ಪಾಳು ಬಿದ್ದ ಮೊರಾರ್ಜಿ ದೇಸಾಯಿ ವಸತಿ ಶಾಲೆ! | ಕಳ್ಳರ ಅಡ್ಡೆಯಾಯಿತೇ ಸರ್ಕಾರಿ ಕಟ್ಟಡ?
ಮೋರಾರ್ಜಿ ಶಾಲೆ ದುರವಸ್ಥೆ ವಿರುದ್ಧ ಉಮೇಶ ಕೆ. ಮುದ್ನಾಳ ಆಕ್ರೋಶ

ತುರ್ತಾಗಿ ಸ್ಥಳಕ್ಕೆ ಜಿಲ್ಲಾ ಮಟ್ಟದ ಎಲ್ಲಾ ಅಧಿಕಾರಿಗಳು ಬೇಟಿ ನೀಡಿ ಪರಿಶೀಲಿಸಿ ತುರ್ತ ಕ್ರಮ ಕೈಗೊಂಡು ದುರಸ್ಥೆಗೆ ಮುಂದಾಗಬೇಕು. ವಸತಿ ನಿಲಯದಲ್ಲಿರುವ ಸಾಮಗ್ರಿಗಳನ್ನು ಕಳ್ಳತನ ಮಾಡಿದವರ ಮೇಲೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಅವರನ್ನು ಪತ್ತೆ ಮಾಡಿ ಅವರಿಂದ ಅಂದಾಜು ಹಣವನ್ನು ಸರ್ಕಾರದ ಬೊಕ್ಕಸಕ್ಕೆ ತುಂಬಿಸಿಕೊಳ್ಳಬೇಕು ಅಂದಾಗ ಮಾತ್ರ ಇಂತ ಘಟನೆ ಮರು ಕಳಿಸುವುದಿಲ್ಲವೆಂದು ತಿಳಿಸಿದ್ದಾರೆ- ಸಾಮಾಜಿಕ ಹೋರಾಟಗಾರ ಉಮೇಶ ಕೆ. ಮುದ್ನಾಳ್
ಯಾದಗಿರಿ: ತಾಲೂಕಿನ ಹತ್ತಿಕುಣಿ ಹೋಬಳಿಯ ಮೋಟನಹಳ್ಳಿ ಹೊರವಲಯದಲ್ಲಿ ನಿರ್ಮಿಸಿರುವ ಮೊರಾರ್ಜಿ ದೇಸಾಯಿ ವಸತಿ ಶಾಲೆ ಇದೀಗ ಪುಂಡರು, ಕುಡುಕರು ಹಾಗೂ ಅನೈತಿಕ ಚಟುವಟಿಕೆಗಳ ತಾಣವಾಗಿ ಮಾರ್ಪಟ್ಟಿದೆ ಎಂದು ಸಾಮಾಜಿಕ ಹೋರಾಟಗಾರ ಉಮೇಶ್ ಕೆ. ಮುದ್ನಾಳ್ ಆರೋಪಿಸಿದರು.
ಸ್ಥಳಕ್ಕೆ ಭೇಟಿ ನೀಡಿ ಶಾಲೆಯ ವಿವಿಧ ಕೊಠಡಿಗಳನ್ನು ಪರಿಶೀಲಿಸಿದ ಬಳಿಕ ಮಾತನಾಡಿದ ಅವರು, ಶಾಲೆ ಸಂಪೂರ್ಣವಾಗಿ ನಿರ್ಲಕ್ಷ್ಯಕ್ಕೊಳಗಾಗಿದ್ದು, ಕಟ್ಟಡದ ಒಳಭಾಗದಲ್ಲಿದ್ದ ಫ್ಯಾನ್, ಲೈಟ್, ಬಟನ್, ಕಿಟಕಿ, ಬಾಗಿಲು, ಮುಖ್ಯ ಗೇಟ್, ನೀರಿನ ಮೋಟರ್ ಸೇರಿದಂತೆ ಅನೇಕ ವಸ್ತುಗಳನ್ನು ಕಿಡಿಗೇಡಿಗಳು ಕಳವು ಮಾಡಿದ್ದಾರೆ. ಇಷ್ಟಾದರೂ ಸಂಬಂಧಪಟ್ಟ ಅಧಿಕಾರಿಗಳು ಮೇಲಧಿಕಾರಿಗಳಿಗೆ ಅಥವಾ ಪೊಲೀಸ್ ಠಾಣೆಗೆ ಯಾವುದೇ ದೂರು ನೀಡದಿರುವುದು ಅತ್ಯಂತ ದುಃಖಕರ ಮತ್ತು ಅನುಮಾನಾಸ್ಪದ ಸಂಗತಿಯಾಗಿದೆ ಎಂದು ಆರೋಪಿಸಿದರು.
