಕಾಲ ರಣರಂಗದಂತಾಗಿತ್ತು. ಕ್ಯಾಂಟರ್‌ನ ಹಿಂದಿನ ಎರಡು ಚಕ್ರಗಳು ಬೇರ್ಪಟ್ಟಿದ್ದವು.

ಘಟನಾ ಸ್ಥಳಕ್ಕೆ ಕೇಂದ್ರ ವಲಯ ಐಜಿಪಿ ಲಾಬುರಾಮ್ ಹಾಗೂ ಎಸ್‌ಪಿ ಚಂದ್ರಕಾಂತ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಪ್ರಾಥಮಿಕ ಮಾಹಿತಿಯ ಪ್ರಕಾರ ಅತಿವೇಗವೇ ಅಪಘಾತಕ್ಕೆ ಪ್ರಮುಖ ಕಾರಣವೆಂದು ತಿಳಿದುಬಂದಿದೆ. ಮೃತದೇಹಗಳನ್ನು ಹೊಸಕೋಟೆ ಸರ್ಕಾರಿ ಆಸ್ಪತ್ರೆಗೆ ಸಾಗಿಸಲಾಗಿದ್ದು, ಕುಟುಂಬಸ್ಥರ ಆಕ್ರಂದನ ಮನಕಲುಕುವಂತಿತ್ತು.

Related Articles

Leave a Reply

Your email address will not be published. Required fields are marked *

Back to top button