ಕಲ್ಯಾಣ ಮಂಟಪ ನಿರ್ಮಾಣಕ್ಕೆ ಬೆನ್ನೆಲುಬಾಗಿ ನಿಲ್ಲುವೆ: ಮೋದಿ
ಚಿತ್ತಾಪುರದಲ್ಲಿ ವೀರಶೈವ ಕಲ್ಯಾಣ ಮಂಟಪಕ್ಕೆ ಅಡಿಗಲ್ಲು

ಚಿತ್ತಾಪುರ: ವೀರಶೈವ ಕಲ್ಯಾಣ ಮಂಟಪ ನಿರ್ಮಾಣಕ್ಕೆ ವೈಯಕ್ತಿಕ ಹಾಗೂ ಜಿಲ್ಲಾ ಘಟಕದ ವತಿಯಿಂದ ಸಹಾಯ ಮಾಡುವುದಲ್ಲದೇ ಇದಕ್ಕೆ ಬೆನ್ನೆಲುಬಾಗಿ ನಿಲ್ಲುತ್ತೇನೆ ಎಂದು ವೀರಶೈವ ಲಿಂಗಾಯತ ಮಹಾಸಭಾ ಜಿಲ್ಲಾಧ್ಯಕ್ಷ ಶರಣಕುಮಾರ ಮೋದಿ ಹೇಳಿದರು.
ಪಟ್ಟಣದ ಸ್ಟೇಷನ್ ರಸ್ತೆಯ ವೀರಶೈವ ಸಮಾಜದ ನಿವೇಶನದಲ್ಲಿ ವೀರಶೈವ ಲಿಂಗಾಯತ ಮಹಾಸಭಾ ವತಿಯಿಂದ ಸೋಮವಾರ ಹಮ್ಮಿಕೊಂಡಿದ್ದ ವೀರಶೈವ ಕಲ್ಯಾಣ ಮಂಟಪದ ಅಡಿಗಲ್ಲು ನೆರವೇರಿಸಿ ಮಾತನಾಡಿದ ಅವರು, ಜಿಲ್ಲೆಯಲ್ಲೇ ಚಿತ್ತಾಪುರ ತಾಲೂಕಿನಲ್ಲಿ ವೀರಶೈವ ಲಿಂಗಾಯತ ಸಮಾಜದ ಸಂಘಟನೆ ಬಲಿಷ್ಠವಾಗಿದೆ. ಹೀಗಾಗಿ ಇಲ್ಲಿ ವೀರಶೈವ ಕಲ್ಯಾಣ ಮಂಟಪ ಹಾಗೂ ವಿದ್ಯಾರ್ಥಿ ವಸತಿ ನಿಲಯ ನಿರ್ಮಾಣ ಮಾಡುವುದು ಅವಶ್ಯಕತೆ ಇದೆ ಎಂದರು.
ಬಸವ ಭವನ ನಿರ್ಮಾಣ ಸಮಿತಿ ಅಧ್ಯಕ್ಷ ರಮೇಶ್ ಮರಗೋಳ ಮಾತನಾಡಿ, ವೀರಶೈವ ಲಿಂಗಾಯತ ಮಹಾಸಭಾದ ಮುಖಂಡರ ಅಭಿಪ್ರಾಯದ ಮೇರೆಗೆ ಪಟ್ಟಣದಲ್ಲಿ ಸುಸಜ್ಜಿತ ಕಲ್ಯಾಣ ಮಂಟಪ ನಿರ್ಮಾಣ (ಎಸಿ)ಕ್ಕೆ ಮುಂದಾಗಿದ್ದು, ಇದಕ್ಕೆ ಅಂದಾಜು 2 ಕೋಟಿ ಹಣ ತಗಲುತ್ತದೆ. ಇದನ್ನು ವೀರಶೈವ ಸಮಾಜದ ಮುಖಂಡರಿಂದ ದೇಣಿಗೆ ರೂಪದಲ್ಲಿ ಸಂಗ್ರಹ ಮಾಡಲಾಗುವುದು, ಈಗಾಗಲೇ ಮಾಜಿ ಶಾಸಕ ವಿಶ್ವನಾಥ ಪಾಟೀಲ ಹೆಬ್ಬಾಳ ಅವರು 5 ಲಕ್ಷ ದೇಣಿಗೆ ನೀಡಿದ್ದಾರೆ, ಇದೇ ರೀತಿ ಅನೇಕರು ದೇಣಿಗೆ ನೀಡಲು ಸಿದ್ಧರಿದ್ದಾರೆ. ಹೀಗಾಗಿ ಬರುವ ಒಂದು ವರ್ಷದೊಳಗೆ ಕಾಮಗಾರಿ ಪೂರ್ಣಗೊಳಿಸುವ ಪ್ರಯತ್ನ ಮಾಡಲಾಗುವುದು ಎಂದು ಹೇಳಿದರು.
