ಒಳಮೀಸಲಾತಿ ವರದಿ ವಿರೋಧಿಸಿ ಮಾರ್ಚ್ 25ರಂದು ಫ್ರೀಡಂ ಪಾರ್ಕ್ನಲ್ಲಿ ಬೃಹತ್ ಪ್ರತಿಭಟನೆ: ಭಾಗವಹಿಸಲು ಕರೆ

ಅಫಜಲಪುರ: ನಾಗಮೋಹನ ದಾಸ್ ಆಯೋಗ ನೀಡಿರುವ ಅವೈಜ್ಞಾನಿಕ ಒಳಮೀಸಲಾತಿ ವರದಿಯನ್ನು ತಿರಸ್ಕರಿಸುವಂತೆ ಆಗ್ರಹಿಸಿ ಮಾರ್ಚ್ 25ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ರಾಜ್ಯ ಬಲಗೈ ಜಾತಿಗಳ ಮಹಾ ಒಕ್ಕೂಟದ ತಾಲೂಕು ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅತನೂರ ತಿಳಿಸಿದ್ದಾರೆ.
ಈ ಕುರಿತು ಮಾತನಾಡಿದ ಅವರು, ನಾಗಮೋಹನ ದಾಸ್ ಆಯೋಗದ ವರದಿ ಪರಿಶಿಷ್ಟ ಜಾತಿಯ ಇತರೆ ಅನೇಕ ಸಮುದಾಯಗಳ ಶೈಕ್ಷಣಿಕ ಹಾಗೂ ಉದ್ಯೋಗಾವಕಾಶ ಗಳನ್ನು ಕಸಿದುಕೊಳ್ಳುವ ಅನ್ಯಾಯವಾಗಿದ್ದು, ಇದನ್ನು ತಕ್ಷಣವೇ ತಿರಸ್ಕರಿಸಬೇಕು ಎಂದು ಆಗ್ರಹಿಸಿದರು.
ಪರಿಶಿಷ್ಟ ಜಾತಿಯ ಹಲವು ಸಮುದಾಯಗಳ ಹಕ್ಕುಗಳು ಮತ್ತು ಭವಿಷ್ಯವನ್ನು ಕಾಪಾಡುವ ಉದ್ದೇಶದಿಂದ ಈ ಹೋರಾಟವನ್ನು ಕರ್ನಾಟಕ ರಾಜ್ಯ ಬಲಗೈ ಜಾತಿಗಳ ಮಹಾ ಒಕ್ಕೂಟದ ವತಿಯಿಂದ ಆಯೋಜಿಸಲಾಗಿದೆ. ಆದ್ದರಿಂದ ಅಫಜಲಪುರ ತಾಲೂಕಿನ ಎಲ್ಲಾ ಹಳ್ಳಿಗಳಿಂದ ಸಮಾಜದ ಮುಖಂಡರು, ಯುವಕರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಈ ಐತಿಹಾಸಿಕ ಪ್ರತಿಭಟನೆಯನ್ನು ಯಶಸ್ವಿಗೊಳಿಸಬೇಕು ಎಂದು ಅವರು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಗೌರವಾಧ್ಯಕ್ಷ ಭೀಮರಾವ್ ಗೌರ, ಮಹಾಲಿಂಗ ಅಂಗಡಿ, ಡಾ. ಹಣಮಂತರಾವ ದೊಡ್ಮನಿ, ನಾಗೇಶ್ ಕೊಳ್ಳಿ, ಡಾ. ಶಾಂತಮಲ್ಲ ಹೊನ್ನುಂಗರ್, ರವಿ ಗೌರ್, ಮಹಾಂತೇಶ ಬಳೂಂಡಗಿ, ಅಪ್ಪಾರಾವ್ ಸಂಗಮಕರ್, ಗೌತಮ್ ಸಕ್ಕರಗಿ, ಶಾಮ ಹೊಸ್ಮನಿ ಸೇರಿದಂತೆ ಇತರರು ಉಪಸ್ಥಿತರಿದ್ದರು.



