ನಕಲಿ ವೃದ್ಧಾಶ್ರಮದ ಹೆಸರಲ್ಲಿ ₹30 ಲಕ್ಷ ಅನುದಾನ ದುರುಪಯೋಗ ಆರೋಪ

ಕಲಬುರಗಿ: “ವಿಜಯಲಕ್ಷ್ಮಿ ವೃದ್ಧಾಶ್ರಮ” ಹೆಸರಿನಲ್ಲಿ ನಕಲಿ ದಾಖಲೆಗಳನ್ನು ಸೃಷ್ಟಿಸಿ ಸುಮಾರು ₹30 ಲಕ್ಷ ಅನುದಾನವನ್ನು ಅಕ್ರಮವಾಗಿ ಪಡೆದಿರುವ ಆರೋಪದ ಹಿನ್ನೆಲೆಯಲ್ಲಿ, ಕಲಬುರಗಿ ದಕ್ಷಿಣ ಮತಕ್ಷೇತ್ರದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಲಿಂಗರಾಜ್ ತಾರ್ಫೈಲ್ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ನವ ಕರ್ನಾಟಕ ಎಂಆರ್ಡಬ್ಲ್ಯೂ, ವಿಆರ್ಡಬ್ಲ್ಯೂ, ಯುಆರ್ಡಬ್ಲ್ಯೂ ಹಾಗೂ ವಿಕಲಚೇತನರ ಗೌರವಧನ ಕಾರ್ಯಕರ್ತರ ಸಂಘದ ಸಂಸ್ಥಾಪಕ ಅಧ್ಯಕ್ಷ ಅಂಬಾಜಿ ಮೇಟಿ ಆಗ್ರಹಿಸಿದರು.
ನಗರದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಪ್ರಕರಣವು ಕೇವಲ ಆರ್ಥಿಕ ಅಕ್ರಮವಷ್ಟೇ ಅಲ್ಲದೆ, ಹಿರಿಯ ನಾಗರಿಕರ ಕಲ್ಯಾಣ ಯೋಜನೆಗಳ ದುರುಪಯೋಗದ ಗಂಭೀರ ಉದಾಹರಣೆಯಾಗಿದೆ ಎಂದು ಹೇಳಿದರು.
ಲಿಂಗರಾಜ್ ತಾರ್ಫೈಲ್ ಅವರ ಪತ್ನಿಯ ಹೆಸರಿನಲ್ಲಿ “ವಿಜಯಲಕ್ಷ್ಮಿ ಗ್ರಾಮೀಣ ಅಭಿವೃದ್ಧಿ ಸ್ವಸಹಾಯ ಸಂಘ” ಅಡಿಯಲ್ಲಿ ಸೇಡಂ ಪಟ್ಟಣದ ಭವಾನಿ ನಗರದಲ್ಲಿ ವೃದ್ಧಾಶ್ರಮ ನಡೆಸುತ್ತಿರುವುದಾಗಿ ತೋರಿಸಿ, 2023-24 ಮತ್ತು 2024-25ನೇ ಸಾಲಿನಲ್ಲಿ ಒಟ್ಟು ₹30 ಲಕ್ಷ ಅನುದಾನವನ್ನು ಪಡೆದಿರುವುದಾಗಿ ಅವರು ಆರೋಪಿಸಿದರು.
ಖಾಲಿ ಕಟ್ಟಡ, ಬೋರ್ಡ್ ಮಾತ್ರ: ಸೂಚಿಸಿದ ವಿಳಾಸದಲ್ಲಿ ವೃದ್ಧಾಶ್ರಮ ಕಾರ್ಯನಿರ್ವಹಿಸುತ್ತಿಲ್ಲ. ಕೇವಲ ಕಟ್ಟಡಕ್ಕೆ ಬೋರ್ಡ್ ಹಾಕಿ ಸದಾ ಬೀಗ ಹಾಕಿರುವ ಸ್ಥಿತಿ ಕಂಡುಬಂದಿದ್ದು, ವೃದ್ಧರು ವಾಸಿಸುತ್ತಿರುವ ಯಾವುದೇ ಸಾಕ್ಷ್ಯ ದೊರೆತಿಲ್ಲ ಎಂದು ಮೇಟಿ ಹೇಳಿದರು.