ಕಂಬಳೇಶ್ವರ ಶ್ರೀ ಸೋಮಶೇಖರ ಶಿವಾಚಾರ್ಯರು ಮಾತನಾಡಿ, ಪಟ್ಟಣದ ಹೃದಯ ಭಾಗದಲ್ಲಿ 90×150 ಅಳತೆಯ ನಿವೇಶನ ವೀರಶೈವ ಸಮಾಜಕ್ಕಾಗಿ ಖರೀದಿಸಿ ಕಾಯ್ದಿಟ್ಟ ಶಿವರಾವ್ ಪಾಟೀಲ ಬೆಳಗುಂಪಾ ಅವರ ಕಾರ್ಯ ಶ್ಲಾಘನೀಯ.
ಅಭಿಮಾನ ಇದ್ದಲ್ಲಿ ಅಭಿವೃದ್ಧಿ ಆಗಲಿದೆ ಈ ನಿಟ್ಟಿನಲ್ಲಿ ಇಂದು ಪಕ್ಷಪಾತ ಬದಿಗಿಟ್ಟು ಎಲ್ಲರೂ ಒಗ್ಗೂಡಿ ಕಲ್ಯಾಣ ಮಂಟಪ ನಿರ್ಮಾಣಕ್ಕೆ ಮುಂದಾಗಿದ್ದು ಸಮಾಜಕ್ಕೆ ಉತ್ತಮ ಕೊಡುಗೆ ನೀಡಿದಂತಾಗಿದೆ ಎಂದು ಹೇಳಿದರು.
ಮಾಜಿ ಶಾಸಕ ವಿಶ್ವನಾಥ ಪಾಟೀಲ ಹೆಬ್ಬಾಳ, ಮುಖಂಡರಾದ ವೀರಣ್ಣಗೌಡ ಪರಸರೆಡ್ಡಿ, ಶಿವಾನಂದ ಪಾಟೀಲ ಮರತೂರ, ಚಂದ್ರಶೇಖರ ಅವಂಟಿ, ಭೀಮಣ್ಣ ಸಾಲಿ ಅವರು ಮಾತನಾಡಿದರು
.ಮಹಾಸಭಾ ತಾಲೂಕು ಗೌರವಾಧ್ಯಕ್ಷ ಲಿಂಗಾರೆಡ್ಡಿ ಭಾಸರೆಡ್ಡಿ, ಬಸವ ಜಯಂತಿ ಸಮಿತಿ ಅಧ್ಯಕ್ಷ ಬಸವರಾಜ ಪಾಟೀಲ ಬೆಳಗುಂಪಾ, ಡಾ.ಪ್ರಭುರಾಜ ಕಾಂತಾ, ಸೋಮಶೇಖರ ಪಾಟೀಲ ಬೆಳಗುಂಪಾ, ರಾಜಶೇಖರ್ ತಿಮ್ಮನಾಯಕ, ಮಲ್ಲಿನಾಥ ಇಂದೂರ, ಜಗಣ್ಣಗೌಡ ರಾಮತೀರ್ಥ, ಓಂಕಾರ ರೇಷ್ಮೆ, ಮಹಾಂತಗೌಡ ಪಾಟೀಲ ದಂಡಗುಂಡ, ಮಲ್ಲಿನಾಥ ಪಾಟೀಲ ಸನ್ನತ್ತಿ, ಆನಂದ ಪಾಟೀಲ ನರಿಬೋಳ, ಡಿ.ಕೆ.ಪಾಟೀಲ, ರವೀಂದ್ರ ರೆಡ್ಡಿ ಭಂಕಲಗಿ, ನಾಗುಗೌಡ ಅಲ್ಲೂರ, ರವೀಂದ್ರ ರೆಡ್ಡಿ ಅನ್ನಪೂರ, ಕೋಟೇಶ್ವರ ರೇಷ್ಮೆ, ರವಿ ಪಡ್ಲಾ, ರಮೇಶ್ ಬೊಮ್ಮನಳ್ಳಿ, ನಾಗಯ್ಯ ಗುತ್ತೇದಾರ, ಹಣಮಂತ ಸಂಕನೂರ, ವಿಶ್ವನಾಥ ಕುಂಬಾರ, ಅಂಬರೀಷ್ ಸುಲೇಗಾಂವ, ಪ್ರಕಾಶ್ ಹಂಚನಾಳ, ಸುರೇಶ್ ಪಾಟೀಲ ಮುಡಬೂಳ ಸೇರಿದಂತೆ ಇತರರು ಇದ್ದರು. ಶಾಂತಣ್ಣ ಚಾಳೀಕಾರ ನಿರೂಪಿಸಿದರು.




