ಕಲಬುರಗಿಜಿಲ್ಲೆ ಸುದ್ದಿ

ವಚನ ಸಾಹಿತ್ಯ ಸಮ್ಮೇಳನಕ್ಕೆ ಸಿದ್ಧತೆ: ಶೀಘ್ರವೇ ಸಮ್ಮೇಳನಾಧ್ಯಕ್ಷರ ಆಯ್ಕೆ

ಕಲಬುರಗಿ: ಸಮಾಜದಲ್ಲಿ ಮಾನವೀಯ ಸಂಬಂಧಗಳನ್ನು ಮತ್ತಷ್ಟು ಗಟ್ಟಿಗೊಳಿಸುವ ಹಾಗೂ ಬಸವಾದಿ ಶರಣರ ವಿಚಾರಧಾರೆಗಳನ್ನು ಜನರಿಗೆ ತಲುಪಿಸುವ ಉದ್ದೇಶದಿಂದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ಹಾಗೂ ಕರ್ನಾಟಕ ವಚನ ಸಾಹಿತ್ಯ ಅಕಾಡೆಮಿ ಆಶ್ರಯದಲ್ಲಿ ಇದೇ 30ರಂದು ನಗರದಲ್ಲಿ ಕಲಬುರಗಿ ವಿಭಾಗ ಮಟ್ಟದ ಪ್ರಥಮ ವಚನ ಸಾಹಿತ್ಯ ಸಮ್ಮೇಳನ ಆಯೋಜಿಸಲು ನಿರ್ಧರಿಸಲಾಗಿದೆ.

ನಗರದ ಕನ್ನಡ ಭವನದ ಆವರಣದಲ್ಲಿ ಒಂದು ದಿನದ ಸಮ್ಮೇಳನ ನಡೆಸಲು ಮಂಗಳವಾರ ನಡೆದ ಪೂರ್ವಸಿದ್ಧತಾ ಸಭೆಯಲ್ಲಿ ತೀರ್ಮಾನಿಸಲಾಯಿತು. ಕಸಾಪ ಜಿಲ್ಲಾಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ, ಅಕಾಡೆಮಿ ಅಧ್ಯಕ್ಷ ಬಿ.ಎಂ. ಪಾಟೀಲ ಕಲ್ಲೂರ ಹಾಗೂ ಶರಣ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಡಾ. ಮಲ್ಲಿಕಾರ್ಜುನ ವಡಗಣಕೇರಿ ಸಭೆಯಲ್ಲಿ ಮಾತನಾಡಿದರು.

ಇಂದಿನ ಸಮಾಜದಲ್ಲಿ ಮೌಲ್ಯಗಳು ಮತ್ತು ಮಾನವೀಯ ಸಂಬಂಧಗಳು ದುರ್ಬಲವಾಗುತ್ತಿರುವ ಸಂದರ್ಭದಲ್ಲಿ ಶ್ರಮ ಸಂಸ್ಕೃತಿ ಹಾಗೂ ಸಮಸಂಸ್ಕೃತಿಯನ್ನು ಪ್ರತಿಪಾದಿಸಿದ ಬಸವಾದಿ ಶರಣರ ವಿಚಾರಗಳನ್ನು ವ್ಯಾಪಕವಾಗಿ ಪ್ರಚುರಪಡಿಸುವ ಅಗತ್ಯವಿದೆ ಎಂದು ಅವರು ಅಭಿಪ್ರಾಯಪಟ್ಟರು. ವಚನ ಸಾಹಿತ್ಯದ ಮೂಲಕ ಸಮಾಜದಲ್ಲಿ ವೈಚಾರಿಕ ಜಾಗೃತಿ ಮೂಡಿಸುವ ಕೆಲಸ ನಡೆಯಬೇಕಿದೆ ಎಂದರು.