ಪ್ರಸ್ತುತ ಈ ವಸತಿ ಶಾಲೆಯಲ್ಲಿ ಸುಮಾರು 250ಕ್ಕೂ ಹೆಚ್ಚು ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದು, ಸಮರ್ಪಕ ಮೂಲಭೂತ ಸೌಲಭ್ಯಗಳ ಕೊರತೆಯಿಂದ ಶಿಕ್ಷಣದ ಗುಣಮಟ್ಟದ ಮೇಲೂ ಪರಿಣಾಮ ಬೀರುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ಶಾಲೆಯನ್ನು 2009ರ ಆಗಸ್ಟ್ 15ರಂದು ಆರಂಭಿಸಲಾಗಿದ್ದು, ಕಟ್ಟಡ ನಿರ್ಮಾಣಕ್ಕೆ ಸುಮಾರು ₹2 ಕೋಟಿ 95 ಲಕ್ಷ ವೆಚ್ಚ ಮಾಡಲಾಗಿತ್ತು. ಆದರೆ ಕಟ್ಟಡ ಜೀರ್ಣಾವಸ್ಥೆಗೆ ತಲುಪಿದ ಹಿನ್ನೆಲೆ ರಿಪೇರಿ ಉದ್ದೇಶದಿಂದ ವಿದ್ಯಾರ್ಥಿಗಳನ್ನು ಬಂದಳ್ಳಿ ಗ್ರಾಮದ ವಸತಿ ನಿಲಯಕ್ಕೆ ತಾತ್ಕಾಲಿಕವಾಗಿ ಸ್ಥಳಾಂತರಿಸಲಾಗಿತ್ತು ಎಂದು ತಿಳಿಸಿದರು.
2021ರ ನವೆಂಬರ್ ತಿಂಗಳಲ್ಲಿ ವಿದ್ಯಾರ್ಥಿಗಳನ್ನು ಸ್ಥಳಾಂತರಿಸಿದ ನಂತರದಿಂದ ಇಂದಿನವರೆಗೆ ಯಾವುದೇ ರಿಪೇರಿ ಕಾಮಗಾರಿ ಆರಂಭವಾಗಿಲ್ಲ. ಸರ್ಕಾರ ಎರಡು ವರ್ಷಗಳ ಹಿಂದೆಯೇ ಶಾಲೆ ಅಭಿವೃದ್ಧಿಗಾಗಿ ಸುಮಾರು ₹2 ಕೋಟಿ 90 ಲಕ್ಷ ಅನುದಾನ ಮಂಜೂರು ಮಾಡಿದ್ದರೂ ಕಾಮಗಾರಿ ಆರಂಭವಾಗದಿರುವುದು ಅಧಿಕಾರಿಗಳ ನಿರ್ಲಕ್ಷ್ಯ ಮತ್ತು ಕಳ್ಳಾಟಕ್ಕೆ ಸಾಕ್ಷಿಯಾಗಿದೆ ಎಂದು ದೂರಿದರು.
ಒಂದು ವಾರದೊಳಗೆ ಶಾಲೆಯ ರಿಪೇರಿ ಕಾಮಗಾರಿ ಆರಂಭಿಸಿ ವಿದ್ಯಾರ್ಥಿಗಳಿಗೆ ಅಗತ್ಯ ಸೌಲಭ್ಯಗಳನ್ನು ಒದಗಿಸಬೇಕು. ಇಲ್ಲವಾದರೆ ಮಕ್ಕಳು, ಪೋಷಕರು ಹಾಗೂ ರೈತರೊಂದಿಗೆ ಸೇರಿ ಯಾದಗಿರಿ-ಸೇಡಂ ಮುಖ್ಯರಸ್ತೆ ಬಂದ್ ಮಾಡಿ ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ಉಮೇಶ್ ಕೆ. ಮುದ್ನಾಳ್ ಸರ್ಕಾರ ಮತ್ತು ಜಿಲ್ಲಾಡಳಿತಕ್ಕೆ ಖಡಕ್ ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ರಮೇಶ್ ಬೈರಂಕೊಂಡ, ಭೀಮಾಶಂಕರ್, ಮಲ್ಲೇಶಿ, ಪವನ, ಯಕ್ಬಾಲ್, ವಸಂತ್ ಸೇರಿದಂತೆ ಉಮೇಶ್ ಕೆ. ಮುದ್ನಾಳ್ ಅಭಿಮಾನಿ ಬಳಗದ ಸದಸ್ಯರು ಉಪಸ್ಥಿತರಿದ್ದರು.




