ಕಲಬುರಗಿಜಿಲ್ಲಾಸುದ್ದಿ

ಸರ್ಕಾರಿ ಆಸ್ಪತ್ರೆಯಲ್ಲಿ ರಾತ್ರಿ ವೇಳೆಯಲ್ಲೂ ಔಷದ ವಿತರಣಾ ಕೇಂದ್ರ ತೆರೆದಿಡುವಂತೆ ಆಗ್ರಹಿಸಿ ಮನವಿ

ಚಿತ್ತಾಪುರ: ಪಟ್ಟಣದಲ್ಲಿರುವ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಕರ್ತವ್ಯದ ಮೇಲಿರುವ ವೈದ್ಯರು, ಸಿಬ್ಬಂದಿ ವಿವರ ನಾಮಫಲಕದಲ್ಲಿ ನಮೂದಿಸಬೇಕು ಹಾಗೂ ರಾತ್ರಿಯಲ್ಲಿಯೂ ಔಷದ ವಿತರಣಾ ಕೇಂದ್ರವು ತೆರೆದಿಡುವ ಮೂಲಕ ಜನರಿಗೆ ಅನುಕೂಲ ಮಾಡಿಕೊಡಬೇಕು ಎಂದು ಆಗ್ರಹಿಸಿ ತಾಲೂಕು ದೈಹಿಕ ಮತ್ತು ಮಾನಸಿಕ ಅಂಗವಿಕಲರ ವಿವಿದ್ದೋದ್ದೇಶಕ್ಷೇಮಾಭಿವೃದ್ಧಿ ಸಂಘದ ತಾಲೂಕು ಅಧ್ಯಕ್ಷ ಮಹ್ಮದ್ ಇಬ್ರಾಹಿಂ ಆಡಳಿತ ವೈದ್ಯಾಧಿಕಾರಿ ಡಾ.ಮಹ್ಮದ್ ಅಬ್ದುಲ್ ರಹೀಂ ಅವರಿಗೆ ಮನವಿ ಪತ್ರ ಸಲ್ಲಿಸಿದರು.

ನಂತರ ಮಾತನಾಡಿದ ಅವರು, ಚಿತ್ತಾಪುರ ಪಟ್ಟಣದ ಸರ್ಕಾರಿ ಸಾರ್ವಜನಿಕರ ಆಸ್ಪತ್ರೆಯಲ್ಲಿ ದಿನಾಲು ಹಗಲು ರಾತ್ರಿ ಪಾಳಿಯ ಪ್ರಕಾರ ಕರ್ತವ್ಯ ನಿರ್ವಹಿಸುವ ವೈದ್ಯರು ಮತ್ತು ವೈದ್ಯಕೀಯ ಸಿಬ್ಬಂದಿಯ ವಿವರ ನಾಮಫಲಕದಲ್ಲಿ ನಮೂದು ಮಾಡುತ್ತಿಲ್ಲ. ಕರ್ತವ್ಯ ನಿರತರ ವಿವರ ನಮೂದಿಸುವುದರಿಂದ ಆಸ್ಪತ್ರೆಗೆ ಬರುವ ರೋಗಿಗಳು ಮತ್ತು ರೋಗಿಗಳ ಸಂಬಂಧಿಕರು ನೇರವಾಗಿ ಅವರನ್ನು ಸಂಪರ್ಕಿಸಲು ಸಹಾಯಕವಾಗುತ್ತದೆ. ಅಲ್ಲದೆ ರಾತ್ರಿ ಸಮಯದಲ್ಲಿ ಆಸ್ಪತ್ರೆಗೆ ಬರುವ ರೋಗಿಗಳಿಗೆ ಔಷದ ಸೌಲಭ್ಯ ಸಮರ್ಪಕವಾಗಿ ಸಿಗುತ್ತಿಲ್ಲ. ಅಫಘಾತದಲ್ಲಿ ಗಂಭೀರವಾಗಿ ಗಾಯಗೊಂಡವರು ಆಸ್ಪತ್ರೆಗೆ ಬಂದಾಗ ಔಷದ ಸಮಸ್ಯೆಯಾಗುತ್ತಿದೆ. ಹೀಗಾಗಿ ರಾತ್ರಿ ಸಮಯದಲ್ಲೂ ಔಷದ ವಿತರಣಾ ಕೇಂದ್ರ ತೆರೆದಿಡಲು ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದರು.