12ನೇ ಶತಮಾನದಲ್ಲಿ ಧ್ವನಿ ಇಲ್ಲದ ಜನರಿಗೆ ಧ್ವನಿ ನೀಡಿದ ಬಸವಾದಿ ಶರಣರು ದೀನ, ದಲಿತರಲ್ಲಿ ಆತ್ಮವಿಶ್ವಾಸ, ಸ್ವಾಭಿಮಾನ ಹಾಗೂ ಸ್ವಾವಲಂಬನೆಯ ಭಾವನೆ ಮೂಡಿಸಿದರು. ದಯೆ, ಮಾನವೀಯತೆ, ಪ್ರೀತಿ, ಕರುಣೆ ಮತ್ತು ವಿಶ್ವಾಸವನ್ನು ತಮ್ಮ ಅನುಭಾವ ಸಾಹಿತ್ಯದ ಪ್ರಮುಖ ಆಶಯಗಳನ್ನಾಗಿಸಿಕೊಂಡ ಶರಣರು ಮಾನವ ಸಂಬಂಧಗಳನ್ನು ಬೆಸೆಯುವ ಕಾರ್ಯ ಮಾಡಿದರು. ವಚನ ಸಾಹಿತ್ಯ ವಿಶ್ವಕ್ಕೆ ಕನ್ನಡ ನೀಡಿದ ವಿಶಿಷ್ಟ ಕೊಡುಗೆ ಎಂದು ಸಭೆಯಲ್ಲಿ ತಿಳಿಸಲಾಯಿತು.

ಈ ಬಾರಿ ಸಮ್ಮೇಳನವನ್ನು ಮತ್ತಷ್ಟು ವೈವಿಧ್ಯಮಯವಾಗಿ ಆಯೋಜಿಸಲು ನಿರ್ಧರಿಸಲಾಗಿದ್ದು, ಸಮ್ಮೇಳನಾಧ್ಯಕ್ಷರು ಹಾಗೂ ಸ್ವಾಗತ ಸಮಿತಿ ಪದಾಧಿಕಾರಿಗಳ ಆಯ್ಕೆಯನ್ನು ಶೀಘ್ರದಲ್ಲೇ ಕೈಗೊಳ್ಳಲಾಗುವುದು. ಅನುಭವ ಮಂಟಪದ ಮಾದರಿಯಲ್ಲಿ ಸಮ್ಮೇಳನ ರೂಪಿಸಲು ಸಿದ್ಧತೆ ನಡೆಸಲಾಗುತ್ತಿದೆ ಎಂದು ಆಯೋಜಕರು ತಿಳಿಸಿದರು.

ಜಿಲ್ಲಾ ಕಸಾಪ ಕಾರ್ಯದರ್ಶಿ ಹಾಗೂ ಕಾರ್ಯಕ್ರಮದ ಕಾರ್ಯಾಧ್ಯಕ್ಷ ಶಿವರಾಜ ಅಂಡಗಿ, ಹಿರಿಯ ಕವಿ ಅಮೃತಪ್ಪ ಅಣೂರು, ಶರಣರಾಜ ಛಪ್ಪರಬಂದಿ, ಜಗದೀಶ ಮರಪಳ್ಳಿ, ವಿದ್ಯಾಸಾಗರ ದೇಶಮುಖ, ರಾಜೇಂದ್ರ ಮಾಡಬೂಳ, ಬಾಬುರಾವ ಪಾಟೀಲ, ಗಣೇಶ ಚಿನ್ನಾಕಾರ, ಸೋಮಶೇಖರಯ್ಯ ಹೊಸಮಠ, ಕಲ್ಯಾಣಕುಮಾರ ಶೀಲವಂತ, ಮಹೇಶ ಚಿಂತನ್‌ಪಳ್ಳಿ, ಹಣಮಂತರಾವ ಪೆಂಚನಪಳ್ಳಿ, ಶಿವಾನಂದ ಪೂಜಾರಿ, ಧರ್ಮರಾಜ ಜವಳಿ, ದಿನೇಶ ಮದಕರಿ, ಶಕುಂತಲಾ ಪಾಟೀಲ, ಜಯಶ್ರೀ ಜಮಾದಾರ, ರಮೇಶ ಬಡಿಗೇರ, ಸಿದ್ಧಲಿಂಗ ಬಾಳಿ ಸೇರಿದಂತೆ ಹಲವರು ಸಭೆಯಲ್ಲಿ ಭಾಗವಹಿಸಿದ್ದರು.

Related Articles

Leave a Reply

Your email address will not be published. Required fields are marked *

Back to top button