ಕಲಬುರಗಿಜಿಲ್ಲಾಸುದ್ದಿ

“ಕಾಂಗ್ರೆಸ್‌ಗೆ ಮುಸ್ಲಿಂ ಸಮುದಾಯದ ಖಡಕ್ ಎಚ್ಚರಿಕೆ: 10 ಬೇಡಿಕೆಗಳ ತಕ್ಷಣ ಜಾರಿ ಆಗ್ರಹ!”

"50 ಲಕ್ಷ ಮತ ಕೊಟ್ಟರೂ ಒಂದು ಸಚಿವ ಸ್ಥಾನ ಮಾತ್ರ: ಕಾಂಗ್ರೆಸ್ ವಿರುದ್ಧ ಮುಸ್ಲಿಂ ಸಮುದಾಯ ಆಕ್ರೋಶ"

ಮುಸ್ಲಿಂ 4% ಮೀಸಲಾತಿ ಪುನರ್ ಜಾರಿ, ಪ್ರತ್ಯೇಕ ಬಜೆಟ್, ರಾಜಕೀಯ ಪ್ರಾತಿನಿಧ್ಯ, ವಕ್ಫ್ ಭೂಮಿ ರಕ್ಷಣೆ, ದ್ವೇಷ ಭಾಷಣ ನಿಯಂತ್ರಣ, ಗೋವು ಹತ್ಯೆ ಕಾಯ್ದೆ ರದ್ದು, ವಿದ್ಯಾರ್ಥಿ ವೇತನ.

ಕಲಬುರಗಿ: ಚುನಾವಣಾ ಪೂರ್ವದಲ್ಲಿ ಮುಸ್ಲಿಂ ಸಮುದಾಯಕ್ಕೆ ನೀಡಿದ್ದ 10 ಪ್ರಮುಖ ಭರವಸೆಗಳಲ್ಲಿ ಕೇವಲ ಒಂದು ಮಾತ್ರ ಈಡೇರಿಸಲಾಗಿದ್ದು, ಉಳಿದ ಒಂಬತ್ತು ಬೇಡಿಕೆಗಳನ್ನು ತಕ್ಷಣ ಜಾರಿಗೆ ತರಬೇಕು ಎಂದು ಕರ್ನಾಟಕ ರಾಜ್ಯ ಮುಸ್ಲಿಂ ಸಂಘಟನೆಗಳ ಒಕ್ಕೂಟ ಕಾಂಗ್ರೆಸ್ ಸರ್ಕಾರವನ್ನು ಒತ್ತಾಯಿಸಿದೆ.

ನಗರದ ಹಾಗರಗಾ ಕ್ರಾಸ್ ಸಮೀಪದ ಸಭಾ ಫಂಕ್ಷನ್ ಹಾಲ್‌ನಲ್ಲಿ ರವಿವಾರ “ಕಾಂಗ್ರೆಸ್ ಸರ್ಕಾರ ಹೇಳಿದ್ದೇನು? ಮಾಡಿದ್ದೇನು? ಮುಂದೇನು? ವರದಿ ಹಾಗೂ ಆಗ್ರಹಗಳ ಪರಿಚಯ” ಎಂಬ ಶೀರ್ಷಿಕೆಯಡಿ ನಡೆದ ಕರ್ನಾಟಕ ಮುಸ್ಲಿಂ ಸಮಾವೇಶದಲ್ಲಿ ಮುಖಂಡರು ಸರ್ಕಾರದ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ಸಮಾವೇಶದಲ್ಲಿ ಮಾತನಾಡಿದ ಮಾಜಿ ಡಿವೈಎಸ್ಪಿ ಸೊಹೈಲ್ ಅಹ್ಮದ್ ಮೈಸೂರು, ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಹಿಜಾಬ್ ನಿರ್ಬಂಧವನ್ನು ಮಾತ್ರ ಹಿಂಪಡೆದಿದೆ. ಆದರೆ ಮುಸ್ಲಿಂರಿಗೆ 4 ಪ್ರತಿಶತ ಮೀಸಲಾತಿ ಮರುಜಾರಿ, ದ್ವೇಷ ಭಾಷಣಗಳಿಗೆ ಕಡಿವಾಣ, ಪ್ರತ್ಯೇಕ ಬಜೆಟ್ ಹಂಚಿಕೆ, ರಾಜಕೀಯ ಪ್ರಾತಿನಿಧ್ಯ, ವಕ್ಫ್ ಆಸ್ತಿ ಸಮಸ್ಯೆಗಳ ಪರಿಹಾರ, ಗೋಹತ್ಯೆ ನಿಷೇಧ ಹಾಗೂ ಮತಾಂತರ ನಿರ್ಬಂಧ ಕಾಯ್ದೆಗಳ ಹಿಂಪಡೆತ, ವಿದ್ಯಾರ್ಥಿ ವೇತನ ಸೇರಿದಂತೆ ಹಲವು ಪ್ರಮುಖ ಬೇಡಿಕೆಗಳು ಇನ್ನೂ ಈಡೇರಿಲ್ಲ ಎಂದು ಆರೋಪಿಸಿದರು.

