ಆಸೆಯ ನಿಯಂತ್ರಣವೇ ಆಧ್ಯಾತ್ಮಿಕ ಮುಕ್ತಿಗೆ ದಾರಿ: ಮಲ್ಲಯ್ಯ ಸ್ವಾಮಿ

ಕೆಂಭಾವಿ: ಆಸೆಯೇ ದುಃಖದ ಮೂಲವಾಗಿದ್ದು, ಅವುಗಳ ನ್ನು ನಿಯಂತ್ರಿಸದಿದ್ದರೆ ಮನಸ್ಸು ಅಸ್ಥಿರಗೊಳ್ಳುತ್ತದೆ ಮತ್ತು ಆಧ್ಯಾತ್ಮಿಕ ಪ್ರಗತಿ ತಡೆಯಲ್ಪಡುತ್ತದೆ ಎಂದು ಮಲ್ಲಯ್ಯ ಸ್ವಾಮಿ ಹೇಳಿದರು.
ಪಟ್ಟಣದ ಹಿರೇಮಠದಲ್ಲಿ ಪ್ರತಿ ಹುಣ್ಣಿಮೆಯ ಪ್ರಯುಕ್ತ ನಡೆದ ಶಿವಾನುಭವ ಚಿಂತನೆ, ಉಪನ್ಯಾಸ ಹಾಗೂ ಸಂಗೀ ತ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿ ದರು.
ಕೆಂಭಾವಿ ಪುಣ್ಯಭೂಮಿಯಾಗಿದ್ದು, ಚಂಡಿಮಾರಸರು, ಶರಣ ಭೋಗಣ್ಣ ಹಾಗೂ ಸೂಫಿ ಸಂತರು ನಡೆದಾಡಿದ ನೆಲದಲ್ಲಿ ಜೀವನ ನಡೆಸುವುದು ನಮ್ಮ ಭಾಗ್ಯ ಎಂದು ಹೇಳಿದರು.
ಹಣ, ಸಮಯ, ಆಹಾರ ಹಾಗೂ ಶಕ್ತಿಯ ಅಪವ್ಯಯ ವನ್ನು ತಪ್ಪಿಸಿ ವೈರಾಗ್ಯವನ್ನು ಬೆಳೆಸಿಕೊಳ್ಳಬೇಕು. ಆಸೆಗಳು ಮನುಷ್ಯನನ್ನು ಸಂಸಾರ ಬಂಧನಕ್ಕೆ ಕಟ್ಟಿಹಾಕಿ ಜೀವನ ವನ್ನು ಹಾಳುಮಾಡುತ್ತವೆ. ಲೌಕಿಕ ಆಸೆಗಳು ಧನ, ಕಾಮ ಮತ್ತು ಸ್ಥಿತಿಯ ಮೇಲೆ ಆಸಕ್ತಿ ಹೆಚ್ಚಿಸಿ ಇಂದ್ರಿಯಗಳನ್ನು ದುರ್ಬಲಗೊಳಿಸುತ್ತವೆ ಹಾಗೂ ಮುಕ್ತಿಗೆ ಅಡ್ಡಿಯಾಗುತ್ತವೆ ಎಂದು ತಿಳಿಸಿದರು.
ಅಲ್ಲಮಪ್ರಭು ಮತ್ತು ಅಕ್ಕಾ ಮಹಾದೇವಿ ಸೇರಿದಂತೆ ಶರಣರು ತಮ್ಮ ವಚನಗಳ ಮೂಲಕ ದುರಾಸೆಗಳ ಬಗ್ಗೆ ಎಚ್ಚರಿಕೆ ನೀಡಿರುವುದನ್ನು ಉದಾಹರಿಸಿ, “ಆಸೆಗೆ ಸತ್ತುದು ಕೋಟಿ, ಆಮಿಷಕ್ಕೆ ಸತ್ತುದು ಕೋಟಿ…” ಎಂಬ ವಚನವನ್ನು ಉಲ್ಲೇಖಿಸಿದರು.
ಆಸೆಗಳನ್ನು ನಿಯಂತ್ರಿಸಲು ಇಂದ್ರಿಯಗಳನ್ನು ಶುದ್ಧಗೊಳಿಸಿ ಧರ್ಮ ಮಾರ್ಗವನ್ನು ಅನುಸರಿಸಬೇಕು. ಮನಸ್ಸನ್ನು ಏಕಾಗ್ರಗೊಳಿಸಿ ಪರಮಾತ್ಮನಲ್ಲಿ ಭಕ್ತಿ ಬೆಳೆಯಿಸುವುದು ಅಗತ್ಯ. ಕರ್ತವ್ಯಗಳನ್ನು ನಿರ್ವಹಿಸುತ್ತಾ ಮೋಹವನ್ನು ತ್ಯಜಿಸುವುದೇ ನಿಜವಾದ ಮುಕ್ತಿ ಸಾಧನೆ ಎಂದು ಹೇಳಿದರು.
ಜಚ್ಚಾ ಮಾಸಾಬಿ ದರ್ಗಾದ ಸಜ್ಜಾದೆ ನಶೀನ್ ಶಾ. ಮ. ಶಾಹೀದ್ ಹುಸೇನ್ ಫಾರೂಕಿ ಮುಖ್ಯ ಅತಿಥಿಗಳಾಗಿ ಮಾತನಾಡಿದರು. ಷ.ಬ್ರ ಶ್ರೀ ಚನ್ನಬಸವ ಶಿವಾಚಾರ್ಯರು ಆಶೀರ್ವಚನ ನೀಡಿದರು.
ಸಂಗೀತ ಸೇವೆಯನ್ನು ಸೋಮನಾಥ ಹಾಗೂ ಯಮನೇಶ ಯಾಳಗಿ ನಡೆಸಿಕೊಟ್ಟರು. ಇದೇ ವೇದಿಕೆಯಲ್ಲಿ ‘ಮಲ್ಲಮ್ಮನ ನುಡಿ’ ಕನ್ನಡ ದಿನಪತ್ರಿಕೆಯ ಯುಗಾದಿ ವಿಶೇಷ ಸಂಚಿಕೆಯನ್ನು ಬಿಡುಗಡೆಗೊಳಿಸಲಾಯಿತು.
ಕಾರ್ಯಕ್ರಮವನ್ನು ಡಾ. ಯಂಕನಗೌಡ ಪಾಟೀಲ್ ನಿರೂಪಿಸಿ ವಂದಿಸಿದರು.ಈ ಸಂದರ್ಭದಲ್ಲಿ ನಿಂಗನಗೌಡ ದೇಸಾಯಿ, ದೇವೇಂದ್ರಪ್ಪ ಕರಡಕಲ, ಇಲಿಯಸ್ ವಡ್ಕೇರಿ, ಡಾ. ಪರಶುರಾಮ್ ಸಿ.ಎಂ., ರಜಾಕ್ ಸಾಸನೂರ್, ಬಂದೇನವಾಜ ನಾಲತವಾಡ, ಹಮೀದ್ ಹುಣಿಸ್ಯಾಳ, ಭೀಮನಗೌಡ ಮಲ್ಕಾಪುರ್, ವೀರೇಶ್ ರೆಡ್ಡಿ, ಇಲ್ಯಾಸ್ ಪಟೇಲ್ ಬಳಗಾನೂರ ಸೇರಿದಂತೆ ಹಲವರು ಉಪಸ್ಥಿತರಿದ್ದರು.


