“ತಿಪ್ಪಣ್ಣಪ್ಪ ಕಮಕನೂರ ಜನ್ಮದಿನ: ಸರ್ಕಾರಿ ಆಸ್ಪತ್ರೆಯಲ್ಲಿ ರೋಗಿಗಳಿಗೆ ಹಣ್ಣು-ಆಹಾರ ವಿತರಣೆ”

ಚಿತ್ತಾಪುರ: ವಿಧಾನ ಪರಿಷತ್ ಸದಸ್ಯ ತಿಪ್ಪಣ್ಣಪ್ಪ ಕಮಕನೂರ ಅವರ ಜನ್ಮದಿನದ ಅಂಗವಾಗಿ ಪಟ್ಟಣದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಕರ್ನಾಟಕ ಪ್ರದೇಶ ತಾಲೂಕು ಯುವ ಕೋಲಿ ಸಮಾಜದ ಅಧ್ಯಕ್ಷ ಮಹೇಶ್ ಸಾತನೂರ್ ಅವರ ನೇತೃತ್ವದಲ್ಲಿ ರೋಗಿಗಳಿಗೆ ಹಣ್ಣು ಹಾಗೂ ಆಹಾರ ವಿತರಣೆ ಮಾಡುವ ಮೂಲಕ ಜನ್ಮದಿನವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಮಹೇಶ್ ಸಾತನೂರ್, ತಿಪ್ಪಣ್ಣಪ್ಪ ಕಮಕನೂರ ಅವರು ಮೂರನೇ ಬಾರಿ ವಿಧಾನ ಪರಿಷತ್ ಸದಸ್ಯರಾಗಿರುವುದು ಕೋಲಿ ಸಮಾಜದ ಶಕ್ತಿ ಮತ್ತು ಪ್ರತಿನಿಧಿತ್ವವನ್ನು ಮತ್ತಷ್ಟು ಬಲಪಡಿಸಿದೆ ಎಂದು ಹೇಳಿದರು. ಹಿರಿಯ ನಾಯಕ ವಿಠಲ್ ಹೇರೂರು ಅವರ ಬಳಿಕ ಕಮಕನೂರ ಅವರು ಕೋಲಿ ಸಮಾಜದ ಪ್ರಮುಖ ಶಕ್ತಿಯಾಗಿ ಹೊರಹೊಮ್ಮಿದ್ದು, ಸಮಾಜದ ಅಭಿವೃದ್ಧಿಗೆ ನಿರಂತರವಾಗಿ ಶ್ರಮಿಸುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ತಿಪ್ಪಣ್ಣಪ್ಪ ಕಮಕನೂರ ಅವರ ಜನ್ಮದಿನದ ಪ್ರಯುಕ್ತ ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಉದ್ದೇಶದಿಂದ ಸರ್ಕಾರಿ ಆಸ್ಪತ್ರೆಯ ರೋಗಿಗಳಿಗೆ ಹಣ್ಣು ಮತ್ತು ಆಹಾರ ವಿತರಣೆ ಮಾಡಲಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ರೇವಣಸಿದ್ದ ದೊಡ್ಡಮನಿ, ಶ್ರೀಕಾಂತ್ ಚಪಾಟ್ನಾ, ಮಲ್ಲಿಕಾರ್ಜುನ ರಾಜೋಳಿ, ಶರಣಪ್ಪ ಹೊಸೂರು, ಚನ್ನು ಸಾತನೂರ, ನಿಂಗಪ್ಪ ದಂಡಗುಂಡ, ರಾಜಕುಮಾರ ಯಾಗಾಪುರ ಸೇರಿದಂತೆ ಹಲವರು ಉಪಸ್ಥಿತರಿದ್ದರು.




