ಅಂಬಿಗರ ಚೌಡಯ್ಯ ದೇವಸ್ಥಾನಕ್ಕೆ ಕಂಪೌಂಡ್: ತುರ್ತು ಕ್ರಮದ ಭರವಸೆ
ಸಮುದಾಯ ಭವನ ನಿರ್ಮಾಣಕ್ಕೂ ಶಾಸಕ ಚನ್ನಾರೆಡ್ಡಿ ಪಾಟೀಲ ತುನ್ನೂರು ಭರವಸೆ

12 ಮಾಸದಲ್ಲಿ ಶ್ರೇಷ್ಠ ಮಾಸವಾದ ಶ್ರಾವಣ ಮಾಸ ಬಹಳ ಶ್ರೇಷ್ಠವಾದದ್ದು ಅದರಲ್ಲಿ ಶ್ರೀ ನಿಜಶರಣ ಅಂಬಿಗರ ಚೌಡಯ್ಯನವರ ಮೂರ್ತಿ ಪ್ರತಿಷ್ಠಾಪನೆ ಮತ್ತು ದೇವಸ್ಥಾನ ಲೋಕಾರ್ಪಣೆ ಮಾಡುತ್ತಿರುವುದು ಸಮಾಜದಲ್ಲಿ ಒಳ್ಳೆಯ ಬೆಳವಣಿಗೆ ಇದನ್ನು ನಿರಂತರ ಪೂಜಿಸುವುದು ಮತ್ತು ಸ್ವಚ್ಛತೆ ಕಾಪಾಡುವುದರ ಜೊತೆಗೆ ಯಾವುದೇ ದುಷ್ಚಟದಿಂದ ದೇವಸ್ಥಾನ ಹೊಳಗೆ ಹೋಗಿ ಅಪ ಪವಿತ್ರ ಮಾಡಬಾರಾದೆಂದು ಸಲಹೆ ನೀಡಿದರು.- ವೀರೇಶ್ವರ ಮಹಾಸ್ವಾಮಿಗಳು ದಾಸಬಾಮಳ ಮಠ ಯಾದಗಿರಿ
ಯಾದಗಿರಿ: 12ನೇ ಶತಮಾನದ ಬಸವಾದಿ ಶರಣರಲ್ಲಿ ನಿಜಶರಣರೆಂದು ಖ್ಯಾತರಾದ ಅಂಬಿಗರ ಚೌಡಯ್ಯನವರ ತತ್ವ, ಆದರ್ಶಗಳನ್ನು ಪ್ರತಿಯೊಬ್ಬರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಶಾಸಕ ಚನ್ನಾರೆಡ್ಡಿ ಪಾಟೀಲ ತುನ್ನೂರು ಹೇಳಿದರು.
ತಾಲ್ಲೂಕಿನ ಯಾದಗಿರಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಕೊನೆಯ ಗ್ರಾಮವಾದ ಅರಕೇರಾ (ಕೆ) ಗ್ರಾಮದಲ್ಲಿ ನಿಜಶರಣ ಅಂಬಿಗರ ಚೌಡಯ್ಯನವರ ಮೂರ್ತಿ ಪ್ರತಿಷ್ಠಾಪನೆ ಹಾಗೂ ನೂತನ ದೇವಸ್ಥಾನದ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಗ್ರಾಮಸ್ಥರು ಮಹಾನಗರಗಳಿಗೆ ತೆರಳಿ ಕೂಲಿ ಕೆಲಸ ಮಾಡಿ ಹಣ ಸಂಗ್ರಹಿಸಿ, ಗುಜರಾತ್ ನಿವಾಸಿ ಹಣಮಂತ ಗುಜರಾತ್ ಅವರ ಸಹಕಾರದೊಂದಿಗೆ ಸುಂದರ ದೇವಸ್ಥಾನ ನಿರ್ಮಿಸಿ, ಬೃಹತ್ ಮೂರ್ತಿ ಪ್ರತಿಷ್ಠಾಪಿಸಿರುವುದು ಶ್ಲಾಘನೀಯ. ಇಂತಹ ಕಾರ್ಯಗಳು ಸಮಾಜದಲ್ಲಿ ಉತ್ತಮ ಬೆಳವಣಿಗೆಗೆ ಕಾರಣವಾಗುತ್ತವೆ ಎಂದರು.