ಬಾಣಂತಿಯರು ಕುಟುಂಬ ಕಲ್ಯಾಣ ಯೋಜನೆಯಡಿ ಶಸ್ತ್ರ ಚಿಕಿತ್ಸೆಗೆಂದು ಬಂದರೆ ಅವರಿಗೆ ಸರಿಯಾದ ಸ್ಪಂದನೆ ಸಿಗುತ್ತಿಲ್ಲ. ಶಸ್ತ್ರ ಚಿಕಿತ್ಸೆ ಮಾಡುವ ನಿಖರ ದಿನಾಂಕ ನಿಗಧಿ ಮಾಡಿ ಆಸ್ಪತ್ರೆಗೆ ಬರುವವರಿಗೆ ಮಾಹಿತಿ ಸಿಗುವಂತೆ ನಾಮಫಲಕದಲ್ಲಿ ವಿವರ ಹಾಕುತ್ತಿಲ್ಲ. ಸಮಗ್ರ ವಿವರವನ್ನು ನಾಮಫಲಕದದಲ್ಲಿ ಹಾಕುವ ವ್ಯವಸ್ಥೆ ಮಾಡಬೇಕು. ಅಲ್ಮಾಸೌಂಡ್ ಸ್ಕ್ಯಾನಿಂಗ್ ಸೇವೆ ಒದಗಿಸಬೇಕು. ಇನ್ನು ಹೆಚ್ಚಿನ ಶಸ್ತ್ರ ಚಿಕಿತ್ಸೆಯ ವ್ಯವಸ್ಥೆ ಮಾಡಿ ತಾಲ್ಲೂಕಿನ ಜನತೆಗೆ ಅನುಕೂಲ ಮಾಡಿಕೊಡಬೇಕು ಎಂದು ಹೇಳಿದರು.

ರಾತ್ರಿ ಸಮಯದಲ್ಲಿ ಹಾಗೂ ದಿನದ 24 ಗಂಟೆಗಳ ಕಾಲ ಔಷದ ವಿತರಣಾ ಕೇಂದ್ರ ತೆರೆಯಬೇಕು, ಮಹಿಳಾ ವೈದ್ಯಾಧಿಕಾರಿ ಹಾಗೂ ಮಹಿಳಾ ಎಂ.ಬಿ.ಬಿ.ಎಸ್ ವೈದ್ಯರನ್ನು ನಿಯೋಜನೆ ಮಾಡಬೇಕು, ಸುಂದು ಮಾಡುವ (ಅನೇಸ್ತಿಯಾ) ವೈದ್ಯರನ್ನು ನಿಯೋಜನೆ ಮಾಡಬೇಕು ಮತ್ತು ಸ್ಕ್ಯಾನಿಂಗ್ ವ್ಯವಸ್ಥೆ ಮಾಡಬೇಕೆಂಬ ಬೇಡಿಕೆಗಳ ಮನವಿ ಪತ್ರವನ್ನು ಸಲ್ಲಿಸಿದರು.ಮನವಿಗೆ ಸ್ಪಂದಿಸಿ ಮಾತನಾಡಿದ ಡಾ.ಮಹ್ಮದ್ ಅಬ್ದುಲ್ ರಹೀಂ, ಈಗಾಗಲೇ ಆಸ್ಪತ್ರೆಯಲ್ಲಿ ಕರ್ತವ್ಯನಿರತ ವೈದ್ಯರ ಹೆಸರುಗಳ ನಾಮಫಲಕ ಅಳವಡಿಸಲಾಗಿದೆ ಇತರೆ ಬೇಡಿಕೆಗಳನ್ನು ಈಡೇರಿಸಲಾಗುವುದು ಎಂದು ಭರವಸೆ ನೀಡಿದರು.

ಈ ಸಂದರ್ಭದಲ್ಲಿ ರವೀಂದ್ರ ತೇಲ್ಕರ್, ಅಂಬಾದಾಸ್ ಟೇಲ‌ರ್, ಮಹಿಬೂಬ್ ಟೇಲ‌ರ್, ಮೊಗಲಪ್ಪ ಕುಂಬಾರ, ರಾಮು ರಾಠೋಡ, ಚಂದ್ರಶೇಖರ ಕಾಶಿ ಸೇರಿದಂತೆ ಇತರರು ಇದ್ದರು.

Related Articles

Leave a Reply

Your email address will not be published. Required fields are marked *

Back to top button