ವಾರದೊಳಗೆ ಬಾಕಿ ಬಿಲ್ ಪಾವತಿಸದಿದ್ದರೆ ಪಾಲಿಕೆ ಕಚೇರಿಗೆ ಮುತ್ತಿಗೆ: ಗುತ್ತಿಗೆದಾರರ ಎಚ್ಚರಿಕೆ

ಕಲಬುರಗಿ: 15ನೇ ಹಣಕಾಸು ಯೋಜನೆಯಡಿ ಪೂರ್ಣಗೊಂಡ ಕಾಮಗಾರಿಗಳ ಬಾಕಿ ಬಿಲ್ಗಳನ್ನು ಕೂಡಲೇ ಪಾವತಿಸಬೇಕು ಎಂದು ಆಗ್ರಹಿಸಿ ಕಲಬುರಗಿ ಮಹಾನಗರ ಪಾಲಿಕೆ ಗುತ್ತಿಗೆದಾರರ ಅಭಿವೃದ್ಧಿ ಪರ ಕಲ್ಯಾಣ ಸಂಘದ ವತಿಯಿಂದ ಸೋಮವಾರ ಮಹಾನಗರ ಪಾಲಿಕೆ ಕಚೇರಿ ಎದುರು ಧರಣಿ ನಡೆಸಲಾಯಿತು.
2024-25ನೇ ಸಾಲಿನ 15ನೇ ಹಣಕಾಸು ಯೋಜನೆಯ ಎರಡನೇ ಕಂತು ಹಾಗೂ 2025-26ನೇ ಸಾಲಿನ ಮೊದಲನೇ ಕಂತಿನಡಿ ಕೈಗೆತ್ತಿಕೊಂಡು ಪೂರ್ಣಗೊಳಿಸಿರುವ ಕಾಮಗಾರಿಗಳ ಬಿಲ್ಗಳನ್ನು ಸಲ್ಲಿಸಿ ಎರಡು ವರ್ಷ ಕಳೆದರೂ ಯಾವುದೇ ಬಿಲ್ ಪಾವತಿಯಾಗಿಲ್ಲ ಎಂದು ಗುತ್ತಿಗೆದಾರರು ಆರೋಪಿಸಿದರು.
ಸಂಘದ ಅಧ್ಯಕ್ಷ ಎಂ.ಕೆ. ಪಾಟೀಲ ಮಾತನಾಡಿ, ‘ನಾವು ಸಣ್ಣಪುಟ್ಟ ಗುತ್ತಿಗೆದಾರರಾಗಿದ್ದು, ಕಾಮಗಾರಿಗಳಿಗೆ ಅಗತ್ಯವಿರುವ ಜಲ್ಲಿ, ಉಸುಕು, ಸಿಮೆಂಟ್ ಹಾಗೂ ಕಾರ್ಮಿಕರ ಕೂಲಿ ಸೇರಿದಂತೆ ವಿವಿಧ ವೆಚ್ಚಗಳನ್ನು ಸಾಲ ಪಡೆದು ಭರಿಸಿ ಕಾಮಗಾರಿಗಳನ್ನು ಪೂರ್ಣಗೊಳಿಸಿದ್ದೇವೆ. ಸಾಮಾನ್ಯವಾಗಿ ಕಾಮಗಾರಿ ಪೂರ್ಣಗೊಂಡ ಬಳಿಕ ಒಂದು ತಿಂಗಳೊಳಗೆ ಬಿಲ್ ಪಾವತಿಯಾಗುತ್ತಿತ್ತು. ಆದರೆ ಒಂದು ವರ್ಷ ಕಳೆದರೂ ಹಣ ಪಾವತಿಯಾಗದ ಹಿನ್ನೆಲೆಯಲ್ಲಿ ಸಾಲದಾತರಿಂದ ತೀವ್ರ ಒತ್ತಡ ಹಾಗೂ ಕಿರುಕುಳ ಎದುರಿಸುವಂತಾಗಿದೆ’ ಎಂದು ಅಳಲು ತೋಡಿಕೊಂಡರು.
ಈ ಕುರಿತು ಏಪ್ರಿಲ್ 1ರಂದು ಮಹಾನಗರ ಪಾಲಿಕೆ ಆಯುಕ್ತರಿಗೆ ಹಾಗೂ ಮೇ 25ರಂದು ಪೌರಾಡಳಿತ ನಿರ್ದೇಶನಾಲಯದ ನಿರ್ದೇಶಕರಿಗೆ ಮನವಿ ಸಲ್ಲಿಸಿದ್ದರೂ ಯಾವುದೇ ಪರಿಹಾರ ದೊರೆತಿಲ್ಲ ಎಂದು ಸಂಘದ ಪದಾಧಿಕಾರಿಗಳು ತಿಳಿಸಿದರು.
ವಾರದ ಗಡುವು
15ನೇ ಹಣಕಾಸು ಯೋಜನೆಯಡಿ ಅನುದಾನ ಲಭ್ಯವಿಲ್ಲದಿದ್ದರೆ, ಬೇರೆ ಲಭ್ಯವಿರುವ ಅನುದಾನದಿಂದ ಹಣ ಹೊಂದಿಸಿ ಗುತ್ತಿಗೆದಾರರ ಬಾಕಿ ಬಿಲ್ಗಳನ್ನು ಪಾವತಿಸಬೇಕು ಎಂದು ಸಂಘ ಒತ್ತಾಯಿಸಿದೆ.
ಒಂದು ವಾರದೊಳಗೆ ಬಾಕಿ ಬಿಲ್ಗಳನ್ನು ಪಾವತಿಸದಿದ್ದರೆ ಮತ್ತೊಮ್ಮೆ ಪಾಲಿಕೆ ಕಚೇರಿ ಎದುರು ಧರಣಿ ಸತ್ಯಾಗ್ರಹ ನಡೆಸುವುದರ ಜತೆಗೆ, ಪಾಲಿಕೆ ಕಚೇರಿಗೆ ಮುತ್ತಿಗೆ ಹಾಕಿ ಬೀಗ ಹಾಕುವ ಹೋರಾಟ ನಡೆಸಲಾಗುವುದು ಎಂದು ಗುತ್ತಿಗೆದಾರರು ಎಚ್ಚರಿಕೆ ನೀಡಿದರು.
ಧರಣಿಯಲ್ಲಿ ಜಗನ್ನಾಥ ಶೇಗಜಿ, ಸಂಜಯ್ ಆರ್.ಕೆ., ಸಂಘದ ಉಪಾಧ್ಯಕ್ಷರಾದ ದಶರಥ ಬಿ. ಚೌಗಲೆ, ಚಂದ್ರಶೇಖರ ಆರ್. ಬೆಣೂರ, ಬಸವರಾಜ ಜಿ. ಪಾಟೀಲ, ಸಿದ್ದರಾಮ ಎಸ್. ಬೆಳಕೋಟಿ, ಪ್ರಧಾನ ಕಾರ್ಯದರ್ಶಿ ಮನೋಜ್ ಎಸ್. ಜಾಧವ, ಸಹ ಕಾರ್ಯದರ್ಶಿ ಸರಮುದ್ದೀನ್ ಕೆ.ಎಸ್., ಸಂಘಟನಾ ಕಾರ್ಯದರ್ಶಿಗಳಾದ ಹಣಮಂತಪ್ಪ ಎಲ್. ಬಿರಾಳ, ನಾಗರಾಜ ಆಲೂರ ಸೇರಿದಂತೆ ಪದಾಧಿಕಾರಿಗಳು ಹಾಗೂ ಸದಸ್ಯರು ಭಾಗವಹಿಸಿದ್ದರು.