ಎಲ್ಲ ದೇವಸ್ಥಾನಗಳಲ್ಲಿ ದೇವರ ಪೂಜೆಯ ಜತೆಗೆ ಶರಣರ ಪೂಜೆಯೂ ನಿರಂತರವಾಗಿ ನಡೆಯಬೇಕು. ದೇವಸ್ಥಾನದ ಸ್ವಚ್ಛತೆ ಹಾಗೂ ಸುರಕ್ಷತೆ ಕಾಪಾಡಲು ತಡೆಗೋಡೆ (ಕಂಪೌಂಡ್) ನಿರ್ಮಾಣಕ್ಕೆ ತುರ್ತು ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಉಮೇಶ ಕೆ. ಮುದ್ನಾಳ್, ಗ್ರಾಮದಲ್ಲಿ ನಿಜಶರಣ ಅಂಬಿಗರ ಚೌಡಯ್ಯನವರ ಸಮುದಾಯ ಭವನ ನಿರ್ಮಾಣಕ್ಕಾಗಿ ₹25 ಲಕ್ಷ ಅನುದಾನ ನೀಡುವಂತೆ ಶಾಸಕರಿಗೆ ಮನವಿ ಮಾಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಶಾಸಕ ಚನ್ನಾರೆಡ್ಡಿ ಪಾಟೀಲ ತುನ್ನೂರು, ಮೊದಲು ದೇವಸ್ಥಾನದ ಕಂಪೌಂಡ್ ನಿರ್ಮಾಣ ಪೂರ್ಣಗೊಳಿಸಿ, ಬಳಿಕ ಸಮುದಾಯ ಭವನ ನಿರ್ಮಿಸಿಕೊಡುವುದಾಗಿ ಭರವಸೆ ನೀಡಿದರು.
ಕಾರ್ಯಕ್ರಮದಲ್ಲಿ ಉಮೇಶ ಕೆ. ಮುದ್ನಾಳ್, ಬಸವರಾಜಪ್ಪ ಬಾಗಲಿ, ಹಣಮಂತ ಗುಜರಾತ್, ಭೀಮರಾಯ ಗಣಪೂರ, ನಾರಾಯಣ, ನರಸಪ್ಪ, ಸಿದ್ದಲಿಂಗಯ್ಯ ಸ್ವಾಮಿ, ರುದ್ರಗೌಡ, ಸಂಜೀವಕುಮಾರ, ಡಾ. ಟಿ.ಡಿ. ರಾಜ್, ದೌಲತ್ ಕುರಿ, ಶ್ರೀಶೈಲ್, ನಾಗಪ್ಪ ಪೋತಲ್, ಶಿವಪ್ಪ ಅನಪೂರ, ಜಗನ್ನಾಥ, ಲಕ್ಷ್ಮೀಕಾಂತ, ಸೂರ್ಯಕಾಂತ, ಸಿದ್ರಾಮ, ಶಿವಶಂಕರಯ್ಯ ಸ್ವಾಮಿ, ವೆಂಕಟೇಶ ಕೋಟಿಮನಿ ಸೇರಿದಂತೆ ಸಮಾಜದ ಮುಖಂಡರು ಹಾಗೂ ಬಾಂಧವರು ಭಾಗವಹಿಸಿದ್ದರು.
ಕೃನಾಲ್ ಯಾದಗಿರಿ ಅರಕೇರಾ ಸ್ವಾಗತಿಸಿದರು. ದೇವಪ್ಪ ಬಾಡದೋರ್ ನಿರೂಪಿಸಿದರು. ಸಾಹೇಬರೆಡ್ಡಿ ಭಂಡಾರಿ ವಂದಿಸಿದರು.
ಇದಕ್ಕೂ ಮುನ್ನ ಗ್ರಾಮದ ಪ್ರಮುಖ ರಸ್ತೆಗಳಲ್ಲಿ ಅಂಬಿಗರ ಚೌಡಯ್ಯನವರ ಮೂರ್ತಿಯನ್ನು ಬಾಜಾ-ಭಜಂತ್ರಿಗಳೊಂದಿಗೆ ಅದ್ದೂರಿಯಾಗಿ ಮೆರವಣಿಗೆ ನಡೆಸಲಾಯಿತು.