“50 ಲಕ್ಷಕ್ಕೂ ಅಧಿಕ ಮತಗಳನ್ನು ಕಾಂಗ್ರೆಸ್ ಪಕ್ಷಕ್ಕೆ ನೀಡಿರುವ ಸಮುದಾಯಕ್ಕೆ ಕೇವಲ ಒಂದು ಸಚಿವ ಸ್ಥಾನ ನೀಡಲಾಗಿದೆ. ಕಳೆದ ಮೂರು ವರ್ಷಗಳಲ್ಲಿ ನೇಮಕಗೊಂಡ 24 ವಿಧಾನ ಪರಿಷತ್ ಸದಸ್ಯರಲ್ಲಿ ಒಬ್ಬರೇ ಮುಸ್ಲಿಂ ಸಮುದಾಯದವರಿದ್ದಾರೆ. ಇದು ಸಮುದಾಯಕ್ಕೆ ಮಾಡಿದ ಅನ್ಯಾಯವಾಗಿದೆ” ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ಒಕ್ಕೂಟದ ಅಧ್ಯಕ್ಷ ಹಾಗೂ ನಿವೃತ್ತ ತಹಸೀಲ್ದಾರ್ ನಿಸಾರ್ ಅಹ್ಮದ್ ವಝೀರ್ ಮಾತನಾಡಿ, 2028ರೊಳಗೆ ಸರ್ಕಾರ ಸಮುದಾಯದ ಬೇಡಿಕೆಗಳನ್ನು ಈಡೇರಿಸದಿದ್ದರೆ ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ತಕ್ಕ ಪಾಠ ಕಲಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಸಾಮಾಜಿಕ ಹೋರಾಟಗಾರ ಹ್ಯಾರೀಸ್ ಸಿದ್ದಿಕಿ ಮಾತನಾಡಿ, ಮುಸ್ಲಿಂ ಮೀಸಲಾತಿ ರದ್ದತಿಯಿಂದ ಪ್ರತಿ ವರ್ಷ ಸುಮಾರು 1700 ಎಂಜಿನಿಯರಿಂಗ್ ವಿದ್ಯಾರ್ಥಿಗಳು ಅವಕಾಶಗಳಿಂದ ವಂಚಿತರಾಗುತ್ತಿದ್ದಾರೆ. ರಾಜ್ಯದಲ್ಲಿ 217 ದ್ವೇಷ ಭಾಷಣ ಪ್ರಕರಣಗಳು ದಾಖಲಾಗಿದ್ದರೂ ಸರ್ಕಾರ ಸೂಕ್ತ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿದರು.

ಸಿಖ್ ಸಮುದಾಯದ ಮುಖಂಡ ಗುರುಮಿತ್ ಸಿಂಗ್ ಸಹುಜಾ, ಹೋರಾಟಗಾರ ಇಬ್ರಾಹಿಂ ಪಟೇಲ್ ಯಾಳವಾರ, ಸಂಘಟಕ ಅಫ್ಜಲ್ ಮಹೆಮೂದ್ ಸೇರಿದಂತೆ ಹಲವು ಮುಖಂಡರು ಸಮುದಾಯದ ಹಕ್ಕುಗಳು, ರಾಜಕೀಯ ಪ್ರಾತಿನಿಧ್ಯ ಹಾಗೂ ಸಾಮಾಜಿಕ ನ್ಯಾಯದ ಕುರಿತು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ಫಿರೋಜ್ ಖಾನ್, ಅಜೀಜ್ ಅಹ್ಮದ್ ಶಾನ್, ಸಲಾಂ ಪಾಶಾ ಮನ್ನಾಖೇಳಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Show More

Related Articles

Leave a Reply

Your email address will not be published. Required fields are marked *

Back to top button