ದಾಖಲೆಗಳಲ್ಲಿ ವ್ಯತ್ಯಾಸ: ಅಧಿಕಾರಿಗಳಿಗೆ ಸಲ್ಲಿಸಿದ ದಾಖಲೆಗಳಲ್ಲಿ ಕಟ್ಟಡದ ವಿಸ್ತೀರ್ಣವನ್ನು ತಪ್ಪಾಗಿ ಉಲ್ಲೇಖಿಸಿ ಸರ್ಕಾರವನ್ನು ದಾರಿ ತಪ್ಪಿಸಲಾಗಿದೆ. ವಾಸ್ತವಿಕ ಸ್ಥಿತಿಗಿಂತ ಹೆಚ್ಚಿನ ವಿಸ್ತೀರ್ಣ ತೋರಿಸಲಾಗಿದೆ ಎಂದು ಆರೋಪಿಸಿದರು.
ಜೀವ ಬೆದರಿಕೆ ಆರೋಪ: ಪ್ರಕರಣವನ್ನು ಬಹಿರಂಗ ಪಡಿಸಿದ ಹಿನ್ನೆಲೆಯಲ್ಲಿ ತಮಗೂ ಹಾಗೂ ತಮ್ಮ ತಾಯಿಗೂ ಜೀವ ಬೆದರಿಕೆ ಹಾಕಲಾಗಿದೆ ಎಂದು ಮೇಟಿ ಆರೋಪಿಸಿದರು.
ಈ ಕುರಿತು ಸ್ಟೇಷನ್ ಬಜಾರ್ ಪೊಲೀಸ್ ಠಾಣೆ ಹಾಗೂ ಪೊಲೀಸ್ ಆಯುಕ್ತರಿಗೆ ಲಿಖಿತ ದೂರು ಸಲ್ಲಿಸಲಾಗಿದೆ ಎಂದರು.ಇದಕ್ಕೂ ಮೊದಲು ನಕಲಿ ದೃಷ್ಟಿ ವಿಕಲಚೇತನ ಪ್ರಮಾಣಪತ್ರಗಳ ಮೂಲಕ ಕೆಪಿಎಸ್ಸಿ ನೇಮಕಾತಿಯಲ್ಲಿ ಅಕ್ರಮ ನಡೆದಿದೆ ಎಂಬ ವಿಷಯವನ್ನೂ ತಾವು ಬಯಲಿಗೆಳೆದಿರುವುದಾಗಿ ಹೇಳಿದರು.
ಕಾನೂನು ಕ್ರಮದ ಒತ್ತಾಯ: ಈ ಪ್ರಕರಣವು ಭಾರತೀಯ ದಂಡ ಸಂಹಿತೆಯ ಸೆಕ್ಷನ್ 420, 406, 468, 471 ಸೇರಿದಂತೆ ವಿವಿಧ ವಿಧಿಗಳ ಉಲ್ಲಂಘನೆಯಾಗಿದ್ದು, ತಕ್ಷಣ ಪ್ರಕರಣ ದಾಖಲಿಸಿ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು.
ಸ್ಥಳ ಪರಿಶೀಲನೆ ನಡೆಸುವುದು, ಲೀಸ್ ಒಪ್ಪಂದ ಹಾಗೂ ಲಾಭಾರ್ಥಿಗಳ ದಾಖಲೆಗಳನ್ನು ಪರಿಶೀಲಿಸುವುದು, ವೃದ್ಧರ ಹಾಜರಾತಿ ಮತ್ತು ಸೌಲಭ್ಯಗಳ ಪರಿಶೀಲನೆ, ವಿಡಿಯೋ ಹೇಳಿಕೆ ಸಂಗ್ರಹಣೆ, ಅಕ್ರಮ ದೃಢಪಟ್ಟರೆ ಅನುದಾನ ವಾಪಸ್ ವಸೂಲಿ ಮಾಡಿ ಸಂಬಂಧಿತವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಬೇಕು ಎಂದು ಅವರು ಆಗ್ರಹಿಸಿದರು.



